ಮಂಗಳವಾರ, ಸೆಪ್ಟೆಂಬರ್ 28, 2021
24 °C
ಸಂಸದೀಯ ಸ್ಥಾಯಿ ಸಮಿತಿಯ ಮುಂದೆ ಹಾಜರಾದ ಫೇಸ್‌ಬುಕ್‌, ಗೂಗಲ್‌ ಅಧಿಕಾರಿಗಳು

ಸರ್ಕಾರದ ಸೂಚನೆ, ನ್ಯಾಯಾಲಯದ ಆದೇಶ ಪಾಲಿಸಲು ಸಮಿತಿ ಸೂಚನೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಸಾಮಾಜಿಕ ಮಾಧ್ಯಮ ದುರುಪಯೋಗದ ಕುರಿತು ಫೇಸ್‌ಬುಕ್ ಮತ್ತು ಗೂಗಲ್ ಪ್ರತಿನಿಧಿಗಳು ಮಂಗಳವಾರ ಮಾಹಿತಿ ತಂತ್ರಜ್ಞಾನದ ಸಂಸದೀಯ ಸ್ಥಾಯಿ ಸಮಿತಿಯ ಮುಂದೆ ಹಾಜರಾಗಿದ್ದು, ಹೊಸ ಐ.ಟಿ ನಿಯಮಗಳು, ಸರ್ಕಾರದ ಸೂಚನೆಗಳು ಮತ್ತು ನ್ಯಾಯಾಲಯದ ಆದೇಶಗಳನ್ನು ಪಾಲಿಸುವಂತೆ ಈ ಸಂಸ್ಥೆಗಳಿಗೆ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ಅಧ್ಯಕ್ಷತೆಯ ಸಂಸದೀಯ ಸಮಿತಿಯು ಫೇಸ್‌ಬುಕ್ ಮತ್ತು ಗೂಗಲ್ ಅಧಿಕಾರಿಗಳಿಗೆ ಖುದ್ದು ಹಾಜರಾಗಿ ವಿವರಣೆ ನೀಡುವಂತೆ ನೋಟಿಸ್‌ ನೀಡಿತ್ತು.

ಫೇಸ್‌ಬುಕ್‌ನ ಭಾರತೀಯ ಸಾರ್ವಜನಿಕ ನೀತಿ ನಿರ್ದೇಶಕ ಶಿವನಾಥ್ ತುಕ್ರಲ್ ಮತ್ತು ಸಾಮಾನ್ಯ ಸಲಹೆಗಾರರಾದ ನಮ್ರತಾ ಸಿಂಗ್ ಅವರು ಮಂಗಳವಾರ ಸಮಿತಿಯ ಮುಂದೆ ಹಾಜರಾದರು.

ಫೇಸ್‌ಬುಕ್‌ನ ಭಾರತೀಯ ಸಾರ್ವಜನಿಕ ನೀತಿ ನಿರ್ದೇಶಕ ಶಿವನಾಥ್ ತುಕ್ರಲ್ ಮತ್ತು ಸಾಮಾನ್ಯ ಸಲಹೆಗಾರರಾದ ನಮ್ರತಾ ಸಿಂಗ್, ಗೂಗಲ್ ಪ್ರತಿನಿಧಿಗಳಾಗಿ ಅದರ ಭಾರತೀಯ ಮುಖ್ಯಸ್ಥ (ಸರ್ಕಾರಿ ವ್ಯವಹಾರಗಳು ಮತ್ತು ಸಾರ್ವಜನಿಕ ನೀತಿ) ಅಮನ್ ಜೈನ್ ಮತ್ತು ನಿರ್ದೇಶಕರಾದ (ಕಾನೂನು) ಗೀತಾಂಜಲಿ ದುಗ್ಗಲ್‌ ಸಮಿತಿ ಮುಂದೆ ಹಾಜರಾಗಿದ್ದರು.

ಅಸ್ತಿತ್ವದಲ್ಲಿರುವ ದತ್ತಾಂಶ ಸಂರಕ್ಷಣೆ ಮತ್ತು ಗೌಪ್ಯತೆ ನೀತಿಯ ಕಾರ್ಯವಿಧಾನದಲ್ಲಿ ಲೋಪದೋಷಗಳಿವೆ ಎಂದು ಈ ಸಂಸ್ಥೆಗಳ ಪ್ರತಿನಿಧಿಗಳಿಗೆ ತಿಳಿಸಲಾಗಿದೆ ಮತ್ತು ಅವರ ಬಳಕೆದಾರರ ದತ್ತಾಂಶ ಗೋಪ್ಯತೆ ಮತ್ತು ದತ್ತಾಂಶ ಸುರಕ್ಷತೆ ಕಾಪಾಡಲು ಕಟ್ಟುನಿಟ್ಟಿನ ಸುರಕ್ಷತಾ ಕ್ರಮಗಳನ್ನು ಜಾರಿಗೆ ತರಲು ತಿಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸಾಮಾಜಿಕ ಮಾಧ್ಯಮಗಳ ವೇದಿಕೆಗಳಲ್ಲಿ ಮಹಿಳಾ ಬಳಕೆದಾರರ ಗೋಪ್ಯತೆ ಬಗ್ಗೆ ಅಧ್ಯಕ್ಷ ತರೂರ್ ಕಳವಳ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಹಲವಾರು ಮಹಿಳಾ ಸಂಸದರಿಂದಲೂ ದೂರುಗಳು ಬಂದಿವೆ ಎಂದು ಅವರು ಹೇಳಿದರು ಎಂದು ಮೂಲಗಳು ತಿಳಿಸಿವೆ.

ನಾಗರಿಕರ ಹಕ್ಕುಗಳನ್ನು ಕಾಪಾಡುವುದು ಮತ್ತು ಸಾಮಾಜಿಕ ಮಾಧ್ಯಮ/ ಆನ್‌ಲೈನ್ ವೇದಿಕೆಗಳ ದುರುಪಯೋಗ ತಡೆಯುವ ಸಂಬಂಧ ಸಂಸದೀಯ ಸಮಿತಿ ಸಭೆಯಲ್ಲಿ ಚರ್ಚಿಸಲಾಯಿತು.

ಫೇಸ್‌ಬುಕ್ ಪ್ರತಿನಿಧಿಗಳು ಕೋವಿಡ್‌ ಮಾರ್ಗಸೂಚಿಯಂತೆ ತಮ್ಮ ಕಂಪನಿಯ ತಮ್ಮ ಅಧಿಕಾರಿಗಳಿಗೆ ವೈಯಕ್ತಿಕವಾಗಿ ಸಭೆಗಳಲ್ಲಿ ಭಾಗವಹಿಸಲು ಅನುಮತಿ ನೀಡುವುದಿಲ್ಲ. ವಿಡಿಯೊ ಕಾನ್ಫರೆನ್ಸ್‌ ಮೂಲಕ ಸಮಿತಿ ಮುಂದೆ ಹಾಜರಾಗಲು ಅನುಮತಿ ಕೇಳಿದ್ದರು. ಆದರೆ ಅಧಿಕಾರಿಗಳು ಖುದ್ದಾಗಿ ಹಾಜರಾಗಬೇಕು ಎಂದು ಅಧ್ಯಕ್ಷ ಶಶಿ ತರೂರ್ ಫೇಸ್‌ಬುಕ್‌ಗೆ ಸ್ಪಷ್ಟವಾಗಿ ಸೂಚಿಸಿದ್ದರು.

ಟ್ವಿಟರ್ ಅಧಿಕಾರಿಗಳು ಸಮಿತಿಯ ಮುಂದೆ ಹಾಜರಾದ ಕೆಲವೇ ದಿನಗಳಲ್ಲಿ ಫೇಸ್‌ಬುಕ್ ಮತ್ತು ಗೂಗಲ್ ಪ್ರತಿನಿಧಿಗಳ ವಿಚಾರಣೆ ನಡೆಸಲಾಗಿದೆ.

ಕಳೆದ ಸಭೆಯಲ್ಲಿ, ‌ನೆಲದ ಕಾನೂನು ಸರ್ವೋಚ್ಚವಾಗಿದೆ. ಅದನ್ನು ಪಾಲಿಸಬೇಕು ಎಂದು ಸಮಿತಿಯ ಸದಸ್ಯರು ಟ್ವಿಟರ್‌ಗೆ ಸ್ಪಷ್ಟವಾಗಿ ತಿಳಿಸಿದ್ದರು.

ಐ.ಟಿ ಕಾಯ್ದೆ ಕುರಿತಾಗಿ ಸಂಸದೀಯ ಸಮಿತಿಯು ಮುಂದಿನ ವಾರಗಳಲ್ಲಿ ಯೂಟ್ಯೂಬ್ ಮತ್ತು ಇತರ ಸಾಮಾಜಿಕ ಮಾಧ್ಯಮ ವೇದಿಕೆಗಳ ಮಧ್ಯವರ್ತಿಗಳನ್ನು ವಿಚಾರಣೆಗೆ ಕರೆಸಿಕೊಳ್ಳಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು