ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಆಹ್ವಾನ ತಿರಸ್ಕರಿಸಿರುವೆ: ಕೆಸಿಆರ್‌ ಪುತ್ರಿ ಕವಿತಾ

Last Updated 18 ನವೆಂಬರ್ 2022, 18:48 IST
ಅಕ್ಷರ ಗಾತ್ರ

ಹೈದರಾಬಾದ್‌: ‘ಬಿಜೆಪಿಯ ಕೆಲವು ಸ್ನೇಹಿತರು ಅವರ ಪಕ್ಷ ಸೇರುವಂತೆ ನನ್ನನ್ನು ಸಂಪರ್ಕಿಸಿದ್ದರು. ಆದರೆ, ನಾನು ಅವರ ಆಹ್ವಾನವನ್ನು ನಯವಾಗಿ ತಿರಸ್ಕರಿಸಿದ್ದೆ’ ಎಂದುತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್‌ ರಾವ್‌ ಅವರ ಪುತ್ರಿ ಮತ್ತು ಟಿಆರ್‌ಎಸ್‌ ಶಾಸಕಿ ಕೆ.ಕವಿತಾ ಶುಕ್ರವಾರ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ದೂರವಾಣಿ ಕರೆ ಮಾಡಿ ಮಾತನಾಡಿರುವುದಾಗಿ ನಿಜಾಮಾಬಾದ್ ಕ್ಷೇತ್ರದ ಬಿಜೆಪಿ ಸಂಸದ ಧರ್ಮಪುರಿ ಅರವಿಂದ್‌ ಅವರು ನೀಡಿರುವ ಹೇಳಿಕೆ ನಿರಾಧಾರ. ಇಂತಹ ಸುಳ್ಳು ಆರೋಪ ಮಾಡುವುದನ್ನು ಅವರು ನಿಲ್ಲಿಸಲಿ. ನಾನು ಯೋಗ್ಯ ರಾಜಕಾರಣಿ’ ಎಂದು ಸ್ಪಷ್ಟನೆ ನೀಡಿದರು.

‘ದೇಶದ ರಾಜಕಾರಣದಲ್ಲಿ ಬಹುಕಾಲ ಉಳಿಯಲು ನಾನು ಬಯಸಿರುವೆ. ನಾನು ಯಾರನ್ನೂ ಹೆಸರಿಸಲು ಹೋಗುವುದಿಲ್ಲ. ಬಿಜೆಪಿಯ ಸ್ನೇಹಿತರು, ಬಿಜೆಪಿಸ್ನೇಹಿ ಸಂಸ್ಥೆಗಳೂ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಬಯಸಿ, ‘ಶಿಂದೆ ಮಾದರಿ’ಯ ಪ್ರಸ್ತಾವವನ್ನು ನನ್ನ ಮುಂದಿಟ್ಟಿದ್ದು ನಿಜ’ ಎಂದು ಅವರು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

‘ತೆಲಂಗಾಣದ ಜನರು ತಮ್ಮದೇ ಪಕ್ಷಗಳು ಮತ್ತು ತಮ್ಮದೇ ಆದ ನಾಯಕರಿಗೆ ದ್ರೋಹ ಮಾಡುವುದಿಲ್ಲ. ನಾವು ರಾಜಕಾರಣಕ್ಕೆ ಹಿಂಬಾಗಿಲಿನಿಂದ ಬಂದವರಲ್ಲ, ನಮ್ಮ ಸ್ವಂತ ಬಲದ ಮೇಲೆ ನಾಯಕರಾದವರು. ನನ್ನ ಹೃದಯ ಪಕ್ಷಕ್ಕಾಗಿ ಮಿಡಿಯುತ್ತದೆ. ನಾಯಕ ಕೆಸಿಆರ್‌ ನನ್ನ ಗುರು. ಬಿಜೆಪಿಯವರು ಸುಳ್ಳು ಪ್ರಚಾರ ನಿಲ್ಲಿಸದಿದ್ದರೆ ಜನರೇ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ’ ಎಂದು ಕವಿತಾ ಎಚ್ಚರಿಸಿದರು‌.

ಕಾರ್ಯಕರ್ತರ ಪ್ರತಿಭಟನೆ: ಕೆಸಿಆರ್‌ ಕುಟುಂಬಕ್ಕೆ ಅವಮಾನ ಮಾಡುವಂತೆ, ಕವಿತಾ ಅವರ ವಿರುದ್ಧಅವಹೇಳನಕಾರಿ ಹೇಳಿಕೆ ನೀಡಿರುವ ಬಿಜೆಪಿ ಸಂಸದ ಧರ್ಮಪುರಿ ಅರವಿಂದ್‌ ಅವರ ಮನೆ ಮೇಲೆ ಟಿಆರ್‌ಎಸ್‌ ಕಾರ್ಯಕರ್ತರು ಶುಕ್ರವಾರ ದಾಳಿ ನಡೆಸಿ, ದಾಂದಲೆ ಮಾಡಿದ್ದಾರೆ. ಸಂಸದರ ಪ್ರತಿಕೃತಿಯನ್ನೂ ದಹಿಸಿ ಪ್ರತಿಭಟಿಸಿದರು.

‘ಟಿಆರ್‌ಎಸ್‌ ಪಕ್ಷದ ಹೆಸರನ್ನು ಬಿಆರ್‌ಎಸ್‌ (ಭಾರತ್‌ ರಾಷ್ಟ್ರ ಸಮಿತಿ)ಯಾಗಿ ಬದಲಿಸುವ ಸಮಾರಂಭದಲ್ಲಿ ತಮ್ಮನ್ನು ನಿರ್ಲಕ್ಷಿಸಿದ ಕಾರಣಕ್ಕೆ ಕವಿತಾ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ದೂರವಾಣಿ ಕರೆ ಮಾಡಿ, ರಾಷ್ಟ್ರೀಯ ಪಕ್ಷ ಸೇರುವ ಇಚ್ಛೆ ವ್ಯಕ್ತಪಡಿಸಿದ್ದಾರೆ’ ಎಂದು ಸಂಸದ ಅರವಿಂದ್‌ ಟೀಕಿಸಿದ್ದರು.

ಬಿಜೆಪಿ ಖಂಡನೆ:ಟಿಆರ್‌ಎಸ್‌ ಕಾರ್ಯಕರ್ತರ ದಾಂದಲೆ ಖಂಡಿಸಿರುವ ತೆಲಂಗಾಣ ಬಿಜೆಪಿಯು, ಇದು ರಾಜ್ಯ ಸರ್ಕಾರ ಪ್ರೇರಿತ ದಾಂದಲೆ ಎಂದು ಆರೋಪಿಸಿದೆ.

‘ಟಿಆರ್‌ಎಸ್‌ ಗೂಂಡಾಗಳು ನನ್ನ ನಿವಾಸದ ಮೇಲೆ ದಾಳಿ ನಡೆಸಿ, ಮನೆಯನ್ನು ಧ್ವಂಸಗೊಳಿಸಿದರು. ಗದ್ದಲ ಎಬ್ಬಿಸಿ, ನನ್ನ ತಾಯಿಯನ್ನು ಭಯಭೀತಗೊಳಿಸಿದರು’ ಎಂದು ಸಂಸದ ಅರವಿಂದ್‌ ಟ್ವೀಟ್‌ ಮಾಡಿದ್ದಾರೆ.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್‌ ಚುಗ್, ‘ಟಿಆರ್‌ಎಸ್‌ ಗೂಂಡಾಗಳು ಸಂಸದರ ಮನೆಯನ್ನು ದೋಚುವ ಲಜ್ಜೆಗೆಟ್ಟ ಗೂಂಡಾಗಿರಿಯನ್ನು ನಡೆಸಿದ್ದಾರೆ’ ಎಂದು ಹೇಳಿಕೆಯಲ್ಲಿ ಟೀಕಿಸಿದ್ದಾರೆ.

ಇದಕ್ಕೆ ಟಿಆರ್‌ಎಸ್‌ನಿಂದ ತಕ್ಷಣದ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT