ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಹ, ಭೂಕುಸಿತ: ಅಸ್ಸಾಂನಲ್ಲಿ 5 ಜನರ ಸಾವು, 1.92 ಲಕ್ಷ ಮಂದಿ ಸಂತ್ರಸ್ತರು

Last Updated 17 ಮೇ 2022, 20:44 IST
ಅಕ್ಷರ ಗಾತ್ರ

ಗುವಾಹಟಿ/ಹ್ಯಾಫ್ಲಾಂಗ್‌: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಅಸ್ಸಾಂನಲ್ಲಿ ಭೀಕರ ಪ್ರವಾಹ ಮತ್ತು ಭೂಕುಸಿತ ಉಂಟಾಗಿದ್ದು, ಎಂಟು ಮಂದಿ ಮೃತಪಟ್ಟಿದ್ದಾರೆ. 20 ಜಿಲ್ಲೆಗಳಲ್ಲಿ ನಾಲ್ಕು ಲಕ್ಷ ಜನರು ತೊಂದರೆಗೀಡಾಗಿದ್ದಾರೆ.

ಮಧ್ಯ ಅಸ್ಸಾಂ ಜಿಲ್ಲೆಗಳಾದ ದಿಮಾ ಹಸಾವೊ, ಹೋಜೈ ಮತ್ತು ದಕ್ಷಿಣ ಅಸ್ಸಾಂನ ಕ್ಯಾಚಾರ್ ಜಿಲ್ಲೆಗಳಲ್ಲಿ ಹೆಚ್ಚು ಹಾನಿಯಾಗಿದೆ. ಮಳೆ ಮತ್ತು ಭೂಕುಸಿತದಿಂದಾಗಿ ಲುಮ್ಡಿಂಗ್-ಬದರ್‌ಪುರ್ ಪರ್ವತ ವಲಯದ ರೈಲು ಮಾರ್ಗಗಳು, ದಿಮಾ ಹಸಾವೊನಲ್ಲಿ ರೈಲು ಹಳಿಗಳು ಕೊಚ್ಚಿ ಹೋಗಿವೆ. ಇದರಿಂದ ಈ ಪ್ರದೇಶಗಳು ರಾಜ್ಯದ ಉಳಿದ ಭಾಗಗಳಿಂದ ಸಂಪರ್ಕ ಕಡಿದುಕೊಂಡಿವೆ.

ದಿಮಾ ಹಸಾವೊ ವಿಭಾಗದಲ್ಲಿ ಲುಮ್ಡಿಂಗ್‌–ಬದರ್ಪುರ್‌ ಮಾರ್ಗದಲ್ಲಿ ಭೂ ಕುಸಿತ ಮತ್ತು ರೈಲು ಹಳಿಯ ಮೇಲೆ ನೀರು ನಿಂತಿರುವ ಕಾರಣ ಎರಡು ದಿನಗಳಿಂದ ಸಿಲುಕಿಗೊಂಡಿದ್ದ ಎರಡು ರೈಲಿನಿಂದ 2,800 ಪ್ರಯಾಣಿಕರನ್ನು ಸ್ಥಳಾಂತರಿಸಲಾಗಿದೆ. ಡಿಟೋಕ್ಚೆರಾ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದ ಸುಮಾರು 1,600 ರೈಲು ಪ್ರಯಾಣಿಕರನ್ನು ರಕ್ಷಿಸಲಾಗಿದೆ. ಅವರನ್ನು ಬದರ್‌ಪುರ್, ಸಿಲ್ಚಾರ್‌ಗೆ ಕಳುಹಿಸಲಾಗಿದೆ.

‘1,600 ಪ್ರಯಾಣಿಕರ ಪೈಕಿ 119 ಜನರನ್ನು ವಾಯುಪಡೆಯ ಹೆಲಿಕಾಪ್ಟರ್‌ಗಳ ಮೂಲಕ ಸ್ಥಳಾಂತರಿಸಲಾಗಿದೆ’ ಎಂದು ಈಶಾನ್ಯ ವಲಯದ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸವ್ಯಸಾಚಿ ಡಿ ಸೋಮವಾರ ತಿಳಿಸಿದ್ದಾರೆ.

ನಿರಂತರ ಮಳೆಯಿಂದಾಗಿ ಲುಮ್ಡಿಂಗ್- ಬದರ್‌ಪುರ ವಲಯದಲ್ಲಿ ಕನಿಷ್ಠ 53 ಸ್ಥಳಗಳಲ್ಲಿ ಭೂಕುಸಿತ ಉಂಟಾಗಿದೆ ಎಂದು ಅವರು ಹೇಳಿದ್ದಾರೆ.

ನ್ಯೂ ಹ್ಯಾಫ್ಲಾಂಗ್ ರೈಲು ನಿಲ್ದಾಣವು ಸಂಪೂರ್ಣವಾಗಿ ಅವಶೇಷಗಳಿಂದ ತುಂಬಿದೆ. ನಿಲ್ದಾಣದಲ್ಲಿ ನಿಂತಿದ್ದ ಖಾಲಿ ಪ್ಯಾಸೆಂಜರ್ ರೈಲು ಬೃಹತ್ ಭೂಕುಸಿತದಿಂದಾಗಿ ಕೊಚ್ಚಿಹೋಗಿದೆ. 18 ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.

ಸೋಮವಾರದ ನಿರಂತರ ಮಳೆಯು ಮತ್ತಷ್ಟು ಭೂಕುಸಿತ ಉಂಟು ಮಾಡಿದ್ದು, ರಕ್ಷಣಾ ಪ್ರಯತ್ನಗಳಿಗೆ ಹಿನ್ನಡೆಯಾಗಿದೆ. ಹಾನಿಗೊಳಗಾದ ಮಾರ್ಗಗಳನ್ನು ಮರುಸ್ಥಾಪಿಸಲು ಮತ್ತು ದಕ್ಷಿಣ ಅಸ್ಸಾಂ, ಮಣಿಪುರ, ತ್ರಿಪುರಾ ಮತ್ತು ಮಿಜೋರಾಂಗಳಿಗೆ ರೈಲು ಸೇವೆಗಳನ್ನು ಮರುಪ್ರಾರಂಭಿಸಲು ರೈಲ್ವೆ ಈಗ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ.

ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎಎಸ್‌ಡಿಎಂಎ) ಸೋಮವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಪ್ರವಾಹ ಮತ್ತು ಭೂಕುಸಿತದಿಂದ ಸಂತ್ರಸ್ತರಾದ 32,900 ಕ್ಕೂ ಹೆಚ್ಚು ಜನರಿಗೆ ಬಿಸ್ವನಾಥ್, ದಿಮಾ ಹಸಾವೊ, ಹೊಜೈ, ಕರ್ಬಿ ಅಂಗ್ಲಾಂಗ್ ವೆಸ್ಟ್, ನಾಗಾಂವ್ ಮತ್ತು ಉದಲ್ಗುರಿ ಜಿಲ್ಲೆಗಳಲ್ಲಿ 67 ಪರಿಹಾರ ಶಿಬಿರಗಳಲ್ಲಿ ಆಶ್ರಯ ನೀಡಲಾಗಿದೆ ಎಂದು ತಿಳಿಸಿದೆ.

ಬ್ರಹ್ಮಪುತ್ರಾ ಮತ್ತು ಕೊಪಿಲಿ ನದಿಗಳು ಕ್ರಮವಾಗಿ ಜೋರ್ಹತ್ ಮತ್ತು ನಾಗಾಂವ್ ಜಿಲ್ಲೆಗಳ ನೇಮತಿಘಾಟ್ ಮತ್ತು ಕಂಪುರದಲ್ಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.

ಪರಿಹಾರ ಕೇಂದ್ರ ಆರಂಭ: ‘698 ಗ್ರಾಮಗಳನ್ನು ಒಳಗೊಂಡಂತೆ 20 ಜಿಲ್ಲೆಗಳು ಪ್ರವಾಹಕ್ಕೆ ತುತ್ತಾಗಿದ್ದು, ಏಳು ಜಿಲ್ಲೆಗಳಲ್ಲಿ 55 ಪರಿಹಾರ ಕೇಂದ್ರಗಳನ್ನು ತೆರೆದು, 32,959 ಜನರಿಗೆ ಆಶ್ರಯ ನೀಡಲಾಗಿದೆ’ ಎಂದು ಅಸ್ಸಾಂನ ವಿಕೋಪ ನಿರ್ವಹಣೆ ಪ್ರಾಧಿಕಾರ ಹೇಳಿದೆ.

ಅರುಣಾಚಲ ಪ್ರದೇಶದಲ್ಲಿ ಭೂ ಕುಸಿತ

ಇಟಾನಗರ: ಭಾರಿ ಮಳೆಯಿಂದಾಗಿ ಅರಣಾಚಲ ಪ್ರದೇಶದಲ್ಲಿ ವಿವಿಧಡೆ ಭೂ ಕುಸಿತ ಉಂಟಾಗಿದ್ದು, ಹಲವು ಪ್ರದೇಶಗಳ ಸಂಪರ್ಕ ಕಡಿತಗೊಂಡಿದೆ ಎಂದು ಮಂಗಳವಾರ ಅಧಿಕಾರಿಗಳು ತಿಳಿಸಿದ್ದಾರೆ.

ಬೃಹತ್‌ ಭೂ ಕುಸಿತದಿಂದ ಇಟಾನಗರ ಮತ್ತು ಜಿರೊ ನಡುವೆ ರಸ್ತೆ ಮಾರ್ಗ ಸಂ‍ಪೂರ್ಣ ಮುಚ್ಚಿ ಹೋಗಿದೆ. ರಸ್ತೆ ತೆರವು ಕಾರ್ಯಾಚರಣೆ ನಡೆಯುತ್ತಿದ್ದು, ನೂರಾರು ವಾಹನಗಳು ಸಿಲುಕಿಕೊಂಡಿವೆ. ಭಾನುವಾರ ಪಂಜಾಬಿ ಡಾಬಾದ ಮೇಲೆ ಭೂ ಕುಸಿತ ಉಂಟಾಗಿ ಮಹಿಳೆ ಸೇರಿ, ಇಬ್ಬರು ಜೀವಂತ ಸಮಾಧಿಯಾಗಿದ್ದಾರೆ.

ಕೇರಳ: 9 ಜಿಲ್ಲೆಗಳಲ್ಲಿ ಆರೆಂಜ್‌ ಅಲರ್ಟ್‌

ತಿರುವನಂತಪುರ: ಕೇರಳದಲ್ಲಿ ಮಳೆ ಮುಂದುವರೆದಿದ್ದು, ಭಾರತೀಯ ಹವಾಮಾನ ಇಲಾಖೆ ಒಂಭತ್ತು ಜಿಲ್ಲೆಗಳಲ್ಲಿ ಆರೆಂಜ್‌ ಅಲರ್ಟ್‌ ಘೋಷಣೆ ಮಾಡಿದ್ದು, ಏಳು ಜಿಲ್ಲೆಗಳಲ್ಲಿ ಬುಧವಾರ ಭಾರಿ ಮಳೆಯಾಗುವ ಮುನ್ಸೂಚನೆಯನ್ನೂ ನೀಡಿದೆ. ಎರ್ನಾಕುಲಂ, ಇಡುಕ್ಕಿ, ತ್ರಿಶ್ಯೂರ್‌, ಪಾಲಕ್ಕಾಡ್‌, ಮಲಪ್ಪುರ, ಕೋಯಿಕ್ಕೋಡ್‌, ವಯನಾಡ್‌, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ. ರಾಜ್ಯದಲ್ಲಿ ಘೋಷಿಸಲಾಗಿದ್ದ ರೆಡ್‌ ಅಲರ್ಟ್‌ ಅನ್ನು ವಾಪಸ್ ಪಡೆಯಲಾಗಿದೆ.

ಚಂಡಮಾರುತ ಲಕ್ಷ ದ್ವೀಪದಿಂದ ಕೇರಳದ ಕಡೆ ಧಾವಿಸುತ್ತಿದ್ದು ರಾಜ್ಯದ ಹಲವಡೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಕೇರಳ ವಿಕೋಪ ನಿರ್ವಹಣೆ ಪ್ರಾಧಿಕಾರವು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT