ಮಂಗಳವಾರ, ಸೆಪ್ಟೆಂಬರ್ 28, 2021
20 °C
ಸಿಬಿಐ ವಿರುದ್ಧ ‘ಸುಪ್ರೀಂ’ ಅತೃಪ್ತಿ ಬೆನ್ನಲ್ಲೇ ಈ ಬೆಳವಣಿಗೆ

ನ್ಯಾಯಮೂರ್ತಿಗಳಿಗೆ ಅಪಮಾನ: ಐವರ ಸೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಸುಪ್ರೀಂ ಕೋರ್ಟ್ ಮತ್ತು ಆಂಧ್ರ ಪ್ರದೇಶ ಹೈಕೋರ್ಟ್‌ ನ್ಯಾಯಮೂರ್ತಿಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ವಿಷಯಗಳನ್ನು ಪ್ರಕಟಿಸಿದ್ದ ಆರೋಪದ ಮೇಲೆ ಐವರನ್ನು ಬಂಧಿಸಿರುವುದಾಗಿ ಸಿಬಿಐ ಭಾನುವಾರ ತಿಳಿಸಿದೆ. ವೈಎಸ್‌ಆರ್‌ ಕಾಂಗ್ರೆಸ್‌ನ ಸಂಸದ ನಂದಿಗಾಮ ಸುರೇಶ್‌ ಮತ್ತು ಮುಖಂಡ ಅಮಂಚಿ ಕೃಷ್ಣಮೋಹನ್‌ ಅವರು ಈ ಪ್ರಕರಣದಲ್ಲಿ ಹೊಂದಿರ
ಬಹುದಾದ ಪಾತ್ರದ ಬಗ್ಗೆಯೂ ತನಿಖೆ ನಡೆಯುತ್ತಿದೆ. 

ನ್ಯಾಯಮೂರ್ತಿಗಳು ಮತ್ತು ಕೋರ್ಟ್‌ಗಳು ನೀಡುವ ದೂರನ್ನು ಸಿಬಿಐ ಸೇರಿ ಇತರ ಸಂಸ್ಥೆಗಳು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್‌.ವಿ ರಮಣ ಇತ್ತೀಚೆಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಅವರ ಹೇಳಿಕೆಯ ಬೆನ್ನಲ್ಲೇ ಸಿಬಿಐ ಈ ಮಾಹಿತಿ ನೀಡಿದೆ.

ಇಬ್ಬರು ಆರೋಪಿಗಳಾದ ಆಂಧ್ರ ಪ್ರದೇಶದ ಪಟ್ಟಪು ಆದರ್ಶ್‌ ಮತ್ತು ಲವಣೂರು ಸಾಂಬಶಿವ ರೆಡ್ಡಿ ಅವರನ್ನು ಶನಿವಾರ ಬಂಧಿಸಲಾಗಿದೆ. ಅವರಿಬ್ಬರನ್ನೂ ಭಾನುವಾರ ಗುಂಟೂರು ಕೋರ್ಟ್‌ನಲ್ಲಿ ಹಾಜರುಪಡಿಸಲಾಯಿತು. ಬಂಧಿತರಲ್ಲಿ ಒಬ್ಬರು ತಮ್ಮ ನಿಜವಾದ ಗುರುತು ಮರೆಮಾಚಿ ಬೇರೆ ಹೆಸರಿನ ಪಾಸ್‌ಪೋರ್ಟ್‌ ಬಳಸಿದ್ದಾರೆ ಎಂದು ಸಿಬಿಐ ಆರೋಪಿಸಿದೆ. ಅದಕ್ಕೂ ಮೊದಲು ಮೂವರನ್ನು ಬಂಧಿಸ
ಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕುವೈಟ್‌ನಲ್ಲಿದ್ದ ರಾಜಶೇಖರ ರೆಡ್ಡಿ ಅವರು ಭಾರತದಲ್ಲಿ ಬಂದಿಳಿದ ಕೂಡಲೇ ಜುಲೈ 9ರಂದು ಬಂಧಿಸಲಾಗಿದೆ. 

ನ್ಯಾಯಮೂರ್ತಿಗಳ ಬಗ್ಗೆ ಅವಹೇಳನಕಾರಿ ವಿಷಯ ಪ್ರಕಟಿಸಿದ ಪ್ರಕರಣದಲ್ಲಿ 16 ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ತನಿಖೆ ನಡೆಸಬೇಕು ಎಂದು ಆಂಧ್ರ ಪ್ರದೇಶ ಹೈಕೋರ್ಟ್‌, ಸಿಬಿಐಗೆ ಕಳೆದ ನವೆಂಬರ್‌ 11ರಂದು ನಿರ್ದೇಶನ ನೀಡಿತ್ತು. ತನಿಖಾ ವರದಿಯನ್ನು ಮೊಹರು ಮಾಡಿದ ಲಕೋಟೆಯಲ್ಲಿ ಸಲ್ಲಿಸಬೇಕು ಎಂದು ಸೂಚಿಸಿತ್ತು. 

16 ಆರೋಪಿಗಳ ಪೈಕಿ 13 ಮಂದಿಯನ್ನು ಪತ್ತೆ ಮಾಡಲಾಗಿದೆ. ಅವರಲ್ಲಿ 11 ಮಂದಿಯನ್ನು ತನಿಖೆಗೆ ಒಳಪಡಿಸಲಾಗಿದೆ. ಮೂವರು ವಿದೇಶದಲ್ಲಿ ಇದ್ದಾರೆ. ತನಿಖೆಗೆ ಒಳಪಡಿಸಿದ 11 ಮಂದಿಯ ಪೈಕಿ ಐವರನ್ನು ಬಂಧಿಸಲಾಗಿದೆ. ಆರು ಮಂದಿಯ ವಿರುದ್ಧ ಸಾಕ್ಷ್ಯಗಳು ಸಿಕ್ಕಿವೆ. ವಿದೇಶದಲ್ಲಿ ಇರುವ ವ್ಯಕ್ತಿಗಳನ್ನು ತನಿಖೆಗೆ ಒಳಪಡಿಸಲು ಸಿಬಿಐ ಪ್ರಯತ್ನಿಸುತ್ತಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಪರಸ್ಪರ ಕಾನೂನು ನೆರವು ಒಪ್ಪಂದ (ಎಂಎಲ್‌ಎಟಿ) ಮತ್ತು ಇಂಟರ್‌ಪೋಲ್‌ ನೆರವಿನಿಂದ ವಿದೇಶಗಳಿಂದಲೂ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಸಿಬಿಐ ವಕ್ತಾರ ಆರ್‌.ಸಿ. ಜೋಶಿ ಹೇಳಿದ್ದಾರೆ.

ಈ ಪ್ರಕರಣದ ಹಿಂದಿರುವ ಸಂಚನ್ನು ಬಯಲಿಗೆಳೆಯುವ ದಿಸೆಯಲ್ಲಿ ಸಿಬಿಐ ಪರಿಶೀಲನೆ ನಡೆಸುತ್ತಿದೆ. ಎಫ್‌ಐಆರ್‌ ನಲ್ಲಿ ಇಲ್ಲದ ವ್ಯಕ್ತಿಗಳು ಪ್ರಕರಣದಲ್ಲಿ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು