ಶ್ರೀನಗರ ಹಿಮಪಾತ: ವಿಮಾನ ಸೇವೆ ಸ್ಥಗಿತ; ವಾಹನ ಸಂಚಾರವೂ ಅಸ್ತವ್ಯಸ್ತ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಮಂಗಳವಾರವೂ ಭಾರೀ ಹಿಮಪಾತ ಆಗಿದೆ. ಇದರಿಂದ ಶ್ರೀನಗರದಲ್ಲಿ ಸತತ ಮೂರನೇ ದಿನವೂ ವಿಮಾನ ಸಂಚಾರ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
‘ಹವಾಮಾನದಲ್ಲಿ ಸುಧಾರಣೆ ಕಂಡುಬಂದಲ್ಲಿ ವಿಮಾನಸೇವೆ ಪುನರಾರಂಭ ಆಗಲಿದೆ’ ಎಂದು ಹೇಳಿದರು.
‘ರನ್‌ವೇಯಿಂದ ಹಿಮವನ್ನು ತೆರವುಗೊಳಿಸಲಾಗಿದೆ. ಆದರೆ ಹಿಮಪಾತದಿಂದಾಗಿ ವಾಯುಮಾರ್ಗವು ಸ್ಷಷ್ಟವಾಗಿ ಗೋಚರಿಸುತ್ತಿಲ್ಲ. ಹಾಗಾಗಿ ವಿಮಾನ ಹಾರಾಟ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ’ ಎಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ವಾಹನ ಸಂಚಾರ ಅಸ್ತವ್ಯಸ್ತ: ಇನ್ನೊಂದೆಡೆ ಕಾಶ್ಮೀರದಲ್ಲಿ ಹಿಮಪಾತದಿಂದಾಗಿ ರಸ್ತೆಗಳಲ್ಲಿ ವಾಹನ ಸಂಚಾರವೂ ಅಸ್ತವ್ಯಸ್ತವಾಗಿದೆ. ಸತತ ಎರಡನೇ ದಿನವೂ ಜಮ್ಮ– ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಮತ್ತು ಮೊಘಲ್ ರಸ್ತೆಯಲ್ಲಿ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ಹಿಮಪಾತದಿಂದಾಗಿ ಹಲವು ಹೆದ್ದಾರಿಗಳಲ್ಲಿ 4500ಕ್ಕೂ ಹೆಚ್ಚು ವಾಹನಗಳು ಸಿಲುಕಿಕೊಂಡಿವೆ.
ಜಮ್ಮು ಮತ್ತು ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಜವಾಹರ್ ಸುರಂಗ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಹಿಮ ತುಂಬಿಹೋಗಿದೆ. ಇದರಿಂದಾಗಿ ರಸ್ತೆಗಳಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ಸಂಚಾರ ನಿಯಂತ್ರಣ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.