ಬುಧವಾರ, ಸೆಪ್ಟೆಂಬರ್ 28, 2022
27 °C

ಐಎನ್‌ಎಸ್‌ ಹಂಸದಲ್ಲಿ ಹಾರುವ ಐಸಿಯು: ಎಚ್‌ಎಎಲ್‌ ನಿರ್ಮಾಣದ ತುರ್ತು ಚಿಕಿತ್ಸಾ ಘಟಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಕಡಲಿನಲ್ಲಿ ಸಂಕಷ್ಟಕ್ಕೆ ಸಿಲುಕಿದವರಿಗೆ ವೈದ್ಯಕೀಯ ನೆರವು ನೀಡಿ, ರಕ್ಷಣಾ ಕಾರ್ಯಕ್ಕೆ ಸಾಥ್‌ ನೀಡುವ ‘ವೈದ್ಯಕೀಯ ತೀವ್ರ ನಿಗಾ ಘಟಕ’ (ಎಂಐಸಿಯು) ಹೊಂದಿದ ಹೆಲಿಕಾಪ್ಟರ್‌ವೊಂದನ್ನು ನೌಕಾಪಡೆಯ ಹಡಗು ಐಎನ್‌ಎಸ್‌ ಹಂಸದಲ್ಲಿ ಸೇವೆಗೆ ಅಣಿಗೊಳಿಸಲಾಗಿದೆ.

‘ಎಎಲ್‌ಎಚ್‌–ಎಂಕೆ–3’ ಎಂದು ಕರೆಯಲಾಗುವ ಈ ‘ಹಾರುವ ಐಸಿಯು’ ಅನ್ನು ಹಿಂದೂಸ್ತಾನ್‌ ಏರೊನಾಟಿಕ್ಸ್‌ ಲಿಮಿಟೆಡ್‌ (ಎಚ್ಎಎಲ್‌) ಅಭಿವೃದ್ಧಿಪಡಿಸಿದೆ. ಐಎನ್‌ಎಸ್‌ ಹಂಸ ಹಡಗು ಗೋವಾದಲ್ಲಿದೆ.

ನೌಕಾಪಡೆಗೆ ಎಚ್ಎಎಲ್‌ ಇಂಥ ಒಟ್ಟು 8 ಎಂಐಸಿಯುಗಳನ್ನು ನಿರ್ಮಿಸಿಕೊಡಲಿದ್ದು, ಈ ಪೈಕಿ ಮೊದಲ ಎಂಐಸಿಯುಅನ್ನು ಹಸ್ತಾಂತರಿಸಿದೆ. ಈ ಹೆಲಿಕಾಪ್ಟರ್‌ನಲ್ಲಿ ವೈದ್ಯಕೀಯ ಸಾಧನಗಳನ್ನು ಜೋಡಿಸಿ, ಅದನ್ನು ‘ಹಾರುವ ಐಸಿಯು’ಅನ್ನಾಗಿ ಪರಿವರ್ತಿಸಲು 2–3 ಗಂಟೆ ಸಾಕು ಎಂದು ಮೂಲಗಳು ಹೇಳಿವೆ.  

ಹವಾಮಾನ ವೈಪರೀತ್ಯದಿಂದಾಗಿ ಸಾಗರದಲ್ಲಿ ಸಿಲುಕಿಕೊಂಡವರ ರಕ್ಷಣೆಗೆ ಈ ಹೆಲಿಕಾಪ್ಟರ್‌ ಧಾವಿಸಲಿದೆ. ಅದರಲ್ಲೂ, ರಕ್ಷಣಾ ಕಾರ್ಯ ನಡೆಯುವ ಸಂದರ್ಭದಲ್ಲಿಯೇ ವೈದ್ಯಕೀಯ ನೆರವು ನೀಡಲು ಅನುಕೂಲವಾಗುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ.

ಎರಡು ಜೋಡಿ ಡಿಫೈಬ್ರಿಲೆಟರ್‌ಗಳು, ಮಾನಿಟರ್‌ಗಳು, ವೆಂಟಿಲೇಟರ್‌, ಆಮ್ಲಜನಕ ಪೂರೈಕೆ ವ್ಯವಸ್ಥೆ ಸೇರಿದಂತೆ ತುರ್ತು ಸಂದರ್ಭದಲ್ಲಿ ಅಗತ್ಯವಿರುವ ವೈದ್ಯಕೀಯ ಸಾಧನಗಳನ್ನು ‘ಎಂಐಸಿಯು’ ಒಳಗೊಂಡಿದೆ.

ವೈದ್ಯಕೀಯ ನೆರವು ನೀಡಲು ಅಗತ್ಯವಿರುವ ವಿದ್ಯುತ್‌ ಪೂರೈಕೆಗೂ ವ್ಯವಸ್ಥೆ ಕಲ್ಪಿಸಲಾಗಿದೆ. ಹೆಲಿಕಾಪ್ಟರ್‌ನಲ್ಲಿನ ವಿದ್ಯುತ್‌ ಬಳಕೆಯ ಜೊತೆಗೆ, ನಾಲ್ಕು ಗಂಟೆಗಾಗುವಷ್ಟು ವಿದ್ಯುತ್‌ ಒದಗಿಸಬಲ್ಲ ಬ್ಯಾಟರಿಗಳನ್ನು ಸಹ ಇದರಲ್ಲಿ ಅಳವಡಿಸಲಾಗಿದೆ ಎಂದು ಮೂಲಗಳು ಹೇಳಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು