ಬುಧವಾರ, ಡಿಸೆಂಬರ್ 8, 2021
25 °C

ಕಾಂಗ್ರೆಸ್‌ನಲ್ಲಿನ ವಿರೋಧಿಗಳಿಂದ ತನ್ನ ಬೆಂಬಲಿಗರಿಗೆ ಕಿರುಕುಳ: ಅಮರಿಂದರ್ ಸಿಂಗ್

ಪಿಟಿಐ Updated:

ಅಕ್ಷರ ಗಾತ್ರ : | |

ಚಂಡೀಗಢ: ಕಾಂಗ್ರೆಸ್‌ನಲ್ಲಿರುವ ತನ್ನ ವಿರೋಧಿಗಳು ತಮ್ಮ ಬೆಂಬಲಿಗರಿಗೆ ಬೆದರಿಕೆ ಮತ್ತು ಕಿರುಕುಳ ನೀಡುತ್ತಿದ್ದಾರೆ. ತಮ್ಮ ಪ್ರತಿಸ್ಪರ್ಧಿಗಳು ಇಂತಹ 'ಕೆಳಮಟ್ಟದ ರಾಜಕೀಯ ಆಟಗಳಿಂದ' ಅವರನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಪಂಜಾಬ್‌ನ ಮಾಜಿ ಸಿಎಂ ಅಮರಿಂದರ್ ಸಿಂಗ್ ಮಂಗಳವಾರ ಕಿಡಿಕಾರಿದ್ದಾರೆ.

ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಅವರೊಂದಿಗಿನ ಅಧಿಕಾರದ ಜಗಳದ ನಡುವೆ ಕಳೆದ ತಿಂಗಳು ಅಮರಿಂದರ್ ಸಿಂಗ್ ಅವರು ಪಂಜಾಬ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಪಂಜಾಬ್ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇರುವಾಗಲೇ ತಮ್ಮ ಹೊಸ ರಾಜಕೀಯ ಪಕ್ಷವನ್ನು ಘೋಷಿಸುವ ನಿರೀಕ್ಷೆ ಇದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

'ಪಟಿಯಾಲ ಮತ್ತು ಇತರೆಡೆಗಳಲ್ಲಿ ತನ್ನ ಬೆಂಬಲಿಗರಿಗೆ ವೈಯಕ್ತಿಕ ನಿಂದನೆ ಮೂಲಕ ಬೆದರಿಕೆ ಮತ್ತು ಕಿರುಕುಳ ನೀಡಲಾಗಿದೆ. ಅಂತಹ ಕೀಳು ಮಟ್ಟದ ರಾಜಕೀಯ ಆಟಗಳಿಂದ ಅವರು ನನ್ನನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಈ ಮೂಲಕ ನನ್ನ ಪ್ರತಿಸ್ಪರ್ಧಿಗಳಿಗೆ ತಿಳಿಸುತ್ತಿದ್ದೇನೆ. ಈ ರೀತಿಯ ತಂತ್ರಗಳಿಂದ ಅವರು ಮತಗಳನ್ನು ಅಥವಾ ಜನರ ಹೃದಯವನ್ನು ಗೆಲ್ಲಲು ಸಾಧ್ಯವಿಲ್ಲ' ಎಂದು ಅಮರಿಂದರ್ ಸಿಂಗ್ ಹೇಳಿದರು.

'ನನ್ನ ಬೆಂಬಲಕ್ಕೆ ನಿಂತಿರುವವರು ನನ್ನನ್ನು ನಂಬಿದ್ದಾರೆ ಮತ್ತು ಪಂಜಾಬ್‌ನ ಶಾಂತಿ ಮತ್ತು ಅಭಿವೃದ್ಧಿಗಾಗಿ ಕೆಲಸ ಮಾಡುವುದಕ್ಕಾಗಿ ಬೆಂಬಲವನ್ನು ಮುಂದುವರಿಸಿದ್ದಾರೆ. ಇಂತಹ ಸಣ್ಣ ಬೆದರಿಕೆ ಅಥವಾ ಕಿರುಕುಳದಿಂದಾಗಿ ಅವರನ್ನು ಹೆದರಿಸಲು ಸಾಧ್ಯವಿಲ್ಲ. ನಾವು ಪಂಜಾಬ್‌ನ ಭವಿಷ್ಯಕ್ಕಾಗಿ ಹೋರಾಡುವುದನ್ನು ಮುಂದುವರಿಸುತ್ತೇವೆ' ಎಂದು ಅವರ ಮಾಧ್ಯಮ ಸಲಹೆಗಾರರು ಟ್ವೀಟ್‌ ಮಾಡಿದ್ದಾರೆ.

ಕಳೆದ ಕೆಲವು ದಿನಗಳ ಹಿಂದೆ ಪಾಕಿಸ್ತಾನಿ ಪತ್ರಕರ್ತೆ ಅರೂಸಾ ಅಲಂ ಜೊತೆಗಿನ ಸ್ನೇಹದ ಬಗ್ಗೆ ಕೆಲವು ಪಂಜಾಬ್ ಕಾಂಗ್ರೆಸ್ ನಾಯಕರು ಮತ್ತು ಅಮರಿಂದರ್ ಸಿಂಗ್ ನಡುವೆ ತೀವ್ರ ಮಾತಿನ ಚಕಮಕಿ ನಡೆದಿತ್ತು.

ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಸ್ನೇಹಿತೆ ಪಾಕಿಸ್ತಾನದ ಪತ್ರಕರ್ತೆ ಅರೂಸಾ ಅಲಂ ಅವರು ಪಾಕ್‌ ಗುಪ್ತಚರ ಸಂಸ್ಥೆಯ (ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್-ಐಎಸ್‌ಐ) ಸಂಪರ್ಕದಲ್ಲಿದ್ದಾರೆಯೇ ಎಂಬ ಬಗ್ಗೆ ಸಂಶೋಧನೆ ಮತ್ತು ವಿಶ್ಲೇಷಣಾ ದಳ (RAW-ರಾ) ತನಿಖೆ ನಡೆಸಬೇಕು ಎಂದು ಪಂಜಾಬ್‌ ಉಪಮುಖ್ಯಮಂತ್ರಿ ಸುಖಜಿಂದರ್ ಸಿಂಗ್ ರಾಂಧವ ಒತ್ತಾಯಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು