ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಪಕ್ಷದ ಹೆಸರು ಜನರಿಂದಲೇ ನಿರ್ಧಾರ: ಗುಲಾಂ ನಬಿ ಆಜಾದ್‌

Last Updated 4 ಸೆಪ್ಟೆಂಬರ್ 2022, 13:34 IST
ಅಕ್ಷರ ಗಾತ್ರ

ಶ್ರೀನಗರ: ‘ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನವನ್ನು ಮರಳಿ ಪಡೆಯುವುದು, ಕಾಶ್ಮೀರಿ ಪಂಡಿತರಿಗೆ ಪುನರ್‌ವಸತಿ, ಇಲ್ಲಿನ ಜನರಿಗೆ ಭೂಮಿ ಹಕ್ಕು ಮತ್ತು ಉದ್ಯೋಗವನ್ನು ದೊರಕಿಸಿಕೊಡುವುದಕ್ಕಾಗಿ ತಮ್ಮ ಹೊಸ ಪಕ್ಷವು ಹೋರಾಡಲಿದೆ’ ಎಂದು ಗುಲಾಂ ನಬಿ ಆಜಾದ್‌ ಹೇಳಿದರು.

ಜಮ್ಮುವಿನ ಸೈನಿಕ್‌ ಕಾಲೊನಿಯಲ್ಲಿ ಆಯೋಜಿಸಿದ್ದ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಹೊಸ ಪಕ್ಷಕ್ಕೆ ಎಲ್ಲರಿಗೂ ಅರ್ಥವಾಗುವಂತಹ ಹಿಂದೂಸ್ತಾನಿ ಹೆಸರನ್ನು ಇಡಲಾಗುವುದು. ಹೆಸರನ್ನು ಜಮ್ಮು ಮತ್ತು ಕಾಶ್ಮೀರದ ಜನರೇ ನಿರ್ಧರಿಸಲಿದ್ದಾರೆ. ಜೊತೆಗೆ ಪಕ್ಷದ ಧ್ವಜದ ಬಗ್ಗೆಯೂ ಅವರೇ ನಿರ್ಧರಿಸಲಿದ್ದಾರೆ’ ಎಂದರು.

‘ಜಮ್ಮು ಮತ್ತು ಕಾಶ್ಮೀರದ ಜನರನ್ನು ‘ಸಂತೋಷ’ವಾಗಿರಿಸುವುದು ನನ್ನ ಬಹುವರ್ಷಗಳ ಕನಸು. 2005–2008ರ ವರೆಗೆ ನಾನು ಮುಖ್ಯಮಂತ್ರಿ ಆಗಿದ್ದಾಗ, ಹಲವು ಸಹೋದ್ಯೋಗಿಗಳು ಮಧ್ಯದಲ್ಲೇ ನನ್ನನ್ನು ಬಿಟ್ಟು ಹೋದರು. ಆದ್ದರಿಂದ ನನ್ನ ಕನಸು ಕನಸಾಗಿಯೇ ಉಳಿಯಿತು. ಆ ಸಮಯದಲ್ಲಿ ನನ್ನ ಸಂಪುಟ ಸಹೋದ್ಯೋಗಿಗಳಾಗಿದ್ದವರು ಈಗ ನನ್ನೊಂದಿಗೆ ಬನ್ನಿ. ಎಲ್ಲರೂ ಸೇರಿ ಆ ಕನಸನ್ನು ನನಸು ಮಾಡೋಣ’ ಎಂದು ಕರೆ ನೀಡಿದರು.

‘ಹೊಸ ಪಕ್ಷವು ರಾಷ್ಟ್ರೀಯ ಪಕ್ಷವಾಗಿರಲಿದೆ. ಆದರೆ, ಈ ಕೂಡಲೇ ರಾಷ್ಟ್ರ ರಾಜಕಾರಣದಲ್ಲಿ ಧುಮುಕುವ ಅವಸರ ಇಲ್ಲ. ಜಮ್ಮು ಮತ್ತು ಕಾಶ್ಮೀರದಲ್ಲಿ ಯಾವಾಗ ಬೇಕಾದರೂ ಚುನಾವಣೆ ಘೋಷಣೆ ಆಗಬಹುದು. ಆದ್ದರಿಂದ ಪಕ್ಷವು ಇಲ್ಲಿಂದಲೇ ಕಾರ್ಯಾರಂಭ ಮಾಡಲಿದೆ’ ಎಂದರು.

ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ‘ಕಾಂಗ್ರೆಸ್‌ ಪಕ್ಷವು ಕಂಪ್ಯೂಟರ್‌ ಅಥವಾ ಟ್ವಿಟರ್‌ನಿಂದ ರೂಪುಗೊಳ್ಳಲಿಲ್ಲ. ಅದು ನಮ್ಮಂಥವರಿಂದ ರೂಪುಗೊಂಡಿತು. ಇಂದು 2 ರಾಜ್ಯಗಳಲ್ಲಿ ಮಾತ್ರ ಕಾಂಗ್ರೆಸ್‌ ಅಧಿಕಾರದಲ್ಲಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT