ಭಾನುವಾರ, ಮಾರ್ಚ್ 7, 2021
32 °C
ರಜನಿಕಾಂತ್ ಅಭಿಮಾನಿಗಳ ಸಂಘ ‘ರಜನಿ ಮಕ್ಕಳ್‌ ಮಂಡಳಿ’ ಪ್ರಕಟಣೆ

ಅಭಿಮಾನಿಗಳು ಯಾವ ಪಕ್ಷವನ್ನಾದರೂ ಸೇರಬಹುದು: ರಜನಿ ಮಕ್ಕಳ್ ಮಂಡಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚೆನ್ನೈ: ‘ಸೂಪರ್‌ಸ್ಟಾರ್ ರಜನಿಕಾಂತ್‌ ಅಭಿಮಾನಿಗಳು, ರಜನಿ ಮಕ್ಕಳ್ ಮಂಡಳಿ(ಆರ್‌ಎಂಎಂ) ಸಂಘಕ್ಕೆ ರಾಜೀನಾಮೆ ನೀಡಿ ಮುಂದೆ ನಡೆಯುವ ಚುನಾವಣೆಯಲ್ಲಿ ಯಾವುದೇ ರಾಜಕೀಯ ಪಕ್ಷವನ್ನು ಸೇರಬಹುದು‘ ಎಂದು ಆರ್‌ಎಂಎಂ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಮೂಲಕ ತಮ್ಮ ನೆಚ್ಚಿನ ನಟ ರಜನಿಕಾಂತ್‌ ಅವರ ರಾಜಕೀಯದ ಉದ್ದೇಶವನ್ನು ಸ್ಪಷ್ಟಪಡಿಸುವ ಜತೆಗೆ, ಇದೇ ಏಪ್ರಿಲ್-ಮೇ ತಿಂಗಳಲ್ಲಿ ನಡೆಯುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಅವರು ಯಾವುದೇ ರಾಜಕೀಯ ಪಕ್ಷವನ್ನು ಬೆಂಬಲಿಸುವುದಿಲ್ಲ ಎಂಬ ಸುಳಿವನ್ನೂ ನೀಡಿದೆ.

‘ಯಾವುದೇ ರಾಜಕೀಯ ಪಕ್ಷ ಸೇರಲು ಆಸಕ್ತಿ ಹೊಂದಿರದ ರಜನಿ ಮಕ್ಕಳ್‌ ಮಂಡಳಿ (ಆರ್‌ಎಂಎಂ), ತಮ್ಮ ಸದಸ್ಯರು ಸಂಘಕ್ಕೆ ರಾಜೀನಾಮೆ ನೀಡಿ, ಯಾವ ಪಕ್ಷಕ್ಕೆ ಬೇಕಾದರೂ ಸೇರಬಹುದು. ಸದಸ್ಯರು ಯಾವುದೇ ರಾಜಕೀಯಪಕ್ಷಗಳಿಗೆ ಸೇರಿದರೂ, ಅವರು, ಪ್ರೀತಿಯ ನಾಯಕ ರಜನಿಕಾಂತ್ ಅಭಿಮಾನಿಗಳು ಎಂಬುದನ್ನು ಮರೆಯಬಾರದು‘ ಎಂದು ಆರ್‌ಎಂಎಂ ವ್ಯವಸ್ಥಾಪಕ ವಿ.ಎಂ. ಸುಧಾಕರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಭಾನುವಾರ ಆರ್‌ಎಂಎಂನ ಮೂವರು ಜಿಲ್ಲಾ ಕಾರ್ಯದರ್ಶಿಗಳು ಡಿಎಂಕೆ ಪಕ್ಷಕ್ಕೆ ಸೇರ್ಪಡೆಯಾದ ನಂತರ ಸುಧಾಕರ್ ಅವರ ಹೇಳಿಕೆ ಹೊರಬಿದ್ದಿದೆ.

‌ತಮಿಳುನಾಡಿನಲ್ಲಿ ತನ್ನ ಅಧಿಪತ್ಯ ಸ್ಥಾಪಿಸಲು ಸಿದ್ಧತೆ ನಡೆಸುತ್ತಿದ್ದ ಬಿಜೆಪಿ, ಅದರ ಭಾಗವಾಗಿ ರಜನಿಕಾಂತ್ ಅವರ ಅಭಿಮಾನಿಗಳನ್ನು ಸೆಳೆಯಲು ಪ್ರಯತ್ನಿಸುತ್ತಿತ್ತು.  ಇದಕ್ಕೂ ಮೊದಲು  ನಟ ರಜನಿಕಾಂತ್ ರಾಜಕೀಯ ಪಕ್ಷವನ್ನು ಪ್ರಾರಂಭಿಸುವುದಾಗಿ ಘೋಷಿಸಿದ ಮೇಲೆ, ಅವರ ಅಭಿಮಾನಿಗಳು ಡಿಎಂಕೆ ಬಗ್ಗೆ ಸಾಕಷ್ಟು ಟೀಕಿಸಿದ್ದರು. ಈ ವೇಳೆ ರಜನಿ ಅಭಿಮಾನಿಗಳು ತಮ್ಮ ಪಕ್ಷವನ್ನು ಬೆಂಬಲಿಸಬಹುದೆಂದು ಬಿಜೆಪಿ ನಿರೀಕ್ಷಿಸಿತ್ತು. ಆದರೆ, ಈ ಎಲ್ಲ ನಿರೀಕ್ಷೆಗಳನ್ನು  ಭಾನುವಾರ ರಜನಿ ಅಭಿಮಾನಿಗಳ ಸಂಘ ಹೊರಡಿಸಿದ ಈ ಪ್ರಕಟಣೆ  ಹುಸಿಗೊಳಿಸಿದಂತೆ ಕಾಣುತ್ತಿದೆ.

ಈ ನಡುವೆ ನಟ ರಜನಿಕಾಂತ್ ಅವರು ಸೋಮವಾರ ‘ನನ್ನ ರಾಜಕೀಯ ಪ್ರವೇಶದ ವಿಷಯ ಮುಗಿದ ಅಧ್ಯಾಯ’ ಎಂದು ಹೇಳುವ ಮೂಲಕ ತಾವು ರಾಜಕೀಯ ಸೇರುವುದಿಲ್ಲ ಎಂಬುದನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ಅಭಿಮಾನಿಗಳು, ತಮ್ಮ ಇಚ್ಛೆಯಂತೆ ಯಾವುದೇ ಪಕ್ಷವನ್ನು ಸೇರಬಹುದು ಎಂದು ಹೇಳುವ ಮೂಲಕ ತಾವು ಯಾವುದೇ ರಾಜಕೀಯ ನಿಲುವನ್ನು ತೆಗೆದುಕೊಳ್ಳುವುದಿಲ್ಲ ಎಂದು ಸೂಚಿಸುತ್ತಿರುವುದಾಗಿ’ ರಾಜಕೀಯ ವಿಶ್ಲೇಷಕರೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ: 

ರಜನಿಕಾಂತ್ ಅವರು ಕಳೆದ ವರ್ಷದ ಡಿಸೆಂಬರ್ 29ರಂದು, ಅನಾರೋಗ್ಯದ ಕಾರಣ ನೀಡಿ, ತನಗೆ ರಾಜಕೀಯ ಪಕ್ಷ ಆರಂಭಿಸುವುದಿಲ್ಲ ಎಂದು ಪ್ರಕಟಿಸಿದ್ದರು. ಜನವರಿ 11ರಂದು, ರಾಜಕೀಯ ಸೇರುವ ತಮ್ಮ ನಿರ್ಧಾರವನ್ನು ಮರುಪರಿಶೀಲಸು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದರು.

ಇದನ್ನೂ ಓದಿ: 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು