ಗುರುವಾರ , ಜೂನ್ 30, 2022
23 °C

ಲಕ್ಷದ್ವೀಪ: ‘ಜೈವಿಕ ಅಸ್ತ್ರ’ ಆರೋಪ, ನಟಿ ಆಯಿಷಾ ವಿರುದ್ಧ ದೇಶದ್ರೋಹ ಪ್ರಕರಣ

ಪಿಟಿಐ Updated:

ಅಕ್ಷರ ಗಾತ್ರ : | |

ತಿರುವನಂತಪುರ: ಲಕ್ಷದ್ವೀಪದ ಆಡಳಿತಾಧಿಕಾರಿ ಪ್ರಫುಲ್ ಕೆ.ಪಟೇಲ್‌ ಅವರು ‘ಜೈವಿಕ ಅಸ್ತ್ರ’ ಎಂದು ಸುದ್ದಿವಾಹಿನಿ ಚರ್ಚೆಯೊಂದರಲ್ಲಿ ಹೇಳಿದ್ದ ಲಕ್ಷದ್ವೀಪದ ಸಿನಿಮಾ ನಟಿ ಮತ್ತು ನಿರ್ದೇಶಕಿ ಆಯಿಷಾ ಸುಲ್ತಾನಾ ಅವರ ವಿರುದ್ಧ ಪೊಲೀಸರು ದೇಶದ್ರೋಹದ ಪ್ರಕರಣ ದಾಖಲಿಸಿದ್ದಾರೆ. ಇಲ್ಲಿನ ಬಿಜೆಪಿ ಘಟಕದ ಅಧ್ಯಕ್ಷ ನೀಡಿದ್ದ ದೂರಿನ ಅನ್ವಯ ಈ ಪ್ರಕರಣ ದಾಖಲಾಗಿದೆ. ಪೊಲೀಸರ ಈ ಕ್ರಮಕ್ಕೆ ಭಾರಿ ವಿರೊಧ ವ್ಯಕ್ತವಾಗಿದೆ.

ಇಲ್ಲಿನ ಆಡಳಿತಾಧಿಕಾರಿ ಪಟೇಲ್‌ ಅವರು ತೆಗೆದುಕೊಂಡ ಹಲವು ನಿರ್ಧಾರಗಳ ವಿರುದ್ಧ ಇಲ್ಲಿ ಹಲವು ದಿನಗಳಿಂದ ವ್ಯಾಪಕ ಪ್ರತಿಭಟನೆ ನಡೆಯುತ್ತಿದೆ. ಆಡಳಿತಾಧಿಕಾರಿಯ ಈ ನೀತಿಗಳಿಗೆ ಸಂಬಂಧಿಸಿದಂತೆ ಸ್ಥಳೀಯ ಸುದ್ದಿವಾಹಿನಿ ನಡೆಸಿದ್ದ ಚರ್ಚೆಯಲ್ಲಿ ಆಯಿಷಾ ಭಾಗವಹಿಸಿದ್ದರು. ‘ಆಡಳಿತಾಧಿಕಾರಿ ಪ್ರಫುಲ್ ಪಟೇಲ್‌ ಅವರನ್ನು ಕೇಂದ್ರ ಸರ್ಕಾರವು, ಲಕ್ಷದ್ವೀಪದ ಜನರ ವಿರುದ್ಧ ಜೈವಿಕ ಅಸ್ತ್ರದಂತೆ ಬಳಸುತ್ತಿದೆ’ ಎಂದು ಅವರು ಆರೋಪಿಸಿದ್ದರು.


ಆಯಿಷಾ ಸುಲ್ತಾನಾ

ಜೈವಿಕ ಅಸ್ತ್ರ ಎಂಬ ಪದ ಬಳಿಸಿದ್ದರ ವಿರುದ್ಧ ಇಲ್ಲಿನ ಬಿಜೆಪಿ ಘಟಕದ ಅಧ್ಯಕ್ಷ ಅಬ್ದುಲ್ ಖಾದರ್ ಅವರು ಪೊಲೀಸರಿಗೆ ದೂರು ನೀಡಿದ್ದರು.

‘ಆಯಿಷಾ ಸುಲ್ತಾನ ಅವರು ದೇಶದ್ರೋಹಿ. ಸುಳ್ಳುಸುದ್ದಿ ಹರಡುವ ಮೂಲಕ ಕೇಂದ್ರ ಸರ್ಕಾರದ ಗೌರವಕ್ಕೆ ಅವರು ಧಕ್ಕೆ ತಂದಿದ್ದಾರೆ. ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು’ ಎಂದು ಅವರು ದೂರಿನಲ್ಲಿ ಕೋರಿದ್ದರು. ಅಲ್ಲದೆ, ನಟಿಯ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಪ್ರದರ್ಶನ ನಡೆಸಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ಪೊಲೀಸರು ನಟಿಯ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 124 ಎ (ದೇಶದ್ರೋಹ) ಮತ್ತು ಸೆಕ್ಷನ್ 153 ಬಿ (ದ್ವೇಷ ಭಾಷಣ) ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಪ್ರಕರಣ ದಾಖಲಾದ ನಂತರದ ಕೆಲವೇ ಗಂಟೆಗಳಲ್ಲಿ ಆಯಿಷಾ ಸುಲ್ತಾನಾ ಅವರು ಈ ಬಗ್ಗೆ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಇಲ್ಲಿನ ಸಾಂಸ್ಕೃತಿಕ ಸಂಘಟನೆಯು ಆಯಿಷಾ ಅವರಿಗೆ ಬೆಂಬಲ ಘೋಷಿಸಿದೆ. ಸಾಮಾಜಿಕ ಜಾಲತಾಣಗಳಲ್ಲೂ ಆಯಿಷಾ ಅವರಿಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಸರಣಿ ಟ್ವೀಟ್ ಮಾಡುವ ಮೂಲಕ ಪ್ರಕರಣವನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿದ್ದಾರೆ. ಕೇರಳ ಸಿಪಿಎಂ ನಾಯಕ ಥಾಮಸ್ ಐಸಾಕ್ ಅವರು ಆಯಿಷಾ ಅವರಿಗೆ ಬೆಂಬಲ ಸೂಚಿಸಿದ್ದಾರೆ.

‘ಬೇರೇನು ಕರೆಯಬೇಕು?’

‘ಸುದ್ದಿ ವಾಹಿನಿಯ ಚರ್ಚೆಯಲ್ಲಿ ನಾನು ಜೈವಿಕ ಅಸ್ತ್ರ ಎಂಬ ಪದ ಬಳಸಿದ್ದೇನೆ. ಆಡಳಿತಾಧಿಕಾರಿ ಪಟೇಲ್ ಮತ್ತು ಅವರ ನೀತಿಗಳು ಲಕ್ಷದ್ವೀಪದ ಜನರ ವಿರುದ್ಧ ಜೈವಿಕ ಅಸ್ತ್ರಗಳಂತೆ ಕೆಲಸ ಮಾಡಿವೆ. ಹೀಗಾಗಿ ಈ ಪದ ಬಳಸಿದ್ದೇನೆ. ಲಕ್ಷದ್ವೀಪದಲ್ಲಿ ಒಂದೂ ಕೋವಿಡ್‌ ಪ್ರಕರಣ ಇರಲಿಲ್ಲ. ಪಟೇಲ್ ಅವರು ಕ್ವಾರಂಟೈನ್ ಅನ್ನು ರದ್ದುಪಡಿಸಿದರು. ಆನಂತರವೇ ಲಕ್ಷದ್ವೀಪದಲ್ಲಿ ಕೋವಿಡ್‌ ಪ್ರಕರಣಗಳು ಕಾಣಿಸಿಕೊಡವು. ಹೀಗಾಗಿ ಅವರನ್ನು ನಾನು ಜೈವಿಕ ಅಸ್ತ್ರಕ್ಕೆ ಹೋಲಿಸಿದೆ. ವ್ಯಕ್ತಿಯನ್ನು ಜೈವಿಕ ಅಸ್ತ್ರಕ್ಕೆ ಹೋಲಿಸಿದ್ದೇನೆಯೇ ಹೊರತು ಸರ್ಕಾರ ಅಥವಾ ದೇಶವನ್ನು ಅಲ್ಲ. ಇದನ್ನು ನೀವು ಅರ್ಥ ಮಾಡಿಕೊಳ್ಳಬೇಕು. ಅವರನ್ನು ಬೇರೆ ಏನೆಂದು ಕರೆಯಬೇಕು’ ಎಂದು ಆಯಿಷಾ ಅವರು ಪ್ರಶ್ನಿಸಿದ್ದಾರೆ.

‘ಪ್ರಕರಣ ಕೂಡಲೇ ಕೈಬಿಡಿ’

‘ನಮ್ಮ ಪ್ರಜಾಪ್ರಭುತ್ವದಲ್ಲಿ ಸರ್ಕಾರದ ವಿರುದ್ಧ ಮಾಡಿದ ಟೀಕೆಗಳು ಮತ್ತು ವಿಮರ್ಶೆಗಳು ಹಿಂಸಾಚಾರವನ್ನು ಪ್ರಚೋದಿಸದೇ ಇದ್ದರೆ ಅದು ದೇಶದ್ರೋಹವಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ಹಲವು ಬಾರಿ ಹೇಳಿದೆ. ಆದರೆ ಹಲವು ರಾಜ್ಯಗಳ ಪೊಲೀಸರು ಇದನ್ನು ಹಲವು ಬಾರಿ ಕಡೆಗಣಿಸಿದ್ದಾರೆ’ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಟ್ವೀಟ್ ಮಾಡಿದ್ದಾರೆ.

‘ಸುಪ್ರೀಂ ಕೋರ್ಟ್‌ನ ಅಭಿಪ್ರಾಯಗಳನ್ನು ಸ್ಪಷ್ಟಪಡಿಸುವ ಉದ್ದೇಶದಿಂದ ದೇಶದ್ರೋಹದ ಕಾನೂನಿಗೆ ಸಂಬಂಧಿಸಿದಂತೆ 2014-15ರಲ್ಲಿ ನಾನು ಸಂಸತ್ತಿನಲ್ಲಿ ಖಾಸಗಿ ಮಸೂದೆ ಮಂಡಿಸಿದ್ದೆ. ಆಯಿಷಾ ಅವರ ಹೇಳಿಕೆ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿರುವುದು ಸಂಪೂರ್ಣ ತಪ್ಪು. ಈ ಕಾನೂನು ಅನ್ವಯವೇ ಆಗುವುದಿಲ್ಲ. ಹೀಗಾಗಿ ನ್ಯಾಯಾಲಯದಲ್ಲಿ ಈ ಪ್ರಕರಣ ಬಿದ್ದುಹೋಗುತ್ತದೆ. ಆದರೆ ಪ್ರಕರಣ ಬೀಳುವವರೆಗೆ ಹೋರಾಡುವುದೇ ದೊಡ್ಡ ಶಿಕ್ಷೆ. ಈ ಕಾನೂನಿನಿಂದ ನಮ್ಮ ಪ್ರಜಾಪ್ರಭುತ್ವಕ್ಕೆ ಉಪಯೋಗವಿಲ್ಲ. ಇದು ಕಾನೂನು ಪ್ರಕ್ರಿಯೆಯ ದುರ್ಬಳಕೆ. ಆಯಿಷಾ ವಿರುದ್ಧದ ಪ್ರಕರಣವನ್ನು ಕೂಡಲೇ ಕೈಬಿಡಬೇಕು’ ಎಂದು ತರೂರ್ ಆಗ್ರಹಿಸಿದ್ದಾರೆ.

‘ಕೋವಿಡ್ ಹರಡಲು ಆಡಳಿತಾಧಿಕಾರಿಯೇ ಕಾರಣ’

'ಆಯಿಷಾ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಾಗಿದೆ. ಅವರು ಮಾಡಿದ ಅಪರಾಧ: ಆಡಳಿತಾಧಿಕಾರಿಯ ಆಡಳಿತ ನೀತಿಗಳನ್ನು ಜೈವಿಕ ಅಸ್ತ್ರ ಎಂದು ಕರೆದದ್ದು. ಕಾರಣ: ಕೋವಿಡ್‌ ಬಂದು ಒಂದು ವರ್ಷ ಕಳೆದರೂ, ಲಕ್ಷದ್ವೀಪದಲ್ಲಿ ಒಂದೂ ಕೋವಿಡ್‌ ಪ್ರಕರಣ ಇರಲಿಲ್ಲ. ಆದರೆ ಆಡಳಿತಾಧಿಕಾರಿಯು ಪ್ರವಾಸಿಗರ ಕ್ವಾರಂಟೈನ್‌ ನಿಯಮವನ್ನು ರದ್ದುಪಡಿಸಿದರು, ಈಗ ಲಕ್ಷದ್ವೀಪದಲ್ಲಿ ಕೋವಿಡ್‌ ತೀವ್ರವಾಗುತ್ತಿದೆ. ಇದು ದೇಶದ್ರೋಹವೇ!’ ಎಂದು ಸಿಪಿಎಂ ನಾಯಕ ಥಾಮಸ್ ಐಸಾಕ್ ಟ್ವೀಟ್ ಮಾಡಿದ್ದಾರೆ.

‘ಆಯಿಷಾ ಅವರನ್ನು ದೇಶವಿರೋಧಿ ಎನ್ನುವುದು ಸರಿಯಲ್ಲ. ಆಡಳಿತಾಧಿಕಾರಿಯ ಅಮಾನವೀಯ ನೀತಿಗಳ ವಿರುದ್ಧ ಅವರು ಪ್ರತಿಕ್ರಿಯಿಸಿದ್ದಾರೆ. ಆಡಳಿತಾಧಿಕಾರಿ ಪಟೇಲ್ ಅವರ ನೀತಿಯ ಕಾರಣದಿಂದಲೇ ಲಕ್ಷದ್ವೀಪದಲ್ಲಿ ಈಗ ಕೋವಿಡ್‌ ತಾಂಡವವಾಡುತ್ತಿದೆ. ಲಕ್ಷದ್ವೀಪದ ಸಾಂಸ್ಕೃತಿಕ ಸಮುದಾಯವು ಆಯಿಷಾ ಅವರ ಬೆಂಬಲಕ್ಕೆ ನಿಲ್ಲುತ್ತದೆ’ ಎಂದು ಲಕ್ಷದ್ವೀಪ ಸಾಹಿತ್ಯ ಪ್ರವರ್ತಕ ಸಂಘಂ ಬೆಂಬಲ ಘೋಷಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು