ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಣವ್‌ ಸಂತಾಪ | ಅಪ್ಪಟ ಕಾಂಗ್ರೆಸ್ಸಿಗ ‘ಬಂಗಾಳಿ ಬಾಬು’ ನಡೆದು ಬಂದ ಹಾದಿ...

Last Updated 31 ಆಗಸ್ಟ್ 2020, 13:28 IST
ಅಕ್ಷರ ಗಾತ್ರ

ನವದೆಹಲಿ: ಅಪ್ಪಟ ಕಾಂಗ್ರೆಸ್ಸಿಗ ಹಾಗೂ ಗಾಂಧಿ ಕುಟುಂಬದ ಆಪ್ತ ಎಂದೇ ಗುರುತಿಸಿಕೊಂಡಿದ್ದ ಪ್ರಣವ್‌ ಮುಖರ್ಜಿ ಕ್ಲರ್ಕ್‌ ಆಗಿ ವೃತ್ತಿ ಜೀವನ ಆರಂಭಿಸಿದರೂನಂತರದ ಕೆಲವು ದಿನಗಳು ಪತ್ರಕರ್ತರಾಗಿಯೂ ಕೆಲಸ ಮಾಡಿದರು.

ಕಲ್ಕತ್ತ ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ ಮತ್ತು ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಜೊತೆಗೆ ಎಲ್‌ಎಲ್‌ಬಿ ಪೂರೈಸಿದರು. ವಿದ್ಯಾಭ್ಯಾಸದ ಬಳಿಕ ಅಂಚೆ ಮತ್ತು ತಂತಿ ಇಲಾಖೆಯಲ್ಲಿ ಪ್ರಥಮ ದರ್ಜೆ ಕ್ಲರ್ಕ್‌ ಆಗಿ ಕೆಲಸಕ್ಕೆ ಸೇರಿದರು. ಎರಡು ವರ್ಷದ ಬಳಿಕ ಆ ಸರ್ಕಾರಿ ಉದ್ಯೋಗಕ್ಕೆ ರಾಜೀನಾಮೆ ನೀಡಿ, ಬಂಗಾಳಿಯ ‘ಮದರ್‌ಲ್ಯಾಂಡ್‌‘ ಪತ್ರಿಕೆಗೆ ವರದಿಗಾರರಾಗಿ ಸೇರಿಕೊಂಡರು.

ಪತ್ರಿಕೆಯಲ್ಲಿ ಕೆಲಸ ಮಾಡುತ್ತಿರುವಾಗಲೇ ರಾಜಕಾರಣದತ್ತ ಮುಖ ಮಾಡಿದರು. ಇದೇ ಸಮಯಕ್ಕೆ ಮಿಡ್ನಾಪುರ ಉಪಚುನಾವಣೆ ಘೋಷಣೆಯಾಯಿತು. ವರದಿಗಾರಿಕೆಯನ್ನು ಬಿಟ್ಟು ಪ್ರಣವ್‌ ಚುನಾವಣೆ ಪ್ರಚಾರದತ್ತ ನಡೆದರು.

1968ರಲ್ಲಿ ನಡೆದ ಮಿಡ್ನಾಪುರ ಉಪಚುನಾವಣೆ ಪ್ರಣವ್‌ ಮುಖರ್ಜಿ ಅವರ ಜೀವನ ಪಥವನ್ನು ಬದಲಿಸಿತು. ಈ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯ ಪರವಾಗಿ ಕೆಲಸ ಮಾಡುವ ಮೂಲಕ ಅಭ್ಯರ್ಥಿಯ ಗೆಲುವಿಗೂ ಕಾರಣರಾದರು.

ಉಪಚುನಾವಣೆಗೆ ಪ್ರಣವ್‌ ದುಡಿದ ಕಾರ್ಯವೈಖರಿ ಸಂಘಟನೆ, ಪ್ರಚಾರ ತಂತ್ರ ಇಂದಿರಾ ಗಾಂಧಿ ಅವರ ಗಮನ ಸೆಳೆಯಿತು. ಕೂಡಲೇ ಪ್ರಣವ್‌ ಅವರನ್ನು ಪಕ್ಷಕ್ಕೆ ಕರೆತಂದರು. 1969ರಲ್ಲಿ ರಾಜ್ಯಸಭಾ ಸದಸ್ಯರನ್ನಾಗಿ ನೇಮಕ ಮಾಡಿದರು. ಅಂದಿನಿಂದ ಶುರವಾದ ಕಾಂಗ್ರೆಸ್‌ ಜೊತೆಗಿನ ಪಯಣ ಅವರನ್ನು ರಾಷ್ಟ್ರಪತಿಯನ್ನಾಗಿ ಮಾಡಿತು.

1975, 1981, 1993, 1999 ರಲ್ಲಿ ರಾಜ್ಯಸಭೆಗೆ ನೇಮಕವಾಗಿದ್ದರು. ಪ್ರಣವ್‌ ಮುಖರ್ಜಿ ಅವರು ಹಣಕಾಸು ಖಾತೆ ಸೇರಿದಂತೆ ಹಲವು ಖಾತೆಗಳನ್ನು ನಿಭಾಯಿಸಿದ್ದಾರೆ. ಇಂದಿರಾ ಗಾಂಧಿ ಅವರಿಗೆ ಆಪ್ತರಾಗಿದ್ದರು. ಕಾಂಗ್ರೆಸ್‌ ವಲಯದಲ್ಲಿ ಅವರನ್ನು ಎಲ್ಲರೂ ‘ಬಂಗಾಳಿ ಬಾಬು’ ಎಂದು ಪ್ರೀತಿಯಿಂದ ಕರೆಯುತ್ತಿದ್ದರು.

ಯುಪಿಎ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಾಗ ನೆಹರೂ–ಗಾಂಧಿ ಕುಟುಂಬದ ನಿಷ್ಠರಾಗಿದ್ದ ಮುಖರ್ಜಿ ಪ್ರಧಾನಿಯಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಕಾಂಗ್ರೆಸ್‌ ಅವರನ್ನು 2012ರಲ್ಲಿ ರಾಷ್ಟ್ರಪತಿ ಹುದ್ದೆಗೆ ಆಯ್ಕೆ ಮಾಡಿತು. 2017ರವರೆಗೆ ಅವರು ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದರು.

ಅಪ್ಪಟ ಕಾಂಗ್ರೆಸ್‌ ನಾಯಕರಾಗಿದ್ದ ಪ್ರಣವ್‌ ಅವರನ್ನು ಎನ್‌ಡಿಎ ಸರ್ಕಾರ ಅತ್ಯುನ್ನತ ನಾಗರಿಕ ಪ್ರಶಸ್ತಿ‌‘ಭಾರತ ರತ್ನ‘ಗೆ ಆಯ್ಕೆ ಮಾಡಿತು. ಪ್ರಣವ್‌ ಭಾರತ ರತ್ನ ಪುರಸ್ಕಾರ ಸ್ವೀಕರಿಸಿದ ಆರನೇ ಮಾಜಿ ರಾಷ್ಟ್ರಪತಿಯಾದರು

ಇವುಗಳನ್ನು ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT