ಮಂಗಳವಾರ, ಸೆಪ್ಟೆಂಬರ್ 29, 2020
21 °C
ಕರ್ನಾಟಕ ಸೇರಿ 10 ರಾಜ್ಯಗಳ ಪ್ರತಿನಿಧಿಗಳ ಜತೆಗೆ ವಿಡಿಯೊ ಕಾನ್ಫರೆನ್ಸ್

ಕೋವಿಡ್‌ | 72 ತಾಸಿನಲ್ಲಿ ಪರೀಕ್ಷೆ ನಡೆಸಿ; ಸಂವಾದದಲ್ಲಿ ಪ್ರಧಾನಿ ಮೋದಿ ಸೂಚನೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ದೇಶದಲ್ಲಿನ ಶೇ 80ರಷ್ಟು ಕೋವಿಡ್‌ ಪ್ರಕರಣಗಳು ದೃಢಪಟ್ಟಿರುವ ಕರ್ನಾಟಕ ಸೇರಿದಂತೆ ಹತ್ತು ರಾಜ್ಯಗಳು ವೈರಾಣು ನಿಯಂತ್ರಿಸುವಲ್ಲಿ ಯಶಸ್ವಿಯಾದರೆ ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಭಾರತವು ಗೆದ್ದಂತೆಯೇ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಸೋಂಕಿತರನ್ನು ಗುರುತಿಸಿ ಅವರನ್ನು ಪರೀಕ್ಷೆಗೆ ಒಳಪಡಿಸುವುದು ಅತ್ಯಂತ ಮಹತ್ವದ ಕೆಲಸ. ಸೋಂಕಿತರ ಸಂಪರ್ಕಿತರನ್ನು 72 ತಾಸುಗಳೊಳಗೆ ಗುರುತಿಸಿ ತಪಾಸಣೆಗೆ ಒಳಪಡಿಸಬೇಕು ಎಂಬ ಗುರಿಯನ್ನು ಈ ರಾಜ್ಯಗಳಿಗೆ ಪ್ರಧಾನಿ ನೀಡಿದ್ದಾರೆ.

ತೊಳೆಯುವುದು, ಮಾಸ್ಕ್‌ ಧರಿಸುವುದು ಮತ್ತು ಅಂತರ ಕಾಯ್ದುಕೊಳ್ಳುವ ಹಾಗೆಯೇ ಸಂಪರ್ಕಿತರ ತ್ವರಿತ ಪತ್ತೆ ಮತ್ತು ಪರೀಕ್ಷೆಯನ್ನು ‘ಮಂತ್ರ’ದ ರೀತಿಯಲ್ಲಿ ಅನುಸರಿಸಬೇಕು ಎಂದಿದ್ದಾರೆ.

ಕರ್ನಾಟಕ, ಬಿಹಾರ, ಉತ್ತರ ಪ್ರದೇಶ, ಪಂಜಾಬ್‌, ಆಂಧ್ರ ಪ್ರದೇಶ, ಮಹಾರಾಷ್ಟ್ರ, ತೆಲಂಗಾಣ, ಪಶ್ಚಿಮ ಬಂಗಾಳ, ಹರಿಯಾಣ ಮತ್ತು ಗುಜರಾತ್‌ ಮುಖ್ಯಮಂತ್ರಿಗಳು ಮತ್ತು ಪ್ರತಿನಿಧಿಗಳ ಜತೆಗೆ ಮೋದಿ ಅವರು ಮಂಗಳವಾರ ವಿಡಿಯೊ ಕಾನ್ಫರೆನ್ಸ್‌ ಮೂಲಕ ಸಂವಾದ ನಡೆಸಿದರು. 

ಕೇಂದ್ರ ಮತ್ತು ರಾಜ್ಯಗಳು ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಒಂದು ತಂಡವಾಗಿ ಕೆಲಸ ಮಾಡುವುದು ಸಾಧ್ಯವಾಗಿದೆ ಎಂಬ ಸಮಾಧಾನವನ್ನು ಅವರು ವ್ಯಕ್ತಪಡಿಸಿದರು. ‘ಸೋಂಕು ತಡೆ, ಸಂಪರ್ಕಿತರ ಪತ್ತೆ ಮತ್ತು ನಿಗಾ ಕೋವಿಡ್‌ ಹರಡುವಿಕೆ ವಿರುದ್ಧ ಅತ್ಯಂತ ಪರಿಣಾಮಕಾರಿ ಅಸ್ತ್ರಗಳು ಎಂಬುದು ನಮ್ಮ ಅನುಭವ. 72 ತಾಸುಗಳಲ್ಲಿ ಸೋಂಕಿತರ ಪತ್ತೆ ಸಾಧ್ಯವಾದರೆ ಸೋಂಕು ಹರಡುವಿಕೆಯು ಭಾರಿ ಪ್ರಮಾಣದಲ್ಲಿ ಕುಸಿಯಲಿದೆ’ ಎಂದು ಅವರು ಅಭಿಪ್ರಾಯಪಟ್ಟರು.

ದೇಶದಲ್ಲಿ ಈಗ ಇರುವ ಸಕ್ರಿಯ ಪ್ರಕರಣಗಳ ಸಂಖ್ಯೆ ಆರು ಲಕ್ಷಕ್ಕೂ ಹೆಚ್ಚು. ಇವುಗಳಲ್ಲಿ ಹೆಚ್ಚಿನವು ಹತ್ತು ರಾಜ್ಯಗಳಿಂದ ವರದಿಯಾಗುತ್ತಿವೆ. ಶೇ 80ರಷ್ಟು ಪ್ರಕರಣಗಳನ್ನು ಹೊಂದಿರುವ ಈ ರಾಜ್ಯಗಳು ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಬಹಳ ಮುಖ್ಯ ಎಂದು ಪ್ರಧಾನಿ ಹೇಳಿದರು.

ಈ ಎಲ್ಲ ಹತ್ತು ರಾಜ್ಯಗಳು ಜತೆಗೆ ಕುಳಿತು ಚರ್ಚೆ ಮತ್ತು ಪರಾಮರ್ಶೆ ನಡೆಸಬೇಕಾದ ಅಗತ್ಯ ಇದೆ. ಪರಸ್ಪರರ ಅನುಭವದಿಂದ ಕಲಿಯುವ ಅಂಶಗಳು ಸಾಕಷ್ಟಿವೆ ಎಂದು ಅವರು ಹೇಳಿದರು.

ಪ್ರತಿದಿನದ ಪರೀಕ್ಷೆಯ ಸಂಖ್ಯೆಯು ಸರಿಸುಮಾರು 7 ಲಕ್ಷ ತಲುಪಿದೆ. ಅಷ್ಟಲ್ಲದೆ, ಈ ಸಂಖ್ಯೆಯು ದಿನವೂ ಏರುತ್ತಲೇ ಇದೆ. ಆರಂಭದಲ್ಲಿಯೇ ಸೋಂಕು ಪತ್ತೆ ಮತ್ತು ಹರಡುವಿಕೆ ತಡೆಗೆ ಇದು ಸಹಕಾರಿ. ಕೋವಿಡ್‌ನಿಂದಾಗುವ ಸಾವಿನ ಪ್ರಮಾಣವು ಭಾರತದಲ್ಲಿ ಅತ್ಯಂತ ಕಡಿಮೆ ಇದೆ ಮತ್ತು ಅದು ಇನ್ನಷ್ಟು ತಗ್ಗುತ್ತಿದೆ ಎಂಬುದು ಆಶಾದಾಯಕ ಅಂಶ ಎಂದು ಪ್ರಧಾನಿ ಹೇಳಿದರು.

ಪರೀಕ್ಷೆ ಪ್ರಮಾಣ ಕಡಿಮೆ ಇದ್ದು ಸೋಂಕು ಪತ್ತೆ ಪ್ರಮಾಣ ಹೆಚ್ಚು ಇರುವ ರಾಜ್ಯಗಳು ಪರೀಕ್ಷೆಯನ್ನು ಹೆಚ್ಚಿಸಬೇಕಾದ ಅಗತ್ಯ ಇದೆ ಎಂಬುದರತ್ತ ಮೋದಿ ಬೊಟ್ಟು ಮಾಡಿದರು. ವಿಶೇಷವಾಗಿ ಬಿಹಾರ, ಗುಜರಾತ್‌, ಉತ್ತರಪ್ರದೇಶ, ಪಶ್ಚಿಮ ಬಂಗಾಳ ಮತ್ತು
ತೆಲಂಗಾಣ ಈ ದಿಸೆಯಲ್ಲಿ ಯೋಚಿಸಬೇಕು ಎಂದರು.

ದೇಶದಲ್ಲಿ ಪ್ರಕರಣಗಳ ಸರಾಸರಿ ಏರಿಕೆಗಿಂತ ಹೆಚ್ಚು ಪ್ರಕರಣಗಳು ವರದಿಯಾಗುತ್ತಿರುವ ರಾಜ್ಯಗಳು ಪರೀಕ್ಷೆಯನ್ನು ಹೆಚ್ಚಿಸುವುದು ಅನಿವಾರ್ಯ ಎಂದು ಕೇಂದ್ರ ಆರೋಗ್ಯ ಇಲಾಖೆಯ ಕಾರ್ಯದರ್ಶಿ ರಾಜೇಶ್‌ ಭೂಷಣ್‌ ಹೇಳಿದರು. ಪ್ರಕರಣಗಳು ಮತ್ತು ಸಾವಿನ ಪ್ರಮಾಣವನ್ನು ರಾಜ್ಯಗಳು ನಿಖರವಾಗಿ ವರದಿ ಮಾಡಬೇಕು ಎಂದೂ ಅವರು ಹೇಳಿದರು.

ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ಆರೋಗ್ಯ ಸಚಿವ ಹರ್ಷ ವರ್ಧನ್‌ ವಿಡಿಯೊ ಸಂವಾದದಲ್ಲಿ ಭಾಗಿಯಾದರು. ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಕೆ. ಸುಧಾಕರ್‌ ಅವರು ಕರ್ನಾಟಕ ವನ್ನು ಪ್ರತಿನಿಧಿಸಿದ್ದರು.

ಗುಣಮುಖ ಏರಿಕೆ, ಸಾವು ಇಳಿಕೆ: ಭಾರತದಲ್ಲಿ ಕೋವಿಡ್‌ನಿಂದ ಗುಣಮುಖರಾದವರ ಪ್ರಮಾಣವು ಶೇ 70ರ ಸನಿಹ ತಲುಪಿದೆ. ಈ ರೋಗದಿಂದಾಗಿ ಸಾಯುವವರ ಪ್ರಮಾಣವು ಶೇ 1.99ಕ್ಕೆ ಕುಸಿದಿದೆ. ಸಾವಿನ ಪ್ರಮಾಣವು ಜೂನ್‌ನಲ್ಲಿ ಶೇ 3ರಷ್ಟಿತ್ತು ಎಂದು ರಾಜೇಶ್‌ ಭೂಷಣ್‌ ತಿಳಿಸಿದ್ದಾರೆ. 

 ಲಸಿಕೆ: ಆದ್ಯತೆ ಯಾರಿಗೆ?
ರಷ್ಯಾವು ಕೋವಿಡ್‌ ಲಸಿಕೆಯನ್ನು ನೋಂದಣಿ ಮಾಡಿದೆ. ಅದರ ಬೆನ್ನಲ್ಲೇ, ಮೊದಲಿಗೆ ಲಸಿಕೆಯನ್ನು ಯಾರಿಗೆ ನೀಡಬೇಕು ಎಂಬ ವಿಚಾರದಲ್ಲಿ ಮಾರ್ಗಸೂಚಿ ರೂಪಿಸಲು ಭಾರತದ ಆರೋಗ್ಯ ಪರಿಣತರು ಬುಧವಾರ ಸಭೆ ನಡೆಸಲಿದ್ದಾರೆ.

ಲಸಿಕೆಯು ಅಗತ್ಯ ಪ್ರಮಾಣದಲ್ಲಿ ಲಭ್ಯ ಇರುವಂತೆ ನೋಡಿಕೊಳ್ಳಲು ಏನು ಮಾಡಬೇಕು ಎಂಬ ಬಗ್ಗೆಯೂ ಈ ಸಭೆಯಲ್ಲಿ ಚರ್ಚೆ ನಡೆಯಲಿದೆ.

ಲಸಿಕೆ ನೀಡಿಕೆಯ ರಾಷ್ಟ್ರೀಯ ಪರಿಣತರ ಗುಂಪು, ನೀತಿ ಆಯೋಗದ ಸದಸ್ಯ ವಿ.ಕೆ. ಪಾಲ್‌ ಅವರ ನೇತೃತ್ವದಲ್ಲಿ ಸಭೆ ನಡೆಸಲಿದೆ. ಭಾರತಕ್ಕೆ ಸೂಕ್ತವಾದ ಲಸಿಕೆಗಳು ಯಾವುವು ಮತ್ತು ಅವುಗಳನ್ನು ಪಡೆದುಕೊಳ್ಳುವುದು ಮತ್ತು ದೇಶದಾದ್ಯಂತ ವಿತರಿಸುವುದು ಹೇಗೆ ಎಂಬ ಬಗ್ಗೆಯೂ ಸಮಾಲೋಚನೆ ನಡೆಯಲಿದೆ.

ರಾಜ್ಯಗಳಿಂದ ಹಣಕಾಸು ನೆರವಿನ ಬೇಡಿಕೆ
ಕೋವಿಡ್‌ ನಿಯಂತ್ರಣಕ್ಕೆ ಕೈಗೊಳ್ಳಲಾಗಿರುವ ಕ್ರಮಗಳ ಕುರಿತು ಮುಖ್ಯಮಂತ್ರಿಗಳು ಪ್ರಧಾನಿಗೆ ಮಾಹಿತಿ ನೀಡಿದರು. ಜತೆಗೆ, ಈ ಪಿಡುಗು ನಿಯಂತ್ರಣಕ್ಕಾಗಿ ಕೇಂದ್ರದಿಂದ ಹೆಚ್ಚಿನ ಹಣಕಾಸು ನೆರವಿನ ಬೇಡಿಕೆಯನ್ನೂ ಇರಿಸಿದರು.

ರಾಜ್ಯದ ವರಮಾನವು ಬಜೆಟ್‌ ಅಂದಾಜಿಗಿಂತ ಬಹಳ ಕಡಿಮೆಯಾಗಿದೆ. ಈ ಕೊರತೆಯನ್ನು ಸರಿದೂಗಿಸಲು ಕೇಂದ್ರದಿಂದ ₹9,000 ಕೋಟಿಯ ವಿಶೇಷ ಅನುದಾನ ನೀಡಬೇಕು ಎಂದು ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ವಿನಂತಿಸಿದರು. 

ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ವರಮಾನವು ಶೇ 50ಕ್ಕೆ ಕುಸಿದಿದೆ. ಹಾಗಾಗಿ, ಕೇಂದ್ರವು ಉದಾರವಾಗಿ ಹಣಕಾಸು ನೆರವು ನೀಡಬೇಕು ಎಂದು ಪಂಜಾಬ್‌ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್ ಕೋರಿದರು. 

ಬಿಹಾರದಲ್ಲಿ ಪರೀಕ್ಷೆ ಸಂಖ್ಯೆಯನ್ನು ದಿನಕ್ಕೆ ಒಂದು ಲಕ್ಷಕ್ಕೆ ಏರಿಸಲಾಗುವುದು ಎಂದು ಅಲ್ಲಿನ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಹೇಳಿದರು.

ಕೇಂದ್ರದಿಂದ ₹4,135 ಕೋಟಿ ಜಿಎಸ್‌ಟಿ ಪರಿಹಾರ ಬಾಕಿ ಇದೆ. ಒಟ್ಟು ₹53 ಸಾವಿರ ಕೋಟಿ ಕೇಂದ್ರದಿಂದ ಬರಬೇಕಿದೆ. ಈ ಮೊತ್ತವನ್ನು ಬೇಗನೆ ನೀಡುವಂತೆ
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೋರಿದರು. 

**

ಲಸಿಕೆಯ ತ್ತಸು

l ಎರಡು ಸಂಭಾವ್ಯ ಲಸಿಕೆಗಳನ್ನು ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿದೆ.

l ಐಸಿಎಂಆರ್‌ ಸಹಯೋದಲ್ಲಿ ಭಾರತ್‌ ಬಯೊಟೆಕ್‌ ಲಸಿಕೆ ಅಭಿವೃದ್ಧಿಪಡಿಸಿದೆ.

l ಜೈಡಸ್‌ ಕ್ಯಾಡಿಲಾ ಲಿ. ಕೂಡ ಲಸಿಕೆಯೊಂದನ್ನು ಅಭಿವೃದ್ಧಿಪಡಿಸಿದೆ.

l ಈ ಎರಡನ್ನೂ ಮನುಷ್ಯರ ಮೇಲೆ ಪ್ರಯೋಗಿಸಲಾಗುತ್ತಿದೆ. ಈ ಪ್ರಯೋಗವು ಎರಡನೇ ಹಂತವನ್ನು ತಲುಪಿದೆ.

l ಜಗತ್ತಿನ ಮೊದಲ ಕೋವಿಡ್‌ ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದಾಗಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಹೇಳಿದ್ದಾರೆ.

l ಈ ಲಸಿಕೆಯ ಮೊದಲ ಡೋಸ್‌ ಅನ್ನು ಪುಟಿನ್‌ ಅವರ ಮಗಳಿಗೆ ನೀಡಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು