ಮಂಗಳವಾರ, ಆಗಸ್ಟ್ 16, 2022
29 °C
ಕಣಿವೆಯ ಬಹುತೇಕ ಪ್ರದೇಶಗಳಲ್ಲಿ ಬೀಳುತ್ತಿರುವ ಹಿಮ

ಕಾಶ್ಮೀರ ಕಣಿವೆಯಲ್ಲಿ ಹೆಚ್ಚಿನ ಪ್ರಮಾಣದ ಹಿಮ; ಜನಜೀವನ ಅಸ್ತವ್ಯಸ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀನಗರ: ಕಾಶ್ಮೀರ ಕಣಿವೆಯ ಬಹುತೇಕ ಪ್ರದೇಶಗಳಲ್ಲಿ ಮಂಗಳವಾರ ಹೆಚ್ಚಿನ ಪ್ರಮಾಣದ ಹಿಮ ಸುರಿಯುತ್ತಿರುವ ಪರಿಣಾಮ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಕಣಿವೆ ಪ್ರದೇಶವು ದೇಶದ ಸಂಪರ್ಕ ಕಡಿದುಕೊಂಡಿದೆ.

ಹಿಮ ಬೀಳುತ್ತಿರುವುದರಿಂದ ಕಾಶ್ಮೀರ ಕಣಿವೆ ಸಂಪರ್ಕ ಕಲ್ಪಿಸುವ ಏಕೈಕ ರಸ್ತೆ ಜಮ್ಮು–ಶ್ರೀನಗರ ರಾಷ್ಟ್ರೀಯ ಹೆದ್ದಾರಿಯು ಬಂದ್‌ ಆಗಿದೆ. ಹವಾಮಾನ ವೈಪರಿತ್ಯದಿಂದ ಶ್ರೀನಗರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿವಿಧ ಭಾಗಕ್ಕೆ ತೆರಳಬೇಕಿದ್ದ 20ಕ್ಕೂ ವಿಮಾನಗಳ ಹಾರಾಟವು ರದ್ದುಗೊಂಡಿದೆ.

264 ಕಿ.ಮೀ ಉದ್ದದ ಶ್ರೀನಗರ–ಜಮ್ಮು ರಾಷ್ಟ್ರೀಯ ಹೆದ್ದಾರಿಯು ಕಣಿವೆಗೆ ದೇಶದ ಸಂಪರ್ಕ ಕಲ್ಪಿಸುವ ಏಕೈಕ ರಸ್ತೆ ಮಾರ್ಗವಾಗಿದ್ದು, ಹೆದ್ದಾರಿಯ ಅಲ್ಲಲ್ಲಿ ಭೂ ಕುಸಿತ ಹಾಗೂ ಅತಿಯಾದ ಹಿಮ ಬೀಳುತ್ತಿರುವುದರಿಂದ ಈ ಹೆದ್ದಾರಿಯು ಬಂದ್‌ ಆಗಿರುವುದರಿಂದ ಕಾಶ್ಮೀರವು ದೇಶದ ಸಂಪರ್ಕ ಕಡಿದುಕೊಂಡಿದೆ.

‘ಹವಾಮಾನ ಪರಿಸ್ಥಿತಿಯಿಂದ ಒಂದು ಅಂತರರಾಷ್ಟ್ರೀಯ ವಿಮಾನ ಸೇರಿ 22 ವಿಮಾನಗಳ ಹಾರಾಟ ರದ್ದುಗೊಳಿಸಲಾಗಿದ್ದು, ಹವಾಮಾನ ಪರಿಸ್ಥಿತಿ ತಿಳಿಗೊಂಡ ಬಳಿಕ ಹಾರಾಟ ನಡೆಸಲಾಗುವುದು. ವಿಮಾನ ನಿಲ್ದಾಣದ ರನ್‌ವೇನಲ್ಲಿ ಬಿದ್ದಿರುವ ಹಿಮವನ್ನು ಮುಂಜಾನೆಯಿಂದಲೇ ತೆರವುಗೊಳಿಸುವ ಕಾರ್ಯದಲ್ಲಿ ಭರದಿಂದ ಸಾಗಿದೆ’ ಎಂದು ವಿಮಾನ ನಿಲ್ದಾಣದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

‘ಕಾಶ್ಮೀರ ಕಣಿವೆಯಲ್ಲಿ ಜ.9ರವರೆಗೆ ‘ಆರೆಂಜ್‌’ ಅಲರ್ಟ್‌ ಘೋಷಿಸಿದ್ದು, ಮಳೆ ಮತ್ತು ಹಿಮಪಾತ ತೀವ್ರಗೊಳ್ಳುವ ನಿರೀಕ್ಷೆಯಿದೆ’ ಎಂದು ಹವಾಮಾನ ಇಲಾಖೆಯ ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು