ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖರ್ಗೋನ್ ಹಿಂಸಾಚಾರದ ಬಗ್ಗೆ ಟ್ವೀಟ್‌: ದಿಗ್ವಿಜಯ್‌ ವಿರುದ್ಧ ಮತ್ತೆ 4 ಎಫ್‌ಐಆರ್

Last Updated 13 ಏಪ್ರಿಲ್ 2022, 11:37 IST
ಅಕ್ಷರ ಗಾತ್ರ

ಭೋಪಾಲ್‌: ಮಧ್ಯ ಪ್ರದೇಶದ ಖರ್ಗೋನ್‌ನಲ್ಲಿ ನಡೆದ ಮತೀಯ ಹಿಂಸಾಚಾರದ ಬಗ್ಗೆ ಕಾಂಗ್ರೆಸ್‌ ಸಂಸದ ದಿಗ್ವಿಜಯ್‌ ಸಿಂಗ್‌ ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಅಭಿಪ್ರಾಯದ ಸಂಬಂಧ ಮತ್ತೆ ನಾಲ್ಕು ಎಫ್‌ಐಆರ್‌ಗಳನ್ನು ಪೊಲೀಸರು ದಾಖಲಿಸಿದ್ದಾರೆ. ಧಾರ್ಮಿಕ ವೈಷಮ್ಯ ಹರಡುವ ಪ್ರಯತ್ನ ಎಂದು ಆರೋಪಿಸಲಾಗಿದೆ.

ಸ್ಥಳೀಯ ನಿವಾಸಿ ಪ್ರಕಾಶ್‌ ಮಂಡೆ ಅವರು ನೀಡಿದ್ದ ದೂರಿನ ಆಧಾರದ ಮೇಲೆ ಮಂಗಳವಾರ ಸಂಜೆ ಭೋಪಾಲ್‌ನಲ್ಲಿ ದಿಗ್ವಿಜಯ್‌ ಸಿಂಗ್‌ ವಿರುದ್ಧ ಎಫ್‌ಐಆರ್‌ ದಾಖಲಾಗಿತ್ತು. ಮಂಗಳವಾರ ರಾತ್ರಿ ಗ್ವಾಲಿಯರ್‌, ಜಬಲ್‌ಪುರ್‌, ನರ್ಮದಾಪುರಂ ಹಾಗೂ ಸತನಾದಲ್ಲಿ ಮತ್ತೆ ನಾಲ್ಕು ಎಫ್‌ಐಆರ್‌ಗಳು ದಾಖಲಾಗಿವೆ.

ರಾಮನವಮಿ ಮೆರವಣಿಗೆಯ ವೇಳೆ ಖರ್ಗೋನ್‌ ಹಿಂಸಾಚಾರದ ವಿಷಯವಾಗಿ ಪ್ರತಿಕ್ರಿಯಿಸಿ ಮಾಡಿದ್ದ ಟ್ವೀಟ್‌ನಲ್ಲಿ ಸಿಂಗ್‌ ಅವರು ಮತ್ತೊಂದು ರಾಜ್ಯದ ಮಸೀದಿಯ ಚಿತ್ರವನ್ನು ಬಳಸಿಕೊಂಡಿದ್ದರು. ಕೆಲವು ಯುವಕರು ಕೇಸರು ಧ್ವಜಗಳನ್ನು ಮಸೀದೆಯ ಮೇಲೆ ಹಾರಿಸುತ್ತಿರುವುದು ಚಿತ್ರದಲ್ಲಿತ್ತು. ಆ ಮೂಲಕ ಧಾರ್ಮಿಕ ದ್ವೇಷ ಹರಡುತ್ತಿರುವುದಾಗಿ ಆರೋಪಿಸಲಾಗಿದೆ.

ದಿಗ್ವಿಜಯ್‌ ಸಿಂಗ್‌ ಅವರು ಅನಂತರ ಆ ಟ್ವೀಟ್‌ ಅಳಿಸಿ ಹಾಕಿದ್ದರು.

ಈ ನಡುವೆ, ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಭೋಪಾಲ್‌ ಪೊಲೀಸ್‌ ಕಮಿಷನರ್‌ಗೆ ಸಿಂಗ್‌ ಪತ್ರ ಬರೆದಿದ್ದಾರೆ. 2019ರ ಮೇ 16ರಂದು ಕಾಂಗ್ರೆಸ್ ಸಂಸದ ರಾಹುಲ್‌ ಗಾಂಧಿ ಅವರ ವಿರುದ್ಧ ಕಲ್ಪಿತ ವಿಷಯಗಳನ್ನು ಒಳಗೊಂಡ ವಿಡಿಯೊ ಅನ್ನು ಶಿವರಾಜ್‌ ಸಿಂಗ್‌ ಹಂಚಿಕೊಂಡಿದ್ದರು ಎಂದು ಆರೋಪಿಸಿದ್ದಾರೆ.

ಬುಧವಾರ ಬೆಳಿಗ್ಗೆ ಮಾಡಿರುವ ಟ್ವೀಟ್‌ನಲ್ಲಿ ಸಿಂಗ್‌, 'ನನ್ನ ಪ್ರಶ್ನೆಗಳಿಗೆ ಉತ್ತರಿಸುವ ಬದಲು ಅವರು ನನ್ನ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ. ಇದುವೇ ಬಿಜೆಪಿಯ ಪ್ರಜಾಪ್ರಭುತ್ವ ಮಾದರಿಯೇ ಅಥವಾ ಮೋದಿ ಮಾದರಿಯೇ? ಬಿಜೆಪಿ ಮಾಡಿರುವ ದ್ವೇಷಪೂರಿತ ಭಾಷಣಗಳು ಮತ್ತು ಬಲ ಪಂಥೀಯ ಮೋಸಗಾರ ಬಾಬಾಗಳ ಕಥೆ ಎನು?' ಎಂದು ಪ್ರಶ್ನಿಸಿದ್ದಾರೆ.

ಭೋಪಾಲ್‌ನಲ್ಲಿ ದಿಗ್ವಿಜಯ್‌ ಸಿಂಗ್‌ ವಿರುದ್ಧ ಐಪಿಸಿ ಸೆಕ್ಷನ್‌ 153–ಎ (ಧರ್ಮದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷ ಹರಡುವುದು), 295–ಎ (ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಚಟುವಟಿಕೆಗಳು), 465 (ಸುಳ್ಳು ಪತ್ರ ಸೃಷ್ಟಿ) ಹಾಗೂ 505 (2) (ಸಾರ್ವಜನಿಕ ಹಾನಿ) ಅಡಿಯಲ್ಲಿ ಪ್ರಕರಣ ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT