ಭಾನುವಾರ, ಜನವರಿ 16, 2022
28 °C

ಕೋವಿಡ್‌ ಮೊದಲು ಬಂದಿದ್ದು ಯಾರಿಗೆ? ಏನು ಹೇಳುತ್ತಿದೆ ಹೊಸ ಅಧ್ಯಯನ?

ಪಿಟಿಐ Updated:

ಅಕ್ಷರ ಗಾತ್ರ : | |

ನ್ಯೂಯಾರ್ಕ್‌: ಚೀನಾದ ವುಹಾನ್‌ ನಗರದಲ್ಲಿ ಮಾರುಕಟ್ಟೆಯಲ್ಲಿ ಮೀನು, ಕಡಲ ಮೂಲದ ಆಹಾರ ಪದಾರ್ಥಗಳನ್ನು ಮಾರುತ್ತಿದ್ದ ಮಹಿಳೆಗೆ ಕೋವಿಡ್‌ ಮೊದಲಿಗೆ ಕಾಣಿಸಿಕೊಂಡಿತ್ತು ಎಂದು ಹೊಸ ಅಧ್ಯಯನವೊಂದು ಹೇಳಿದೆ.

ಅಕೌಂಟೆಂಟ್‌ವೊಬ್ಬರಿಗೆ ಮೊದಲ ಬಾರಿಗೆ ಕೋವಿಡ್‌ ಬಂದಿತ್ತು ಎಂಬ ಊಹೆ ತಪ್ಪಾಗಿರುವ ಸಾದ್ಯತೆಗಳಿವೆ. ಈ ಅಕೌಂಟೆಂಟ್‌ ವುಹಾನ್‌ ಮಾರುಕಟ್ಟೆಯಿಂದ ಬಹುದೂರದಲ್ಲಿ ವಾಸಿಸುತ್ತಿದ್ದರು. ಸಾಂಕ್ರಾಮಿಕಕ್ಕೆ ಸಂಬಂಧಿಸಿದಂತೆ ವಿಶ್ವ ಆರೋಗ್ಯ ಸಂಸ್ಥೆ ರೂಪಿಸಿರುವ ಕಾಲಾನುಕ್ರಮಣಿಕೆಯೂ ತಪ್ಪಿರಬಹುದು ಎಂದು ಅಧ್ಯಯನ ಪ್ರತಿಪಾದಿಸಿದೆ.

ಮೊದಲ ಬಾರಿಗೆ ಕೊರೊನಾ ವೈರಸ್‌ ಸೋಂಕಿಗೆ ಒಳಗಾಗಿದ್ದ ಮಹಿಳೆಯು ಚೀನಾದ ವುಹಾನ್‌ನ ಪ್ರಾಣಿ ಮಾಂಸ ಮಾರುಕಟ್ಟೆಯಲ್ಲಿ ಕೆಲಸ ಮಾಡಿದ್ದರು ಎಂದು ಅಧ್ಯಯನ ಹೇಳುತ್ತಿದೆ ಎಂದು ನ್ಯೂಯಾರ್ಕ್‌ ಟೈಮ್ಸ್‌ ಗುರುವಾರ ವರದಿ ಮಾಡಿದೆ.

2019ರಲ್ಲಿ ಸಾಂಕ್ರಾಮಿಕವಾದ ಕೋವಿಡ್‌, ಜಗತ್ತಿನಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದು ವುಹಾನ್‌ ನಗರದಲ್ಲಿ.

ಕೋವಿಡ್-19 ಬಂದ ಮೊದಲ ವ್ಯಕ್ತಿ ಎಂದು ನಂಬಲಾಗಿರುವ ಅಕೌಂಟೆಂಟ್‌ಗೆ ರೋಗದ ಲಕ್ಷಣಗಳು ಕಾಣಿಸಿಕೊಂಡಿದ್ದು 2019ರ ಡಿ. 16ರಂದು. ಆದರೆ, ಅಷ್ಟುಹೊತ್ತಿಗಾಗಲೇ ಕೋವಿಡ್ ಹೊಮ್ಮಿಯಾಗಿತ್ತು ಎಂದು ಅರಿಜೋನಾ ವಿಶ್ವವಿದ್ಯಾಲಯದ ಪರಿಸರ ವಿಜ್ಞಾನ ಮತ್ತು ವಿಕಾಸಾತ್ಮಕ ಜೀವಶಾಸ್ತ್ರದ ಮುಖ್ಯಸ್ಥ ಮೈಕೆಲ್ ವೊರೊಬೆ ಹೇಳಿದ್ದಾರೆ. ಅವರ ಅಧ್ಯಯನ ವರದಿಯು ‘ಜರ್ನಲ್‌ ಸೈನ್ಸ್‌’ ಎಂಬ ವೈದ್ಯಕೀಯ ನಿಯತಕಾಲಿಕೆಯಲ್ಲಿ ಗುರುವಾರ ಪ್ರಕಟವಾಗಿದೆ.

‘ಹುವಾನಾನ್ ಮಾರುಕಟ್ಟೆಯಲ್ಲಿ ಕೆಲಸ ಮಾಡುತ್ತಿದ್ದ ಹಲವು ಕಾರ್ಮಿಕರಿಗೆ ರೋಗ ಲಕ್ಷಣಗಳು ಕಾಣಿಸಿಕೊಂಡ ಹಲವು ದಿನಗಳ ನಂತರ ಅಕೌಂಟೆಂಟ್‌ಗೆ ರೋಗ ಲಕ್ಷಣಗಳು ಕಾಣಿಸಿಕೊಂಡಿವೆ. ಮಾರುಕಟ್ಟೆಯ ಕೆಲಸಗಾರರ ಪೈಕಿ ಮೀನು, ಕಡಲ ಮೂಲದ ಆಹಾರ ಮಾರಾಟ ಮಾಡುತ್ತಿದ್ದ ಮಹಿಳೆಗೆ ಮೊದಲ ಬಾರಿಗೆ, ಅಂದರೆ, ಡಿ. 11ರಂದೇ ರೋಗ ಲಕ್ಷಣ ಕಾಣಿಸಿಕೊಂಡಿತ್ತು,’ ಎಂದು ವರದಿ ಹೇಳಿದೆ.

ಹುವಾನಾನ್ ಮಾರುಕಟ್ಟೆಯೊಂದಿಗಿನ ಮಾರಾಟಗಾರರ ಸಂಪರ್ಕ, ಮಾರುಕಟ್ಟೆಯಲ್ಲಿದ್ದವರ ಪೈಕಿ ಆಸ್ಪತ್ರೆಗೆ ಮೊದಲಿಗೆ ದಾಖಲಾದವರು ಮತ್ತು ಅವರ ಸಂಪರ್ಕಿತರ ಕಾಲಾನುಕ್ರಮಣಿಕೆ ಮತ್ತು ವಿಶ್ಲೇಷಣೆಯ ಮೂಲಕ ಮೈಕೆಲ್‌ ವೊರೊಬೆ ಈ ವಾದ ಮಂಡಿಸಿದ್ದಾರೆ.

ಕೊರೊನಾ ವೈರಸ್‌ ಉಗಮದ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆಗಳಾಗಿವೆ. ಆದರೆ, ಅದ್ಯಾವುದಕ್ಕೂ ಪೂರಕ ಸಾಕ್ಷ್ಯಗಳು ದೊರೆತಿಲ್ಲ. ವುಹಾನ್‌ನ ವೈರಾಣು ಪ್ರಯೋಗಾಲಯವೇ ಕೊರೊನಾದ ಉಗಮ ಸ್ಥಾನ ಎಂದು ಅಮೆರಿಕ ಪ್ರತಿಪಾದಿಸಿದೆ. ಆದರೆ, ಚೀನಾ ಇದನ್ನು ನಿರಾಕರಿಸಿದೆ.

ಸದ್ಯ ಜಗತ್ತಿನ 25,65,10,022 ಮಂದಿಗೆ ಈ ವರೆಗೆ ಸೋಂಕು ತಗುಲಿದ್ದು, 51,50,894 ಮಂದಿ ಮೃತಪಟ್ಟಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು