ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರದ ಮೂರು ಕೃಷಿ ಕಾಯ್ದೆಗಳ ಜಾರಿಗೆ ಸುಪ್ರೀಂ ಕೋರ್ಟ್‌ ತಡೆ: ಮಾತುಕತೆಗೆ ಸಮಿತಿ

Last Updated 12 ಜನವರಿ 2021, 19:14 IST
ಅಕ್ಷರ ಗಾತ್ರ

ನವದೆಹಲಿ:‘ಕೃಷಿ ಸುಧಾರಣೆ’ಯ ಮೂರು ಕಾಯ್ದೆಗಳ ಜಾರಿಗೆ ಮುಂದಿನ ಆದೇಶದವರೆಗೆ ಸುಪ್ರೀಂ ಕೋರ್ಟ್‌ ಮಂಗಳವಾರ ತಡೆ ನೀಡಿದೆ. ಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆಯಿಂದ ಉಂಟಾಗಿರುವ ಬಿಕ್ಕಟ್ಟು ಪರಿಹಾರಕ್ಕೆ ನಾಲ್ವರು ಸದಸ್ಯರ ಸಮಿತಿಯನ್ನೂ ರಚಿಸಿದೆ.

ತಡೆ ನೀಡಿಕೆಯನ್ನು ರೈತರು ಸ್ವಾಗತಿಸಿದ್ದಾರೆ. ಆದರೆ, ಸಮಿತಿ ರಚನೆಯ ಬಗ್ಗೆ ಅವರು ಸಂತೃಪ‍್ತರಾಗಿಲ್ಲ. ಸಮಿತಿಯ ಮುಂದೆ ಹೋಗುವುದೂ ಇಲ್ಲ ಎಂದು ಹೇಳಿದ್ದಾರೆ.

ಮೂರೂ ಕಾಯ್ದೆಗಳ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆಯಾಗಿರುವ ಹಲವು ಅರ್ಜಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎಸ್‌.ಎ.ಬೊಬಡೆ, ನ್ಯಾಯಮೂರ್ತಿಗಳಾದ ಎ.ಎಸ್. ಬೋಪಣ್ಣ ಮತ್ತು ವಿ. ರಾಮಸುಬ್ರಮಣಿಯನ್‌ ಅವರ ಪೀಠವು ನಡೆಸಿತು. ಬಿಕ್ಕಟ್ಟು ಪರಿಹಾರಕ್ಕೆ ನೇಮಿಸಿರುವ ಸಮಿತಿಯು ರೈತರ ಸಮಸ್ಯೆಗಳನ್ನು ಆಲಿಸಲಿದೆ ಎಂದು ಪೀಠವು ಹೇಳಿದೆ.

ಬಿಕ್ಕಟ್ಟು ಪರಿಹಾರಕ್ಕೆ ರೈತರು ಸಹಕರಿಸಬೇಕು ಎಂದು ವಿಚಾರಣೆಯ ವೇಳೆ ನ್ಯಾಯಮೂರ್ತಿಗಳು ಹೇಳಿದ್ದಾರೆ. ವಿವಾದಾತ್ಮಕ ಕಾಯ್ದೆಗಳಿಂದ ಉಂಟಾಗಿರುವ ಬಿಕ್ಕಟ್ಟು ಪರಿಹಾರಕ್ಕೆ ಸಮಿತಿ ರಚಿಸುವುದರಿಂದ ಜಗತ್ತಿನ ಯಾವ ಶಕ್ತಿಯೂ ನ್ಯಾಯಾಲಯವನ್ನು ತಡೆಯಲಾಗದು. ರೈತರು ಸಮಿತಿಯ ಮುಂದೆಹಾಜರಾಗಿ ತಮ್ಮ ಸಮಸ್ಯೆ ಹೇಳಿಕೊಳ್ಳಬೇಕು ಎಂದು ಪೀಠವು ಹೇಳಿದೆ.

‘ಭಾರತದ ಜನರ ಜೀವ ಮತ್ತು ಆಸ್ತಿಯ ರಕ್ಷಣೆ ಬಗ್ಗೆ ನಮಗೆ ಕಾಳಜಿ ಇದೆ. ಹಾಗಾಗಿಯೇ ಈ ಸಮಸ್ಯೆಯನ್ನು ಪರಿಹರಿಸಲು ನಾವು ಬಯಸಿದ್ದೇವೆ. ಸಮಸ್ಯೆಗೆ ನಿಜವಾಗಿಯೂ ಪರಿಹಾರ ಬೇಕು ಎಂದು ಬಯಸುವವರು ಸಮಿತಿಯ ಮುಂದೆ ವಿಷಯ ಹೇಳಿಕೊಳ್ಳಬೇಕು’ ಎಂದು ವಿಡಿಯೊ ಕಾನ್ಫರೆನ್ಸ್‌ ಮೂಲಕ ನಡೆದ ವಿಚಾರಣೆಯಲ್ಲಿ ಪೀಠವು ಸೂಚಿಸಿದೆ.

‘ಇದು ರಾಜಕಾರಣ ಅಲ್ಲ. ರಾಜಕೀಯ ಮತ್ತು ನ್ಯಾಯಾಂಗದ ನಡುವೆ ವ್ಯತ್ಯಾಸ ಇದೆ. ಹಾಗಾಗಿ ನೀವು ಸಹಕರಿಸಬೇಕು’ ಎಂದು ಪ್ರತಿಭಟನೆ ನಡೆಸುತ್ತಿರುವ ಸಂಘಟನೆಗಳಿಗೆ ಹೇಳಿತು.

ರೈತರ ಪ್ರತಿಭಟನೆಯನ್ನು ನಿರ್ವಹಿಸಿದ ರೀತಿಯ ಬಗ್ಗೆ ಕೇಂದ್ರದ ವಿರುದ್ಧ ಸುಪ್ರೀಂ ಕೋರ್ಟ್‌ ಸೋಮವಾರ ಅಸಮಾಧಾನ ವ್ಯಕ್ತಪಡಿಸಿತ್ತು. ಕೇಂದ್ರ ಮತ್ತು ರೈತ ಸಂಘಟನೆಗಳ ನಡುವೆ ಎಂಟು ಸುತ್ತಿನ ಮಾತುಕತೆಗಳು ನಡೆದಿವೆ. ಆದರೆ, ಯಾವುದೇ ಪ್ರಯೋಜನ ಆಗಿಲ್ಲ. ನ.28ರಿಂದ ಪ್ರತಿಭಟನೆ ನಡೆಸುತ್ತಿರುವ ರೈತರು ಮೂರೂ ಕಾಯ್ದೆಗಳನ್ನು ‍ವಾಪ‍ಸ್‌ ಪಡೆಯಬೇಕು ಎಂಬ ಬೇಡಿಕೆಯಿಂದ ಒಂದಿಂಚೂ ಹಿಂದೆ ಸರಿದಿಲ್ಲ.

ಮುಖ್ಯನ್ಯಾಯಮೂರ್ತಿ ಏನಂದರು?: ವಿಚಾರಣೆ ವೇಳೆ ಅಭಿಪ್ರಾಯ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್‌ನ ಮುಖ್ಯನ್ಯಾಯಮೂರ್ತಿ, 'ಕಾನೂನುಗಳ ಸಿಂಧುತ್ವದ ಬಗ್ಗೆ ಮತ್ತು ಪ್ರತಿಭಟನೆಯಿಂದಾಗಿ ಜನಜೀವನಕ್ಕೆ ಆಗುತ್ತಿರುವ ತೊಂದರೆ ಬಗ್ಗೆ ನಾವು ಕಾಳಜಿ ಹೊಂದಿದ್ದೇವೆ. ನಮ್ಮ ಅಧಿಕಾರ ವ್ಯಾಪ್ತಿಗೆ ಒಳಪಟ್ಟು ಈ ಸಮಸ್ಯೆಯನ್ನು ಪರಿಹರಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ನಾವು ಒಂದೋ ಕಾಯ್ದೆಯನ್ನು ಅಮಾನತುಗೊಳಿಸಬಹುದು. ಅಥವಾ ಸಮಿತಿಯನ್ನು ರಚಿಸಬಹುದು. ಈ ಅಧಿಕಾರ ನಮಗಿದೆ,' ಎಂದು ಹೇಳಿದರು.

ಕೃಷಿ ಕಾಯ್ದೆಯನ್ನು ಪ್ರಶ್ನೆ ಮಾಡಿರುವ ವಕೀಲ ಎಂ.ಎಲ್.ಶರ್ಮಾ ಈ ವೇಳೆ ಮಧ್ಯಪ್ರವೇಶಿಸಿ, 'ನ್ಯಾಯಾಲಯ ರಚಿಸುವ ಯಾವುದೇ ಸಮಿತಿಯ ಮುಂದೆ ಹಾಜರಾಗುವುದಿಲ್ಲ ಎಂದು ರೈತರು ಹೇಳಿದ್ದಾರೆ,' ಎಂದು ನ್ಯಾಯಾಲಯಕ್ಕೆ ಹೇಳಿದರು.

'ಈ ಸಮಿತಿ ನಮಗಾಗಿ. ಸಮಸ್ಯೆಯನ್ನು ಪರಿಹರಿಸುವ ನಿರೀಕ್ಷೆಯಿರುವ ನೀವೆಲ್ಲರೂ ಈ ಸಮಿತಿಯ ಮುಂದೆ ಹೋಗಬೇಕು. ಅದು ಯಾವುದೇ ಆದೇಶವನ್ನಾಗಲಿ, ಶಿಕ್ಷೆಯನ್ನಾಗಲಿ ನೀಡುವುದಿಲ್ಲ. ಅದು ನಮಗೆ ವರದಿಯನ್ನು ಮಾತ್ರ ಸಲ್ಲಿಸುತ್ತದೆ,' ಎಂದು ಸಿಜೆಐ ಹೇಳಿದರು.

' ನಾವು ಸಮಿತಿಯೊಂದನ್ನು ರಚನೆ ಮಾಡುತ್ತಿದ್ದೇವೆ. ಆಗ ಮಾತ್ರ ಸಂಪೂರ್ಣ ಚಿತ್ರಣ ಸಿಗಲು ಸಾಧ್ಯ. ರೈತರು ಸಮಿತಿ ಮುಂದೆ ಬರುವುದಿಲ್ಲ ಎಂಬ ವಾದಗಳೆಲ್ಲ ನಮಗೆ ಬೇಕಾಗಿಲ್ಲ. ನಾವು ಸಮಸ್ಯೆಯನ್ನು ಬಗೆಹರಿಸಲು ನೋಡುತ್ತಿದ್ದೇವೆ. ಒಂದು ವೇಳೆ ನೀವು (ರೈತರು) ಅನಿರ್ದಿಷ್ಟಾವಧಿ ಆಂದೋಲನ ಮುಂದುವರಿಸುವುದೇ ಆದರೆ, ನೀವು ಮುಂದುವರಿಸಬಹುದು,' ಎಂದು ಮುಖ್ಯ ನ್ಯಾಯಮೂರ್ತಿ ಎಸ್‌.ಎ ಬೋಬಡೆ ಹೇಳಿದರು.

ಪ್ರಧಾನಿಗೆ ಹೇಳಲಾಗದು

ವಕೀಲ ಎಂ.ಎಲ್.ಶರ್ಮಾ ವಾದ ಮಂಡಿಸುತ್ತಾ, 'ಅನೇಕರು ಚರ್ಚೆಗೆ ಬಂದರು. ಆದರೆ ಮುಖ್ಯದಾದ ವ್ಯಕ್ತಿ, ಪ್ರಧಾನಿಯೇ ಬಂದಿಲ್ಲ ಎಂದು ರೈತರು ಹೇಳುತ್ತಿದ್ದಾರೆ,' ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿಗಳು, 'ಪ್ರಧಾನಿ ಹೋಗಬೇಕೆಂದು ಹೇಳಲು ಸಾಧ್ಯವಿಲ್ಲ. ಈ ಪ್ರಕರಣದಲ್ಲಿ ಅವರು ಯಾವುದೇ ಅರ್ಜಿದಾರರಲ್ಲ,' ಎಂದರು.

'ಸಮಿತಿಯು ಈ ಪ್ರಕರಣದಲ್ಲಿ ನ್ಯಾಯಾಂಗ ಪ್ರಕ್ರಿಯೆಯ ಭಾಗವಾಗಿರುತ್ತದೆ. ನಾವು ಕಾನೂನುಗಳನ್ನು ಅಮಾನತುಗೊಳಿಸಲು ಯೋಜಿಸುತ್ತಿದ್ದೇವೆ. ಆದರೆ, ಅದು ಅನಿಶ್ಚಿತ,' ಎಂದು ಮುಖ್ಯನ್ಯಾಯಮೂರ್ತಿ ಹೇಳಿದರು.

ರಾಜಕೀಯ ವಿಜಯವಲ್ಲ

ಅರ್ಜಿದಾರರೊಬ್ಬರ ಪರ ವಾದ ಮಂಡಿಸಿದ ಹಿರಿಯ ವಕೀಲ ಹರೀಶ್ ಸಾಳ್ವೆ, 'ಕಾನೂನುಗಳ ಜಾರಿಗೆ ನೀಡಲಾಗುವ ತಡೆಯನ್ನು ರಾಜಕೀಯ ವಿಜಯವೆಂದು ನೋಡಬಾರದು. ಕಾಯ್ದೆಗಳ ಬಗ್ಗೆ ವ್ಯಕ್ತವಾದ ಕಳವಳಗಳ ಗಂಭೀರ ಪರೀಕ್ಷೆ ಎಂಬಂತೆ ಅದನ್ನು ನೋಡಬೇಕು, ' ಎಂದು ಹೇಳಿದರು.

ಪೊಲೀಸರಿಗೆ ಅರ್ಜಿ ಸಲ್ಲಿಸಿ

ರಾಮ್‌ಲೀಲಾ ಮೈದಾನ ಅಥವಾ ಇತರ ಸ್ಥಳಗಳಲ್ಲಿ ಪ್ರತಿಭಟನೆ ನಡೆಸಲು ರೈತರು ಇಚ್ಚಿಸಿದರೆ ಅವರು ದೆಹಲಿ ಪೊಲೀಸ್ ಆಯುಕ್ತರಿಗೆ ಅನುಮತಿಗಾಗಿ ಅರ್ಜಿ ಸಲ್ಲಿಸಬಹುದು. ಇದನ್ನು ನಮ್ಮ ಆದೇಶದಲ್ಲಿ ಉಲ್ಲೇಖಿಸುತ್ತೇವೆ ಎಂದು ಮುಖ್ಯನ್ಯಾಯಮೂರ್ತಿ ತಿಳಿಸಿದರು.

ಖಲಿಸ್ತಾನ ಪರ ಹೋರಾಟಗಾರರಿದ್ದಾರೆ

'ಈ ಪ್ರತಿಭಟನೆ ಹಿಂದೆ ನಿಷೇಧಿತ ಸಂಸ್ಥೆ ಇದೆ ಎಂದು ವಾದಿಸಿದ ಅರ್ಜಿಯೊಂದು ನಮ್ಮ ಮುಂದೆ ಇದೆ. ಅಟಾರ್ನಿ ಜನರಲ್ ಅದನ್ನು ಒಪ್ಪುವರೇ ಅಥವಾ ನಿರಾಕರಿಸುವರೇ,' ಎಂದು ಮುಖ್ಯನ್ಯಾಯಮೂರ್ತಿ ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್, 'ಪ್ರತಿಭಟನೆಯಲ್ಲಿ ಖಲಿಸ್ತಾನಿಗಳು ನುಸುಳಿದ್ದಾರೆ ಎಂದು ನಾವು ಹೇಳಿದ್ದೇವೆ,' ಎಂದರು.

ನಿಷೇಧಿತ ಸಂಘಟನೆ ಹೋರಾಟದ ತೆರೆಮರೆಯಲ್ಲಿದ್ದರೆ, ಆ ಬಗ್ಗೆ ನಮ್ಮ ಮುಂದೆ ಆರೋಪ ಮಾಡುತ್ತಿರುವವರು ನಾಳೆಯೊಳಗೆ ಅಫಿಡವಿಟ್ ಸಲ್ಲಿಸಿ ಎಂದು ಮುಖ್ಯನ್ಯಾಯಮೂರ್ತಿಗಳೂ ಅಟಾರ್ನಿ ಜನರಲ್‌ಗೆ ತಿಳಿಸಿದರು.

ಇದಕ್ಕೆ ಉತ್ತರಿಸಿದ ಅಟಾರ್ನಿ ಜನರಲ್‌, ಈ ಕುರಿತ ಅಫಿಡವಿಟ್ ಅನ್ನು ಸಲ್ಲಿಸುವುದಾಗಿ ತಿಳಿಸಿದರು.

ಅಂತಿಮವಾಗಿ, ಕೇಂದ್ರದ ಮೂರು ಕೃಷಿ ಕಾಯ್ದೆಗಳಿಗೆ ಮುಂದಿನ ಆದೇಶದ ವರೆಗೆ ಸುಪ್ರೀಂ ಕೋರ್ಟ್‌ ತಡೆ ನೀಡಿತು. ಕಾಯ್ದೆ ಕುರಿತು ಚರ್ಚೆ ನಡೆಸಲು ಸುಪ್ರೀಂ ಕೋರ್ಟ್‌ ಸಮಿತಿಯನ್ನು ರಚಿಸಿ ಆದೇಶ ಹೊರಡಿಸಿತು.

ಮೂರು ಕಾಯ್ದೆಗಳು

* ಬೆಲೆ ಖಾತರಿ ಮತ್ತು ಕೃಷಿ ಸೇವೆಗಳಿಗೆ ರೈತರ (ಸಬಲೀಕರಣ ಮತ್ತು ರಕ್ಷಣೆ) ಒಪ್ಪಿಗೆ ಕಾಯ್ದೆ

* ಕೃಷಿ ಉತ್ಪನ್ನಗಳ ವ್ಯಾಪಾರ ಮತ್ತು ಮಾರಾಟ (ಉತ್ತೇಜನ ಮತ್ತು ನೆರವು) ಕಾಯ್ದೆ

* ಅಗತ್ಯ ವಸ್ತುಗಳ (ತಿದ್ದುಪಡಿ) ಕಾಯ್ದೆ

ಸಮಿತಿಯ ಸದಸ್ಯರು

l ಭೂಪಿಂದರ್‌ ಸಿಂಗ್‌ ಮಾನ್‌, ಭಾರತೀಯ ಕಿಸಾನ್‌ ಯೂನಿಯನ್‌ ಅಧ್ಯಕ್ಷ

l ಅನಿಲ್‌ ಘಣವಟ್‌‌, ಮಹಾರಾಷ್ಟ್ರದ ಶೇತ್ಕರಿ ಸಂಘಟನೆಯ ಅಧ್ಯಕ್ಷ

l ಪ್ರಮೋದ್‌ ಕುಮಾರ್‌ ಜೋಷಿ, ಅಂತರರಾಷ್ಟ್ರೀಯ ಆಹಾರ ನೀತಿ ಸಂಶೋಧನಾ ಸಂಸ್ಥೆಯ ದಕ್ಷಿಣ ಏಷ್ಯಾ ನಿರ್ದೇಶಕ

l ಅಶೋಕ್‌ ಗುಲಾಟಿ, ಕೃಷಿ ಅರ್ಥಶಾಸ್ತ್ರಜ್ಞ

‘ಸಮಿತಿ ರಚನೆಯ ಹಿಂದೆ ಸರ್ಕಾರ’

ಸಮಿತಿ ರಚಿಸಿದ ಸುಪ್ರೀಂ ಕೋರ್ಟ್‌ನ ಕ್ರಮವು ಪ್ರತಿಭಟನಾನಿರತ ರೈತರಿಗೆ ಸಮಾಧಾನ ತಂದಿಲ್ಲ. ಅವರು ಪ್ರತಿಭಟನೆ ಮುಂದುವರಿಸುವುದಾಗಿ ಹೇಳಿದ್ದಾರೆ.

ದೆಹಲಿಯ ಸಿಂಘು ಗಡಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ರೈತ ಮುಖಂಡರು, ಸಮಿತಿಯ ಎಲ್ಲ ಸದಸ್ಯರು ‘ಸರ್ಕಾರದ ಪರ’ ಇರುವವರು ಎಂದಿದ್ದಾರೆ.

ಸುಪ್ರೀಂ ಕೋರ್ಟ್‌ ನೇಮಿಸಿರುವ ಸಮಿತಿಯ ಸದಸ್ಯರು ನಂಬಿಕಾರ್ಹರಲ್ಲ. ಅವರೆಲ್ಲರೂ ಕೃಷಿ ಕಾಯ್ದೆಗಳು ರೈತ ಪರ ಎಂದು ಲೇಖನಗಳನ್ನು ಬರೆದವರು ಎಂದು ರೈತ ಮುಖಂಡ ಬಲಬೀರ್‌ ಸಿಂಗ್‌ ರಾಜೇವಾಲ್‌ ಹೇಳಿದ್ದಾರೆ.

ಸಮಸ್ಯೆ ಪರಿಹಾರಕ್ಕೆ ಸಮಿತಿ ರಚಿಸುವಂತೆ ರೈತ ಸಂಘಟನೆಗಳು ಕೇಳಿಯೇ ಇಲ್ಲ. ಸಮಿತಿ ರಚನೆಯ ವಿದ್ಯಮಾನದ ಹಿಂದೆ ಕೇಂದ್ರ ಸರ್ಕಾರವೇ ಇದೆ. ಪ್ರತಿಭಟನೆಯಿಂದ ಗಮನವನ್ನು ಬೇರೆಡೆ ಸೆಳೆಯುವುದಕ್ಕಾಗಿ ಸರ್ಕಾರ ಈ ಕೆಲಸ ಮಾಡಿದೆ ಎಂದು ಅವರು ಆರೋಪಿಸಿದ್ದಾರೆ.

ಸುಪ್ರೀಂ ಕೋರ್ಟ್ ಸ್ವಯಂಪ್ರೇರಣೆಯಿಂದ ಕಾಯ್ದೆಗಳನ್ನು ರದ್ದು ಮಾಡಲು ಅವಕಾಶ ಇದೆ. ಹೊರಗಿನ ಯಾವುದೇ ಸಮಿತಿಯ ಅಗತ್ಯ ಇಲ್ಲ. ಸಂಸತ್ತಿನಲ್ಲಿ ಚರ್ಚೆ ಮಾಡಿ, ಸಮಸ್ಯೆ ಬಗೆಹರಿಸಬೇಕು. ಇದೇ 15ರಂದು ಸರ್ಕಾರದ ಜತೆಗೆ ನಿಗದಿಯಾಗಿರುವ ಮಾತುಕತೆಗೆ ಹೋಗುವುದಾಗಿಯೂ ರೈತರು ತಿಳಿಸಿದ್ದಾರೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT