ಸೋಮವಾರ, ಮಾರ್ಚ್ 27, 2023
24 °C
‘ಗಗನಯಾನ’ ಯಶಸ್ಸಿನ ನಂತರ ಇಸ್ರೊ ಯೋಜನೆ ಆರಂಭಿಸಲಿದೆ: ಸಂಸತ್‌ಗೆ ಕೇಂದ್ರ ಮಾಹಿತಿ

‘ಗಗನಯಾನ’ ಕಾರ್ಯಾಚರಣೆ ಬಳಿಕ ಇಸ್ರೊದಿಂದ ಬಾಹ್ಯಾಕಾಶ ಪ್ರವಾಸೋದ್ಯಮ: ಕೇಂದ್ರ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೊ) ಬಾಹ್ಯಾಕಾಶ ಪ್ರವಾಸೋದ್ಯಮ (ಸಬ್‌ ಆರ್ಬಿಟಲ್ ಸ್ಪೇಸ್‌ ಟೂರಿಸಂ) ಕಾರ್ಯಸಾಧ್ಯತೆಯ ಅಧ್ಯಯನಗಳನ್ನು ನಡೆಸಿದೆ. ದೇಶದ ಚೊಚ್ಚಲ ಮಾನವ ಬಾಹ್ಯಾಕಾಶಯಾನ ‘ಗಗನಯಾನ’ ಕಾರ್ಯಾಚರಣೆಯ ಯಶಸ್ಸಿನ ನಂತರ ಇದನ್ನು ಕೈಗೆತ್ತಿಕೊಳ್ಳಬಹುದು ಎಂದು ಕೇಂದ್ರ ಸರ್ಕಾರ ಬುಧವಾರ ಸಂಸತ್‌ಗೆ ತಿಳಿಸಿದೆ.

ಲೋಕಸಭೆಯಲ್ಲಿ ಕೇಳಿದ ಪ್ರಶ್ನೆಗೆ ನೀಡಿದ ಲಿಖಿತ ಉತ್ತರದಲ್ಲಿ ಪ್ರಧಾನ ಮಂತ್ರಿ ಕಚೇರಿ (ಪಿಎಂಒ) ರಾಜ್ಯ ಸಚಿವ ಜಿತೇಂದ್ರ ಸಿಂಗ್‌ ಅವರು, ‌ಸಬ್‌ ಆರ್ಬಿಟಲ್ ಸ್ಪೇಸ್‌ ಟೂರಿಸಂ ಕಾರ್ಯಾಚರಣೆಯ ಕೆಲವು ಕಾರ್ಯಸಾಧ್ಯತಾ ಅಧ್ಯಯನಗಳನ್ನು ಇಸ್ರೊ ಈಗಾಗಲೇ ನಡೆಸಿದೆ. ಮಾನವ ಸಹಿತ ಬಾಹ್ಯಾಕಾಶ ಕಾರ್ಯಾಚರಣೆಗಳಿಗೆ ಅತ್ಯಗತ್ಯವಾದ ವಿವಿಧ ತಂತ್ರಜ್ಞಾನಗಳ ಅಭಿವೃದ್ಧಿ ಮತ್ತು ಮೂಲಸೌಕರ್ಯಗಳ ಸಿದ್ಧತೆಯಲ್ಲೂ ನಿರತವಾಗಿದೆ’ ಎಂದು ತಿಳಿಸಿದ್ದಾರೆ.

ಬಿಜೆಪಿ ಸಂಸದ ಸಂಜಯ್‌ ಕಾಕಾ ಪಾಟೀಲ್ ಮತ್ತು ವೈಎಸ್‌ಆರ್‌ಸಿಪಿ ಸಂಸದ ಮದ್ದಿಲ ಗುರುಮೂರ್ತಿ ಅವರು ಕೇಳಿದ್ದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿರುವ ಸಿಂಗ್‌, ‘ಗಗನಯಾನ ಯೋಜನೆ ಉದ್ದೇಶವು ಮಾನವ ಸಹಿತ ಬಾಹ್ಯಾಕಾಶಯಾನದ ಸಾಮರ್ಥ್ಯವನ್ನು ಕೆಳಮಟ್ಟದ ಭೂಕಕ್ಷೆಯಲ್ಲಿ ಪ್ರದರ್ಶಿಸುವುದಾಗಿದೆ. ಗಗನಯಾನ ಮಿಷನ್ ಸಾಧಿಸಿದ ನಂತರ ಭವಿಷ್ಯದ ಸ್ಪೇಸ್‌ ಟೂರಿಸಂ ಯೋಜನೆ ಕೈಗೆತ್ತಿಕೊಳ್ಳಲಾಗುವುದು’ ಎಂದು ಹೇಳಿದ್ದಾರೆ.

ಇನ್ನೊಂದು ಪ್ರಶ್ನೆಗೆ ಉತ್ತರಿಸಿರುವ ಸಚಿವರು, ‘ಇಸ್ರೊದ ಗ್ರಹ ಮತ್ತು ಖಗೋಳವಿಜ್ಞಾನ ಕಾರ್ಯಾಚರಣೆಗಳಿಂದ ಚಂದ್ರನ ಮೇಲ್ಮೈಯಲ್ಲಿ ನೀರಿನ ಅಣುಗಳ ಪತ್ತೆ, ಚಂದ್ರನ ಬಾಹ್ಯಗೋಳದ ಧಾತುರೂಪದ ಮ್ಯಾಪಿಂಗ್ ಮತ್ತು ಸೌರ ಜ್ವಾಲೆಯ ಅಧ್ಯಯನ ಸಾಧ್ಯವಾಗಿದೆ. ಜತೆಗೆ ಚಂದ್ರನ ಮೇಲ್ಮೈ, ಉಪ-ಮೇಲ್ಮೈ ಮತ್ತು ಚಂದ್ರನ ಬಾಹ್ಯಗೋಳದ ವೈಜ್ಞಾನಿಕ ಒಳನೋಟಗಳನ್ನು ಕಟ್ಟಿಕೊಟ್ಟಿವೆ. ಆಸ್ಟ್ರೋಸಾಟ್ ಮಿಷನ್’ ಕೂಡ ಬ್ರಹ್ಮಾಂಡದ ಮೂಲ ರಹಸ್ಯವನ್ನು ತೆರೆದಿಟ್ಟಿದೆ’ ಎಂದು ಹೇಳಿದ್ದಾರೆ.   

 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು