ಸೋಮವಾರ, ಮೇ 16, 2022
28 °C

ದೆಹಲಿ ಪೊಲೀಸರು ಬಂಧಿಸಿದ್ದ ಪತ್ರಕರ್ತ ಪುನಿಯಾ ಬಿಡುಗಡೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಸಿಂಘು ಗಡಿಯಲ್ಲಿ ರೈತರ ಪ್ರತಿಭಟನೆಯನ್ನು ವರದಿ ಮಾಡಲು ಹೋಗಿ, ದೆಹಲಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಹವ್ಯಾಸಿ ಪತ್ರಕರ್ತ ಮನ್‌ದೀಪ್‌ ಪುನಿಯಾ ಅವರಿಗೆ ನ್ಯಾಯಾಲಯದಿಂದ ಮಂಗಳವಾರ ಜಾಮೀನು ದೊರಕಿದ್ದು, ಅವರು ಬುಧವಾರ ಬಿಡುಗಡೆಯಾಗಿದ್ದಾರೆ.

ನ್ಯಾಯಾಲಯ ₹25 ಸಾವಿರ ವೈಯಕ್ತಿಕ ಬಾಂಡ್‌ ಪಡೆದು ಜಾಮೀನು ನೀಡಿದೆ. ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಭಾನುವಾರ ಅವರನ್ನು 14 ದಿನಗಳ ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಿತ್ತು.

ನ್ಯಾಯಾಲಯದ ಹೊರಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿರುವ ಪುನಿಯಾ ‘ತಿಹಾರ್‌ ಜೈಲಿನಲ್ಲಿ ನನಗೆ  ರೈತರೊಂದಿಗೆ ಮಾತನಾಡುವ ಅವಕಾಶ ದೊರಕಿದ್ದು, ರೈತರು ವಿವರಗಳ ಟಿಪ್ಪಣಿಯನ್ನು ನನ್ನ ಕಾಲುಗಳ ಮೇಲೆ ಬರೆದು ಕಳುಹಿಸಿದ್ದಾರೆ. ಎಲ್ಲವನ್ನೂ ವಿವರವಾಗಿ ವರದಿ ಮಾಡುವೆ. ತಳಮಟ್ಟದಿಂದ ವರದಿ ಮಾಡುವುದು ನನ್ನ ಕೆಲಸ. ‘ನೀವು ಹೇಗೆ ಮತ್ತು ಯಾಕಾಗಿ ಬಂಧನಕ್ಕೆ ಒಳಗಾಗಿದ್ದೀರಿ’ ಎಂದು ರೈತರಿಂದ ಮಾಹಿತಿಯನ್ನು ಪಡೆದುಕೊಂಡಿರುವೆ’ ಎಂದು ತಿಳಿಸಿದ್ದಾರೆ.

‘ಸಿಂಘು ಗಡಿ ಭಾಗದಲ್ಲಿ ರೈತರ ಹೋರಾಟ ಶುರುವಾದಾಗಿನಿಂದಲೂ ನಾನು ವರದಿ ಬರೆಯುತ್ತಿದ್ದೆ. ಸತ್ಯ ಮತ್ತು ವಿಶ್ವಾಸಾರ್ಹವಾದ ವರದಿ ಕೊಡುವುದು ಪತ್ರಕರ್ತನಾದ ನನ್ನ ಕರ್ತವ್ಯ. ನಾನು ಅದನ್ನು ನಿರ್ವಹಿಸುತ್ತಿದ್ದೆ ಕೂಡ. ರೈತರ ಚಳವಳಿಯ ವೇಳೆ ದಾಳಿ ಮಾಡಿದವರ ಹಿಂದೆ ಯಾರಿದ್ದರು ಎನ್ನುವುದನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದೆ. ನನ್ನ ಬಂಧನದಿಂದಾಗಿ ಅದಕ್ಕೆ ಅಡ್ಡಿಯಾಯಿತು. ನಾನು ಅಮೂಲ್ಯವಾದ ಸಮಯವನ್ನೂ ಕಳೆದುಕೊಂಡೆ. ನಿಜಕ್ಕೂ ನನಗೆ ಅನ್ಯಾಯವಾಗಿದೆ’ ಎಂದು ಅವರು ಟ್ವೀಟ್‌ ಕೂಡ ಮಾಡಿದ್ದಾರೆ.

‘ಪೊಲೀಸರು ನನ್ನ ಕೆಲಸದಲ್ಲಿ ಹಸ್ತಕ್ಷೇಪ ಮಾಡಿದ್ದಾರೆ ಎಂದು ಆರೋಪಿಸಿದ ಅವರು, ಈ ಘಟನೆಯು ನನ್ನ ಕೆಲಸದಲ್ಲಿ ಮುಂದುವರಿಯುವ ಸಂಕಲ್ಪವನ್ನು ಇನ್ನಷ್ಟು ಬಲಪಡಿಸಿದೆ’ ಎಂದು ಹೇಳಿದ್ದಾರೆ.

ಸಿಂಘು ಗಡಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯ ವರದಿ ಮಾಡಲು ಹೋಗಿದ್ದ ಮನ್‌ದೀಪ್‌ ಪುನಿಯಾ ಅವರನ್ನು ಪೊಲೀಸರೊಂದಿಗೆ ದುರ್ನಡತೆ ತೋರಿದ ಆರೋಪದ ಮೇರೆಗೆ ಬಂಧಿಸಲಾಗಿತ್ತು.

ಇದನ್ನೂ ಓದಿ... ಹುತಾತ್ಮ ರೈತರನ್ನು ಭಯೋತ್ಪಾದಕರು ಎಂಬಂತೆ ನೋಡುವುದು ಬಹುದೊಡ್ಡ ಅಪರಾಧ: ಪ್ರಿಯಾಂಕಾ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು