ಶುಕ್ರವಾರ, ಮೇ 20, 2022
23 °C

ಚಕ್ಕಾಜಾಮ್‌ಗೆ ರೈತರ ಸಿದ್ಧತೆ: ಕಾನೂನು ಮೀರಿದರೆ ಕಠಿಣ ಕ್ರಮಕ್ಕೆ ಸರ್ಕಾರದ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿ ಹೊರತುಪಡಿಸಿ ದೇಶವ್ಯಾಪಿ ಚಕ್ಕಾ ಜಾಮ್ (ರಸ್ತೆ ದಿಗ್ಭಂಧನ) ಪ್ರತಿಭಟನೆಯನ್ನು ರೈತರು ಹಮ್ಮಿಕೊಂಡಿದ್ಧಾರೆ. ರಾಜ್ಯವೂ ಸೇರಿದಂತೆ ದೇಶದ ಹಲವೆಡೆ ಮಧ್ಯಾಹ್ನ 12 ರಿಂದ 3 ಗಂಟೆವರೆಗೆ ಈ ಚಕ್ಕಾ ಜಾಮ್ ಪ್ರತಿಭಟನೆ ನಡೆಯಲಿದೆ.

ರೈತರ ಸಂಘಟನೆಗಳು ಶಾಂತಿಯುತ ಪ್ರತಿಭಟನೆ ನಡೆಸುತ್ತೇವೆ. ತುರ್ತು ಸೇವೆಗಳನ್ನು ತಡೆಯುವುದಿಲ್ಲ ಎಂದ ಹೇಳಿವೆ. ಆದರೂ ದೆಹಲಿಯ ಗಡಿಗಳಲ್ಲಿ ಕಟ್ಟೆಚ್ಚರವಹಿಸಲಾಗಿದೆ.  

50,000 ಭದ್ರತಾ ಸಿಬ್ಬಂದಿ: ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ದೆಹಲಿ ಪೊಲೀಸ್, ಅರೆಸೈನಿಕ ಮತ್ತು ರಿಸರ್ವ್ ಪಡೆಗಳ ಸುಮಾರು 50,000 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ರಾಷ್ಟ್ರ ರಾಜಧಾನಿಯಲ್ಲಿ ಕನಿಷ್ಠ 12 ಮೆಟ್ರೋ ನಿಲ್ದಾಣಗಳನ್ನು ಮುಚ್ಚಲು ಸೂಚನೆ ನಿಡಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. 
 

ಸಂಯಮ ಕಾಯ್ದುಕೊಳ್ಳಿ: ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗವು ಗರಿಷ್ಠ ಸಂಯಮ ಇಟ್ಟುಕೊಂಡು ಪ್ರತಿಭಟನೆ ನಡೆಸಲು ರೈತರು ಮತ್ತು ಅಧಿಕಾರಿಗಳಿಗೆ ಸಲಹೆ ನೀಡಿದೆ.  "ಶಾಂತಿಯುತ ಹೋರಾಟದ ಹಕ್ಕು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಆಫ್‌ಲೈನ್ ಮತ್ತು ಆನ್‌ಲೈನ್‌ನಲ್ಲಿ ರಕ್ಷಿಸಬೇಕು. ಎಲ್ಲರಿಗೂ ಮಾನವ ಹಕ್ಕುಗಳಿಗೆ ಸಂಬಂಧಿಸಿದಂತೆ ಸಮನಾದ ಪರಿಹಾರಗಳನ್ನು ಕಂಡುಹಿಡಿಯುವುದು ಬಹಳ ಮುಖ್ಯ" ಎಂದು ಅದು ಹೇಳಿದೆ.

ತೋಮರ್ ಸಮರ್ಥನೆ: ಮೂರು ಹೊಸ ಕೃಷಿ ಕಾನೂನುಗಳನ್ನು ತರುವ ಮೊದಲು ಕೇಂದ್ರವು "ಸರಿಯಾದ ಕಾರ್ಯವಿಧಾನ" ವನ್ನು ಅನುಸರಿಸಿತು. ಕೃಷಿ ಸಮುದಾಯಕ್ಕೆ ಆಯ್ಕೆ ಒದಗಿಸಲು ಕೃಷಿ ಉತ್ಪನ್ನಗಳಲ್ಲಿ ತಡೆ-ಮುಕ್ತ ವ್ಯಾಪಾರಕ್ಕೆ ಅನುಕೂಲವಾಗುವಂತೆ ರಾಜ್ಯಗಳು ಮತ್ತು ರೈತರೊಂದಿಗೆ ಸಮಾಲೋಚನೆ ನಡೆಸಿತು ಎಂದು ಶುಕ್ರವಾರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಸಂಸತ್ತಿಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ..ಫೆ.6ರಂದು ದೆಹಲಿ ಹೊರತುಪಡಿಸಿ ದೇಶವ್ಯಾಪಿ 'ಚಕ್ಕಾ ಜಾಮ್': ಟಿಕಾಯತ್

ಕಠಿಣ ಕ್ರಮ: ಚಕ್ಕಾ ಜಾಮ್ ಪ್ರತಿಭಟನೆ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯ ಪ್ರಮುಖ ಸ್ಥಳಗಳಲ್ಲಿ  ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ದೆಹಲಿ ಪೊಲೀಸರಿಗೆ ನಿರ್ದೇಶನ ನೀಡಿದೆ. ಯಾವುದೇ ಕಾರಣಕ್ಕೂ ಜನವರಿ 26ರಂದು ನಡೆದ ಹಿಂಸಾಚಾರದ ರೀತಿಯ ಘಟನೆ ಮರುಕಳಿಸಬಾರದು. ದೆಹಲಿ ಒಳಗೆ ಕನಿಷ್ಠ ಪೊಲೀಸರನ್ನು ಬಳಸಿ, ಗಡಿಗಳಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿನೆ ಮಾಡಿ. ಯಾರೇ ಕಾನೂನು ಮೀರಿ ವರ್ತಿಸಿದರೂ ಕಠಿಣ ಕ್ರಮ ಜರುಗಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಸೂಚನೆ ನೀಡಲಾಗಿದೆ. ಗುರುವಾರ ನಡೆದ ಸಭೆಯಲ್ಲಿ  ಎನ್‌ಎಸ್‌ಎ ಅಜಿತ್ ದೋವಲ್, ನಗರ ಪೊಲೀಸ್ ಆಯುಕ್ತ ಎಸ್.ಎನ್. ಶ್ರೀವಾಸ್ತವ ಇತರರು ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು