ಶುಕ್ರವಾರ, ಮೇ 20, 2022
23 °C

'ಟೂಲ್‌ ಕಿಟ್‌' ತನಿಖೆಯಿಂದ ಬಹಳಷ್ಟು ವಿಚಾರಗಳು ಹೊರಬರಲಿವೆ: ವಿದೇಶಾಂಗ ಸಚಿವ

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ರೈತರ ಪ್ರತಿಭಟನೆಯ ವಿಚಾರವಾಗಿ ಪರಿಸರ ಕಾರ್ಯಕರ್ತೆ ಗ್ರೇಟಾ ಥನ್‌ಬರ್ಗ್ ಹಂಚಿಕೊಂಡಿದ್ದ 'ಟೂಲ್‌ ಕಿಟ್‌' ತನಿಖೆಯಿಂದ ಬಹಳಷ್ಟು ವಿಚಾರಗಳು ಹೊರಬರಲಿವೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್ ಹೇಳಿದ್ದಾರೆ.

ಈ ಬಗ್ಗೆ ಶನಿವಾರ ಮಾತನಾಡಿರುವ ಅವರು, 'ಪರಿಸರ ಕಾರ್ಯಕರ್ತೆ ಗ್ರೇಟಾ ಥನ್‌ಬರ್ಗ್ ಹಂಚಿಕೊಂಡಿದ್ದ 'ಟೂಲ್‌ ಕಿಟ್‌' ತನಿಖೆಯಿಂದ ಬಹಳಷ್ಟು ವಿಚಾರಗಳು ಹೊರಬರಲಿವೆ. ಈ ಬಗ್ಗೆ ದೆಹಲಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ' ಎಂದು ತಿಳಿಸಿದ್ದಾರೆ.

ಹೊರದೇಶಗಳ ಕೆಲ ಸೆಲೆಬ್ರಿಟಿಗಳು ರೈತರ ಪ್ರತಿಭಟನೆಯ ಬಗ್ಗೆ ಟ್ವೀಟ್‌ ಮಾಡಿದ್ದಾರೆ. ಆದರೆ, ಅವರಿಗೆ ಭಾರತದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯ ಬಗ್ಗೆ ಹೆಚ್ಚು ತಿಳಿದಿಲ್ಲ ಎಂದು ಜೈ ಶಂಕರ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

'ಟೂಲ್‌ ಕಿಟ್‌ನಿಂದ ಬಹಳಷ್ಟು ವಿಚಾರಗಳು ಈಗಾಗಲೇ ಬಹಿರಂಗಗೊಂಡಿವೆ. ಮುಂದಿನ ದಿನಗಳಲ್ಲಿ ಏನು ಹೊರಬರುತ್ತದೆ ಎಂಬುದನ್ನು ನಾವು ಕಾದು ನೋಡಬೇಕಾಗಿದೆ. ಕೆಲ ಸೆಲೆಬ್ರಿಟಿಗಳು ತಮಗೆ ಹೆಚ್ಚು ಅರ್ಥವಾಗದ ವಿಷಯಗಳ ಬಗ್ಗೆ ಹೇಳಿಕೆಗಳನ್ನು ನೀಡಿದ್ದಾರೆ. ಇದಕ್ಕೆ ವಿದೇಶಾಂಗ ಸಚಿವಾಲಯವು ಪ್ರತಿಕ್ರಿಯಿಸಲೇಬೇಕಾದ ಅನಿವಾರ್ಯತೆ ಇತ್ತು' ಎಂದು ಅವರು ಎಎನ್‌ಐಗೆ ನೀಡಿದ ಸಂದರ್ಶದಲ್ಲಿ ಹೇಳಿದ್ದಾರೆ.

 

ಗ್ರೇಟಾ ಅವರು ಹಂಚಿಕೊಂಡಿದ್ದ ಟೂಲ್‌ಕಿಟ್‌ನಲ್ಲಿ, ದೇಶದಲ್ಲಿ ಸಾಮಾಜಿಕ ಸೌಹಾರ್ದತೆಯನ್ನು ಹಾಳುಮಾಡುವ ಕಾರ್ಯಯೋಜನೆಯು ಒಳಗೊಂಡಿದೆ. ಜನವರಿ 26 ಮತ್ತು 23ರಂದು ಡಿಜಿಟಲ್ ಸ್ಟ್ರೈಕ್‌ ನಡೆಸುವ ಕಾರ್ಯಯೋಜನೆಯನ್ನು ಈ ಟೂಲ್‌ಕಿಟ್ ವಿವರಿಸಿದೆ. ಹೀಗಾಗಿ ಇದನ್ನು ಬರೆದ ವ್ಯಕ್ತಿಯ ವಿರುದ್ಧ ಕ್ರಿಮಿನಲ್ ಸಂಚು ರೂಪಿಸಿದ ಮತ್ತು ದೇಶದ್ರೋಹ ಎಸಗಿದ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಖಾಲಿಸ್ತಾನ ಪರ ಸಂಘಟನೆಯು ಈ ಟೂಲ್‌ಕಿಟ್‌ ಅನ್ನು ಸಿದ್ಧಪಡಿಸಿದೆ ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿರುವುದಾಗಿ ದೆಹಲಿ ವಿಶೇಷ ಪೊಲೀಸ್ ವರಿಷ್ಠಾಧಿಕಾರಿ ಪ್ರವೀಣ್ ರಂಜನ್ ಮಾಹಿತಿ ನೀಡಿದ್ದಾರೆ.

 

ಟೂಲ್‌ ಕಿಟ್‌ನ ಸೃಷ್ಟಿಕರ್ತರಿಗೆ ಸಂಬಂಧಿಸಿದ ಇಮೇಲ್ ಐಡಿಗಳು, ಯುಆರ್‌ಎಲ್‌ಗಳು ಮತ್ತು ಕೆಲವು ಸಾಮಾಜಿಕ ಮಾಧ್ಯಮ ಖಾತೆಗಳ ಬಗ್ಗೆ ಮಾಹಿತಿ ನೀಡುವಂತೆ ದೆಹಲಿ ಪೊಲೀಸರು, ಗೂಗಲ್ ಮತ್ತಿತರ ಸಾಮಾಜಿಕ ಮಾಧ್ಯಮ ಸಂಸ್ಥೆಗಳಿಗೆ ಮನವಿ ಮಾಡಿದ್ದಾರೆ.

'ಭಾರತ ಸರ್ಕಾರದ ವಿರುದ್ಧ ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಯುದ್ಧ' ನಡೆಸಲು 'ಟೂಲ್ ಕಿಟ್' ಸಿದ್ಧಪಡಿಸಿರುವ 'ಖಲಿಸ್ತಾನ್ ಪರ' ಸೃಷ್ಟಿಕರ್ತರ ವಿರುದ್ಧ ದೆಹಲಿ ಪೊಲೀಸ್ ಸೈಬರ್ ಸೆಲ್ ಘಟಕ ಗುರುವಾರ ಎಫ್ಐಆರ್ ದಾಖಲಿಸಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು