ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲಾತಿ ಹೋರಾಟ: ಲಿಂಗಾಯತ ಶಾಸಕ, ಸಚಿವರಿಗೆ ಬಿಜೆಪಿ ಹೈಕಮಾಂಡ್ ಎಚ್ಚರಿಕೆ

ಹಳೆಯ ‘ಹಣೆಪಟ್ಟಿ’ ಕಳಚಿಕೊಳ್ಳಲು ಬಿಜೆಪಿ ಯತ್ನ
Last Updated 25 ಫೆಬ್ರುವರಿ 2021, 21:27 IST
ಅಕ್ಷರ ಗಾತ್ರ

ನವದೆಹಲಿ: ‘ವೀರಶೈವ ಲಿಂಗಾಯತ ಸಮುದಾಯದ ಪಕ್ಷ’ ಎಂಬ ಹಣೆಪಟ್ಟಿ ಕಳಚಿಕೊಂಡು, ಎಲ್ಲ ಸಮುದಾಯಗಳ ಮತದಾರರನ್ನು ಸೆಳೆಯುವತ್ತ ಹೆಜ್ಜೆ ಇರಿಸಿರುವ ಬಿಜೆಪಿ ಹೈಕಮಾಂಡ್‌, ರಾಜ್ಯದಲ್ಲಿನ ‘ಮೀಸಲಾತಿ ಹೋರಾಟ’ಕ್ಕೆ ಕುಮ್ಮಕ್ಕು ನೀಡದಂತೆ ತನ್ನ ಶಾಸಕರಿಗೆ ಎಚ್ಚರಿಕೆಯ ಸಂದೇಶ ರವಾನೆ ಮಾಡಿದೆ.

ಪಂಚಮಸಾಲಿ ಸಮುದಾಯವನ್ನು ಇತರೆ ಹಿಂದುಳಿದ ಜಾತಿ (ಒಬಿಸಿ)ಗೆ ಸೇರಿಸುವಂತೆ ಬೆಂಗಳೂರಿನಲ್ಲಿ ನಡೆದ ರ್‍ಯಾಲಿಯಲ್ಲಿ ಆಡಳಿತಾರೂಢ ಪಕ್ಷದ ಶಾಸಕರು, ಸಚಿವರು ಪಾಲ್ಗೊಂಡ ಹಿನ್ನೆಲೆಯಲ್ಲಿ ಪಕ್ಷದ ವರಿಷ್ಠರು ಕೆಂಡಾಮಂಡಲ ಆಗಿದ್ದಾರೆ ಎಂದು ತಿಳಿದುಬಂದಿದೆ.

ನಿರ್ದಿಷ್ಟ ಸಮುದಾಯಕ್ಕೆ ಆಶ್ವಾಸನೆ ನೀಡುವುದರಿಂದ ಮಿಕ್ಕ ಸಮುದಾಯಗಳಿಗೆ ತಪ್ಪು ಸಂದೇಶ ರವಾನೆ ಆಗಬಹುದು ಎಂಬ ಆತಂಕದೊಂದಿಗೆ ಪಕ್ಷದ ರಾಜ್ಯ ಪ್ರಮುಖರೊಂದಿಗೆ ಮಾತುಕತೆ ನಡೆಸಿರುವ ವರಿಷ್ಠರು, ಮೀಸಲಾತಿ ವಿಷಯದಲ್ಲಿ ಸೂಕ್ಷ್ಮವಾಗಿ ವರ್ತಿಸುವಂತೆಯೂ ಎಚ್ಚರಿಕೆ ನೀಡಿದ್ದಾರೆ.

2 ದಿನಗಳ ಹಿಂದಷ್ಟೇ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ಸಚಿವ ಮುರುಗೇಶ ನಿರಾಣಿ ಅವರನ್ನು ತುರ್ತಾಗಿ ದೆಹಲಿಗೆ ಕರೆಸಿಕೊಂಡಿದ್ದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ಕೇಂದ್ರದ ಗೃಹ ಸಚಿವ ಅಮಿತ್‌ ಶಾ, ಇಡೀ ಕ್ಷೇತ್ರ ಹಾಗೂ ರಾಜ್ಯವನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳು ತಮ್ಮ ಸಮುದಾಯಗಳ ಹೋರಾಟಗಳಲ್ಲಿ ಪಾಲ್ಗೊಳ್ಳದಂತೆ ತಾಕೀತು ಮಾಡಿದ್ದಾರೆ ಎಂದು ಉನ್ನತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಪಂಚಮಸಾಲಿ ಸಮುದಾಯದ ಪ್ರತಿಭಟನೆಯ ಕುರಿತು ಈ ಇಬ್ಬರೂ ಮುಖಂಡರೊಂದಿಗೆ ಚರ್ಚಿಸಿರುವ ವರಿಷ್ಠರು, ಶಾಸಕರು, ಸಚಿವರು ಸೇರಿದಂತೆ ಬಿಜೆಪಿಯ ಯಾವುದೇ ಕಾರ್ಯಕರ್ತರನ್ನೂ ಇಂಥ ಹೋರಾಟಗಳಿಂದ ದೂರ ಇರಿಸುವಂತೆ ಸಲಹೆ ನೀಡಿದ್ದಾರೆ.

ಯಾವುದೇ ಸಮುದಾಯಕ್ಕೆ ಹೊಸದಾಗಿ ವಿಶೇಷ ಸೌಲಭ್ಯ ಕಲ್ಪಿಸುವುದು ಅತ್ಯಂತ ಸೂಕ್ಷ್ಮ ಮತ್ತು ಭಾವನಾತ್ಮಕ ವಿಷಯ. ಅದರಲ್ಲೂ, ಜನಪ್ರತಿನಿಧಿಗಳು ತಮಗೆ ಸೇರಿದ ನಿರ್ದಿಷ್ಟ ಸಮುದಾಯದ ಪರ ದನಿ ಎತ್ತುವುದು ಇಡೀ ಜನ ಸಮುದಾಯಕ್ಕೇ ತಪ್ಪು ಸಂದೇಶ ರವಾನಿಸಲಿದೆ ಎಂದೂ ಅಮಿತ್‌ ಶಾ ಹೇಳಿ ಕಳಿಸಿದ್ದಾರೆ ಎಂದು ಹಿರಿಯ ಮುಖಂಡರೊಬ್ಬರು ಖಚಿತಪಡಿಸಿದ್ದಾರೆ.

ಈಶ್ವರಪ್ಪ, ಬಿಎಸ್‌ವೈಗೂ ಸಂದೇಶ: ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡುವಂತೆ ನಡೆದಿರುವ ಹೋರಾಟದಲ್ಲಿ ಬಹಿರಂಗವಾಗಿ ಕಾಣಿಸಿಕೊಂಡಿರುವ ಸಚಿವ ಕೆ.ಎಸ್‌. ಈಶ್ವರಪ್ಪ ಅವರಿಗೂ ಎಚ್ಚರಿಕೆ ನೀಡಲಾಗಿದೆ. ಪಕ್ಷದ ಶಿಸ್ತನ್ನು ಉಲ್ಲಂಘಿಸಕೂಡದು ಎಂಬ ಸಂದೇಶ ನೀಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ರಹಸ್ಯ ಸಭೆ ನಡೆಸದಂತೆ ರಾಜ್ಯದ ಇನ್ನಿಬ್ಬರು ಸಚಿವರಿಗೂ ಎಚ್ಚರಿಕೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಯಾವುದೇ ಬೆಳವಣಿಗೆಗಳ ಕುರಿತು ಆಂತರಿಕವಾಗಿ ಚರ್ಚಿಸುವಂತೆ ಬುಧವಾರವಷ್ಟೇ ಸೂಚಿಸಲಾಗಿದೆ. ಪ್ರತ್ಯೇಕ ಸಭೆ ನಡೆಸುವುದು, ಗುಂಪುಗಾರಿಕೆಗೆ ಅವಕಾಶ ನೀಡುವಂತಹ ಕಾರ್ಯಕ್ಕೆ ಮುಂದಾಗುವುದನ್ನು ಪಕ್ಷ ವಿರೋಧಿ ಚಟುವಟಿಕೆ ಎಂದೇ ಪರಿಗಣಿಸಲಾಗುತ್ತದೆ ಎಂದೂ ತಿಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಮೀಸಲಾತಿ ಕೋರಿ ಸಮುದಾಯಗಳು ಸಲ್ಲಿಸಿರುವ ಬೇಡಿಕೆ ಬಗ್ಗೆ ಹೇಳಿಕೆ ನೀಡದಂತೆ, ನಿರ್ಣಯ ಕೈಗೊಳ್ಳದಂತೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೂ ಸೂಚಿಸಲಾಗಿದೆ. ವಿರೋಧ ಪಕ್ಷಗಳ ಅನಗತ್ಯ ಟೀಕೆಗೆ ಅವಕಾಶ ದೊರೆಯದಂತೆ ಹೆಜ್ಜೆ ಇರಿಸುವಂತೆ ಅವರಿಗೂ ತಿಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಕೆಲವು ದಿನಗಳ ಹಿಂದೆ ವೀರಶೈವ ಲಿಂಗಾಯತ ಸಮುದಾಯಕ್ಕೆ ಒಬಿಸಿ ಸ್ಥಾನಮಾನ ನೀಡಲು ಮುಂದಾಗಿದ್ದ ಯಡಿಯೂರಪ್ಪ ಅವರನ್ನು ತಡೆದಿದ್ದ ವರಿಷ್ಠರು ಇಂಥ ವಿಷಯದಲ್ಲಿ ಹೈಕಮಾಂಡ್‌ ಸಂಪರ್ಕಿಸದೆ ಯಾವುದೇ ರೀತಿಯ ಘೋಷಣೆ ಬೇಡ ಎಂಬ ಖಡಕ್‌ ಸಂದೇಶ ರವಾನಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT