ಭಾನುವಾರ, ಸೆಪ್ಟೆಂಬರ್ 19, 2021
24 °C

ತೇಲುತ್ತಿರುವ ದ್ವೀಪ: ದೇಶದ ಮೊದಲ ಸ್ವದೇಶಿ ನಿರ್ಮಿತ ಐಎನ್‌ಎಸ್‌ ವಿಕ್ರಾಂತ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕೊಚ್ಚಿ: ದೇಶದ ಮೊದಲ ಸ್ವದೇಶಿ ನಿರ್ಮಿತ ವಿಮಾನವಾಹಕ ಯುದ್ಧ ನೌಕೆ(ಐಎಎಸ್‌) ‘ಐಎನ್‌ಎಸ್‌ ವಿಕ್ರಾಂತ್‌’ ಅನ್ನು ನೌಕಾಪಡೆಯ ಕೆಲ ಅಧಿಕಾರಿಗಳು ‘ತೇಲುವ ದ್ವೀಪ’ ಎಂದೇ ಬಣ್ಣಿಸಿದ್ದಾರೆ.

ದೇಶದ ಅತಿದೊಡ್ಡ ಮತ್ತು ಅತ್ಯಂತ ಸಂಕೀರ್ಣದಿಂದ ಕೂಡಿರುವ ಯುದ್ಧ ನೌಕೆ, ತನ್ನ ಮೊದಲು ಪ್ರಯೋಗಾರ್ಥ ಸಮುದ್ರ ಸಂಚಾರವನ್ನು ಆಗಸ್ಟ್‌ 8ರಂದು ಯಶಸ್ವಿಯಾಗಿ ಮುಕ್ತಾಯಗೊಳಿಸಿದೆ. ಇದರ ಬೆನ್ನಲ್ಲೇ ಕೊಚ್ಚಿಯಲ್ಲಿ ಮಾಧ್ಯಮದವರಿಗಾಗಿ ಐಎನ್‌ಎಸ್‌ ವಿಕ್ರಾಂತ್‌ ಯುದ್ಧನೌಕೆಯ ದ್ವಾರಗಳನ್ನು ತೆರಯಲಾಗಿತ್ತು. ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ನೌಕಾಪಡೆ ಅಧಿಕಾರಿಗಳು, ‘ಐಎನ್‌ಎಸ್‌ ವಿಕ್ರಾಂತ್‌’ನ ವೈಶಿಷ್ಟ್ಯಗಳನ್ನು ವಿವರಿಸಿದರು.

ದಕ್ಷಿಣ ನೌಕಾ ಪಡೆಯ ವೈಸ್‌ ಅಡ್ಮಿರಲ್‌ ಎ.ಕೆ ಚಾವ್ಲಾ ಮಾತನಾಡಿ, ‘ ಐದು ದಿನಗಳ ಪ್ರಯೋಗಾರ್ಥ ಸಂಚಾರವು ಆತ್ಮನಿರ್ಭರ ಭಾರತದ ದೃಷ್ಟಿಕೋನವನ್ನು ಇನ್ನಷ್ಟು ಪ್ರಜ್ವಲಿಸುವಂತೆ ಮಾಡಿತು’ ಎಂದರು.

‘ಇದು ಭಾರತೀಯ ನೌಕಾಪಡೆಯು ಅತ್ಯಂತ ಸಂಕೀರ್ಣವಾದ ಯುದ್ಧನೌಕೆಯನ್ನು ವಿನ್ಯಾಸ ಮಾಡಬಲ್ಲದು ಎಂಬುದನ್ನು ತೋರಿಸುತ್ತದೆ. ನಮ್ಮ ಹಡಗು ತಯಾರಕರ ಮತ್ತು ಕೈಗಾರಿಕೆಗಳ ಸಾಮರ್ಥ್ಯದಿಂದಾಗಿ ಅತ್ಯಂತ ದೊಡ್ಡ ಮತ್ತು ಸಂಕೀರ್ಣವಾದ ಹಡಗನ್ನು ಯಶಸ್ವಿಯಾಗಿ ನಿರ್ಮಾಣ ಮಾಡಲು ಸಾಧ್ಯವಾಯಿತು’ ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

ಈ ಐಎಸಿಯನ್ನು ₹ 23,000 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಅಲ್ಲದೇ ಯುದ್ಧನೌಕೆ ಮೇಲ್ವಿಚಾರಣಾ ತಂಡದ ಸದಸ್ಯ ಅನೂಪ್‌ ಹಮೀದ್‌ ಅವರು ಈ ಯುದ್ಧನೌಕೆಯನ್ನು ‘ತೇಲುತ್ತಿರುವ ದ್ವೀಪ’ ಎಂದು ಕರೆದಿದ್ದಾರೆ.

‘ಈ ನೌಕೆಯಲ್ಲಿ ಬಳಸಲಾಗುವ ವಿದ್ಯುತ್‌ನಿಂದ ಕೊಚ್ಚಿ ನಗರದ ಅರ್ಧ ಭಾಗವನ್ನು ಬೆಳಗಿಸಬಹುದು. ಬಿಎಚ್‌ಇಎಲ್‌ ಸೇರಿದಂತೆ ಎಲ್ಲಾ ಪ್ರಮುಖ ಕೈಗಾರಿಕೆಗಳು ಈ ಹಡಗಿನ ನಿರ್ಮಾಣಕ್ಕೆ ಕೊಡುಗೆ ನೀಡಿವೆ. ನಾವು ಇದರಲ್ಲಿ ಸುಮಾರು 2,600 ಕಿ.ಮೀ ಉದ್ದದ ಕೇಬಲ್ ಅನ್ನು ಬಳಸಿದ್ದೇವೆ’ ಎಂದು ಹಿರಿಯ ವಿದ್ಯುತ್ ಮೇಲ್ವಿಚಾರಕ ಅಧಿಕಾರಿ ಕಮಾಂಡರ್ ಶ್ರೀಜೀತ್‌ ಅವರು ಪಿಟಿಐಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು