ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮಿತ್‌ ಶಾ ಅಧ್ಯಕ್ಷತೆಯಲ್ಲಿ ಸಹಕಾರ ನಾಯಕರ ಮೊದಲ ಸಭೆ

Last Updated 22 ಸೆಪ್ಟೆಂಬರ್ 2021, 22:02 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಸಹಕಾರ ಕ್ಷೇತ್ರದ ಪ್ರತಿನಿಧಿಗಳನ್ನು ಕೇಂದ್ರ ಸಹಕಾರ ಸಚಿವ ಅಮಿತ್‌ ಶಾ ಅವರು ಶನಿವಾರ ಭೇಟಿಯಾಗಲಿದ್ದಾರೆ. ಕೇಂದ್ರದಲ್ಲಿ ಹೊಸದಾಗಿ ಸಹಕಾರ ಸಚಿವಾಲಯ ಸೃಷ್ಟಿಯಾದ ಬಳಿಕ ನಡೆಯುತ್ತಿರುವ ಮಹತ್ವದ ಕಾರ್ಯಕ್ರಮ ಇದು. ಸಹಕಾರ ಕ್ಷೇತ್ರಕ್ಕೆ ಹೊಸ ಸಚಿವಾಲಯ ರಚನೆಯ ಬಗ್ಗೆ ಈ ಕ್ಷೇತ್ರದ ಧುರೀಣರು ಮತ್ತು ರಾಜಕೀಯ ಪಕ್ಷಗಳಲ್ಲಿ ಆತಂಕ ಮತ್ತು ಕಳವಳಗಳು ಇವೆ. ಅದನ್ನು ಹೋಗಲಾಡಿಸುವುದು ಈ ಸಭೆಯ ಉದ್ದೇಶ ಎಂದು ಹೇಳಲಾಗಿದೆ.

ಕೇಂದ್ರದಲ್ಲಿ ಸಹಕಾರ ಸಚಿವಾಲಯವನ್ನು ಇದೇ ಜುಲೈನಲ್ಲಿ ಆರಂಭಿಸಲಾಗಿದೆ. ಗೃಹ ಸಚಿವ ಅಮಿತ್ ಶಾ ಅವರಿಗೆ ಈ ಸಚಿವಾಲಯದ ಹೊಣೆಯನ್ನೂ ವಹಿಸಲಾಗಿದೆ. ಸಹಕಾರ ಸಂಘಗಳ ಪ್ರತಿನಿಧಿಗಳು ಮತ್ತು ಮುಖಂಡರನ್ನು ಶಾ ಅವರು ಪ್ರತ್ಯೇಕವಾಗಿ ಭೇಟಿಯಾಗಿದ್ದಾರೆ. ಆದರೆ, ಶನಿವಾರ ನಡೆಯುವ ಕಾರ್ಯಕ್ರಮದಲ್ಲಿ ದೇಶದ ವಿವಿಧ ಭಾಗಗಳ ವೈವಿಧ್ಯಮಯ ಹಿನ್ನೆಲೆಯ ಸಹಕಾರಿ ನಾಯಕರು ಭಾಗಿಯಾಗಲಿದ್ದಾರೆ.

ಹೊಸ ಸಚಿವಾಲಯಕ್ಕೆ ಸಂಬಂಧಿಸಿ ತಮ್ಮ ಯೋಜನೆ ಏನು, ಕ್ಷೇತ್ರಕ್ಕಾಗಿ ತಮ್ಮ ಮುನ್ನೋಟ ಏನು ಎಂಬುದನ್ನು ಶಾ ಅವರು ಸಭೆಯಲ್ಲಿ ಬಿಚ್ಚಿಡುವ ಸಾಧ್ಯತೆ ಇದೆ. ಸಹಕಾರ ಕ್ಷೇತ್ರದಿಂದ ರಾಜಕೀಯ ಶಕ್ತಿ ಪಡೆದುಕೊಂಡ ಹಲವು ನಾಯಕರು ದೇಶದಲ್ಲಿ ಇದ್ದಾರೆ. ಈ ಕ್ಷೇತ್ರವನ್ನು ಬಿಜೆಪಿ ಹಿಡಿತಕ್ಕೆ ತೆಗೆದುಕೊಳ್ಳುವುದಕ್ಕಾಗಿಯೇ ಹೊಸ ಸಚಿವಾಲಯ ಸೃಷ್ಟಿಸಲಾಗಿದೆ ಎಂಬ ಅನುಮಾನ ಈ ನಾಯಕರಲ್ಲಿ ಮೂಡಿದೆ. ಹೊಸ ಸಚಿವಾಲಯ ಸ್ಥಾಪನೆಯನ್ನು ಮುಕ್ತವಾಗಿ ಯಾರೂ ಸ್ವಾಗತಿಸದಿರಲು ಇದು ಕಾರಣವಾಗಿದೆ.

‘ಸಹಕಾರ ಕ್ಷೇತ್ರದ ಎಲ್ಲ ವಿಭಾಗಗಳ ಪ್ರತಿನಿಧಿಗಳೂ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಮೀನುಗಾರಿಕೆ, ಹೈನುಗಾರಿಕೆ, ನೇಕಾರಿಕೆ, ಸಕ್ಕರೆ, ನಗರ ಸಹಕಾರ ಬ್ಯಾಂಕುಗಳು, ರಸಗೊಬ್ಬರ ಸಹಕಾರ ಸಂಘಗಳು ಎಲ್ಲದರ ಪ್ರತಿನಿಧಿಗಳೂ ಹಾಜರಾಗಲಿದ್ದಾರೆ’ ಎಂದು ಭಾರತ ರಾಷ್ಟ್ರೀಯ ಸಹಕಾರ ಒಕ್ಕೂಟದ ಅಧ್ಯಕ್ಷ ದಿಲೀಪ್‌ ಸಂಘಾನಿ ಹೇಳಿದ್ದಾರೆ.

‘ನೂತನ ಸಚಿವಾಲಯದ ಬಗ್ಗೆ ಆಕ್ಷೇಪ ಇರುವವರು, ಮುಂದೆಯೂ ಆ ಬಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಾರೆ. ಆದರೆ ಸಚಿವಾಲಯವು ಈ ಬಗ್ಗೆ ಇರುವ ಸಂದೇಹಗಳನ್ನು ಪರಿಹರಿಸುತ್ತದೆ ಮತ್ತು ಸಹಕಾರ ಕ್ಷೇತ್ರಕ್ಕೆ ಸಕಾರಾತ್ಮಕವಾದ ಸಂದೇಶವನ್ನು ರವಾನಿಸುತ್ತದೆ’ ಎಂದು ಸಂಘಾನಿ ಹೇಳಿದ್ದಾರೆ. ನೂತನ ಸಚಿವಾಲಯದ ಬಗ್ಗೆ ವ್ಯಕ್ತವಾಗುತ್ತಿರುವ ಕಳವಳದ ಬಗ್ಗೆ ಕೇಳಲಾದ ಪ್ರಶ್ನೆಗೆ ಅವರು ಈ ರೀತಿ ಉತ್ತರಿಸಿದ್ದಾರೆ.

ಈ ಸಮಾವೇಶದ ವಿಷಯ ‘ಸಹಕಾರದಿಂದ ಸಮೃದ್ಧಿ'. ದೇಶದಲ್ಲಿ ಸಹಕಾರ ಚಳವಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಗ್ರಾಮ ಮಟ್ಟದಿಂದ, ರಾಷ್ಟ್ರಮಟ್ಟದವರೆಗಿನ ಸಹಕಾರ ಸಂಘಗಳ ನಾಯಕರು ಮತ್ತು ಪ್ರತಿನಿಧಿಗಳನ್ನು ಒಂದೆಡೆ ಸೇರಿಸಲಾಗುತ್ತಿದೆ. ಸಹಕಾರ ಕ್ಷೇತ್ರವನ್ನು ಬಲಪಡಿಸುವ ಮತ್ತು ಆ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಸುವ ಸಂಬಂಧ ತೆಗೆದುಕೊಳ್ಳಲಾಗುವ ಕ್ರಮಗಳ ಬಗ್ಗೆ ಸಚಿವರು ಈ ವಿಚಾರ ಸಂಕಿರಣದಲ್ಲಿ ಮಾಹಿತಿ ನೀಡಬಹುದು ಎಂದು ನಿರೀಕ್ಷಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಸಹಕಾರ ಕ್ಷೇತ್ರವನ್ನು ಬಲಪಡಿಸುವ ಉದ್ದೇಶದಿಂದ ಸಚಿವಾಲಯವು ಪ್ರತ್ಯೇಕ ಆಡಳಿತ ವರ್ಗ, ಕಾನೂನು ಮತ್ತು ನೀತಿಯನ್ನು ರೂಪಿಸಲಿದೆ. ಬಹುರಾಜ್ಯ ಸಹಕಾರ ಸೊಸೈಟಿಗಳ ಅಭಿವೃದ್ಧಿಗೆ ಮತ್ತು ಅವುಗಳ ವ್ಯವಹಾರವನ್ನು ಸುಗಮಗೊಳಿಸುವ ಸಂಬಂಧ ಸಚಿವಾಲಯವು ಕ್ರಮ ತೆಗೆದುಕೊಳ್ಳಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಾರ್ಯಕ್ರಮ ವಿವರ
*
ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಕಾರ್ಯಕ್ರಮ
*ಸಹಕಾರ ಕ್ಷೇತ್ರದ ನಾಯಕರ ಒಂದು ದಿನದ ಸಮಾವೇಶ
*2,200 ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ
*ಗ್ರಾಮ, ತಾಲ್ಲೂಕು, ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರತಿನಿಧಿಗಳಿಗೆ ಅವಕಾಶ
*ವರ್ಚುವಲ್‌ ಮಾಧ್ಯಮದಲ್ಲಿ ಲಕ್ಷಾಂತರ ಮಂದಿ ಕಾರ್ಯಕ್ರಮದಲ್ಲಿ ಭಾಗಿಯಾಗುವ ನಿರೀಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT