ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ, DH ಸಹಿತ 10 ಮಾಧ್ಯಮ ಸಂಸ್ಥೆಗಳಿಗೆ ಫ್ಯಾಕ್ಟ್-ಚೆಕ್ ಫೆಲೋಶಿಪ್

Last Updated 13 ಡಿಸೆಂಬರ್ 2022, 9:26 IST
ಅಕ್ಷರ ಗಾತ್ರ

ಹೊಸದಿಲ್ಲಿ: ಇಂಟರ್ನೆಟ್ ಆ್ಯಂಡ್ ಮೊಬೈಲ್ ಅಸೋಸಿಯೇಶನ್ ಆಫ್ ಇಂಡಿಯಾ (ಐಎಎಂಎಐ) ಮತ್ತು ಮೆಟಾ (ಫೇಸ್‌ಬುಕ್‌ನ ಮಾತೃ ಸಂಸ್ಥೆ) ನೆರವಿನೊಂದಿಗೆ ಜಾಗರಣ್ ನ್ಯೂ ಮೀಡಿಯಾದ ಫ್ಯಾಕ್ಟ್‌ಚೆಕ್ ವಿಭಾಗವಾದ 'ವಿಶ್ವಾಸ್ ನ್ಯೂಸ್' ಒಂದು ವರ್ಷ ನಡೆಸಿದ ಫ್ಯಾಕ್ಟ್‌ಚೆಕ್ ಮತ್ತು ಸುದ್ದಿ ದೃಢೀಕರಣ ತರಬೇತಿ ಫೆಲೋಶಿಪ್ ಇತ್ತೀಚೆಗೆ ಸಂಪನ್ನಗೊಂಡಿತು.

ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್ ಸೇರಿದಂತೆ ದೇಶದ 10 ಪ್ರಮುಖ ಮಾಧ್ಯಮ ಸಂಸ್ಥೆಗಳ 20 ಪ್ರತಿನಿಧಿಗಳಿಗೆ ನವೆಂಬರ್ 30ರಂದು ಗುರುಗ್ರಾಮದಲ್ಲಿರುವ ಮೆಟಾ ಇಂಡಿಯಾ ಕಚೇರಿಯಲ್ಲಿ ದಿನಪೂರ್ತಿ ನಡೆದ ಸಮಾವೇಶದ ಸಂದರ್ಭದಲ್ಲಿ ಫ್ಯಾಕ್ಟ್‌ಚೆಕಿಂಗ್ ಹಾಗೂ ಸುದ್ದಿಯ ದೃಢೀಕರಣ ಫೆಲೋಶಿಪ್‌ನ ಪ್ರಮಾಣಪತ್ರ ವಿತರಿಸಲಾಯಿತು.

ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಜಾಗರಣ್ ನ್ಯೂ ಮೀಡಿಯಾ ಸಿಇಒ ಭರತ್ ಗುಪ್ತಾ, "ಈ ಕಾರ್ಯಕ್ರಮದ ಮೂಲಕ ಮೆಟಾ ಹಾಗೂ ಐಎಎಂಎಐ ಸಹಯೋಗದಲ್ಲಿ ದೇಶದ ಪ್ರಮುಖ ಮಾಧ್ಯಮ ಸಂಸ್ಥೆಗಳ ಪತ್ರಕರ್ತರಿಗೆ ಫ್ಯಾಕ್ಟ್ ಚೆಕ್ ತರಬೇತಿಗಾಗಿ ಕೈಜೋಡಿಸಿರುವುದು ಹೆಮ್ಮೆಯ ವಿಚಾರ. ಈಗ ಪ್ರಮಾಣಪತ್ರ ಪಡೆದಿರುವ 20 ಪತ್ರಕರ್ತರು ನ್ಯೂಸ್ ರೂಂ 2.0 ಪರಿವರ್ತನೆಯ ಮುಂದಾಳುತ್ವ ವಹಿಸುವರೆಂಬ ವಿಶ್ವಾಸವಿದೆ. ಸುದ್ದಿ ಜಗತ್ತನ್ನೇ ತಲ್ಲಣಗೊಳಿಸುವ ಸುಳ್ಳು ಸಂದೇಶ, ತಪ್ಪು ಮಾಹಿತಿಗಳ ಸಾಂಕ್ರಾಮಿಕವನ್ನು ಗುರುತಿಸಿ, ದೃಢೀಕರಿಸಲು ಮತ್ತು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಈ ಸ್ವಯಂಸೇವಕರ ಜ್ಞಾನವನ್ನು, ಮಾಹಿತಿಯನ್ನು, ಟೂಲ್‌ಗಳನ್ನು ಮತ್ತು ಕಾರ್ಯತಂತ್ರಗಳನ್ನು ಸಮರ್ಥವಾಗಿ ಬಳಸಿಕೊಳ್ಳುವುದಕ್ಕಾಗಿ ಅನ್ಯ ಮಾಧ್ಯಮಗಳಿಗೆ ನೆರವು ನೀಡಲು ಹರ್ಷವಾಗುತ್ತಿದೆ" ಎಂದರು.

ಜಾಗರಣ್ ಬಳಗದ ಪ್ರಧಾನ ಸಂಪಾದಕ ರಾಜೇಶ್ ಉಪಾಧ್ಯಾಯ ಅವರು ಮಾತನಾಡಿ, "ವಿಶ್ವಾಸದ ಪ್ರತಿರೂಪ ವಿಶ್ವಾಸ್ ನ್ಯೂಸ್. ವಿಶ್ವಾಸಾರ್ಹ ಮತ್ತು ನಂಬಿಕೆಗೆ ಅರ್ಹವಾಗಿರುವ ಸುದ್ದಿಗಳನ್ನು ಓದುಗರಿಗೆ ನೀಡಲು ಜಾಗರಣ್ ನ್ಯೂ ಮೀಡಿಯಾ ಶ್ರಮಿಸುತ್ತಿದೆ. ಈ ತರಬೇತಿ ಕಾರ್ಯಕ್ರಮದ ಮೂಲಕ, ಸಮುದಾಯದಲ್ಲಿ ಹರಡುತ್ತಿರುವ ಸುಳ್ಳು, ನಕಲಿ ಸುದ್ದಿಗಳನ್ನು ಗುರುತಿಸಿ, ಮರುಪರಿಶೀಲನೆ ಮಾಡಿ, ಸತ್ಯಾಂಶ ಬಯಲಿಗೆಳೆಯುವ ವಿಧಾನವನ್ನು ನಾವೂ ಕಲಿತು ನಮ್ಮ ಸಹಯೋಗಿ ಮಾಧ್ಯಮಮಿತ್ರರಿಗೂ ಕಲಿಸಿದ್ದೇವೆ. ಇದಕ್ಕೆ ಅವಕಾಶ ನೀಡಿದ ನಮ್ಮ ಪಾಲುದಾರರಾದ ಮೆಟಾ ಹಾಗೂ ಐಎಎಂಎಐ ಅವರಿಗೆ ಧನ್ಯವಾದಗಳು" ಎಂದರು.

ಸುಳ್ಳು ಮಾಹಿತಿ ಮತ್ತು ತಪ್ಪು ಮಾಹಿತಿಗಳನ್ನು ಸ್ವತಂತ್ರವಾಗಿ ಪತ್ತೆ ಮಾಡಿ, ಹರಡದಂತೆ ತಡೆಯಲು ಭಾರತದಲ್ಲಿರುವ ಮುಖ್ಯವಾಹಿನಿಯ ಸುದ್ದಿ ಸಂಸ್ಥೆಗಳನ್ನು ಸಶಕ್ತಗೊಳಿಸುವುದು ಮತ್ತು ಈ ಸುಳ್ಳು ಸುದ್ದಿಗಳ ಹರಡುವಿಕೆಯಿಂದಾಗುವ ಕೆಟ್ಟ ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶ. ದೇಶದ 10 ಪ್ರಮುಖ ಸುದ್ದಿ ಸಂಸ್ಥೆಗಳಿಂದ ತಲಾ ಇಬ್ಬರು ಫೆಲೋಗಳನ್ನು ಆಯ್ಕೆ ಮಾಡಿ ತರಬೇತಿ ನೀಡಲಾಗಿತ್ತು. ತರಬೇತಿ ಸಂದರ್ಭದಲ್ಲಿ ವಿಶ್ವಾಸ್ ನ್ಯೂಸ್ ಸಂಸ್ಥೆಯ ತರಬೇತುದಾರರಲ್ಲದೆ, ಅಂತರರಾಷ್ಟ್ರೀಯ ಮಟ್ಟದ ತಜ್ಞರಿಂದಲೂ ತರಬೇತಿ ಕೊಡಿಸಲಾಗಿತ್ತು. ಐದು ದಿನಗಳ ಕಾರ್ಯಾಗಾರದ ಬಳಿಕ ವರ್ಷಪೂರ್ತಿ ದಿನಂಪ್ರತಿ ವಿವಿಧ ರೂಪಗಳಲ್ಲಿ ತರಬೇತಿ ನೀಡಲಾಗಿತ್ತು. 50ಕ್ಕೂ ಹೆಚ್ಚು ಫ್ಯಾಕ್ಟ್ ಚೆಕಿಂಗ್ ಟೂಲ್‌ಗಳ ಬಗ್ಗೆ ಮಾಹಿತಿ ನೀಡಲಾಗಿದ್ದು, 20 ಮಂದಿಯನ್ನೂ ವೃತ್ತಿಪರ ಫ್ಯಾಕ್ಟ್-ಚೆಕರ್‌ಗಳಾಗಿ ರೂಪಿಸುವ ಗುರಿ ಹೊಂದಿತ್ತು.

ಪ್ರಜಾವಾಣಿಯಿಂದ ಡಿಜಿಟಲ್ ವಿಭಾಗದ ಅವಿನಾಶ್ ಬಿ., ಡೆಕ್ಕನ್ ಹೆರಾಲ್ಡ್‌ನಿಂದ ಅನುಪಾ ಕುಂಜೂರ್ ಅವರು ಫೆಲೋಶಿಪ್ ಪ್ರಮಾಣಪತ್ರ ಪಡೆದರೆ, ದಿ ಇಂಡಿಯನ್ ಎಕ್ಸ್‌ಪ್ರೆಸ್, ದಿ ಹಿಂದು, ಹಿಂದುಸ್ತಾನ್ ಟೈಮ್ಸ್, ಏಷಿಯಾನೆಟ್ ನ್ಯೂಸ್, ಮನೋರಮಾ ಆನ್‌ಲೈನ್, ಲೋಕಮತ್, ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ ಮತ್ತು ಮಾತೃಭೂಮಿ ಮಾಧ್ಯಮ ಸಂಸ್ಥೆಗಳ ಪ್ರತಿನಿಧಿಗಳಿಗೂ ಪ್ರಮಾಣಪತ್ರ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT