ಸೋಮವಾರ, ಆಗಸ್ಟ್ 8, 2022
22 °C

ಅಶ್ಲೀಲ ಚಿತ್ರ ಮತ್ತು ಬೆಟ್ಟಿಂಗ್‌: ವ್ಯಾವಹಾರಿಕ ವಿವಾದಗಳಲ್ಲಿ 'ರಾಜ್ ಕುಂದ್ರಾ'

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಅಶ್ಲೀಲ ಚಿತ್ರಗಳನ್ನು ತಯಾರಿಸಿದ ಮತ್ತು ಆ್ಯಪ್‌ಗಳ ಮೂಲಕ ಅವುಗಳನ್ನು ಬಿತ್ತರಿಸಿದ ಆರೋಪದ ಮೇಲೆ ಉದ್ಯಮಿ ರಾಜ್ ಕುಂದ್ರಾ ಅವರನ್ನು ಮುಂಬೈನ ಸ್ಥಳೀಯ ನ್ಯಾಯಾಲಯ ಜುಲೈ 23ರ ವರೆಗೆ ಪೊಲೀಸ್‌ ವಶಕ್ಕೆ ಒಪ್ಪಿಸಿದೆ.

ಕುಂದ್ರಾ ಅವರನ್ನು ಮುಂಬೈ ಪೊಲೀಸರು ಸೋಮವಾರ ಬಂಧಿಸಿದ್ದರು. ಈ ಪ್ರಕರಣದಲ್ಲಿ ಕುಂದ್ರಾ ಪ್ರಮುಖ ಆರೋಪಿಯಾಗಿದ್ದಾರೆ ಎಂದು ಮುಂಬೈ ಅಪರಾಧ ವಿಭಾಗದ ಪೊಲೀಸರು ಹೇಳಿದ್ದಾರೆ.

ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿಯವರ ಪತಿಯಾಗಿರುವ ರಾಜ್ ಕುಂದ್ರಾ ದೇಶದ ಪ್ರತಿಷ್ಠಿತ ಉದ್ಯಮಿಗಳಲ್ಲಿ ಒಬ್ಬರಾಗಿ ಬೆಳೆದದ್ದು ಮತ್ತು ವ್ಯಾವಹಾರಿಕ ವಿವಾದಗಳಲ್ಲಿ ಸಿಲುಕಿದ್ದು ಹೇಗೆ ಎಂಬುದರ ಬಗೆಗಿನ ಮಾಹಿತಿಗಳು ಇಲ್ಲಿವೆ.

ಪಶ್ಮೀನಾ ಶಾಲುಗಳ ತಯಾರಿಕೆ, ಅಮೂಲ್ಯ ಲೋಹಗಳ ಮಾರಾಟ, ಕಟ್ಟಡ ನಿರ್ಮಾಣ ಮತ್ತು ನವೀಕರಿಸಬಹುದಾದ ಇಂಧನ ಯೋಜನೆಗಳನ್ನು ಒಳಗೊಂಡ ಹಲವಾರು ವ್ಯವಹಾರಗಳಿಂದ ರಾಜ್‌ ಕುಂದ್ರಾ ಖ್ಯಾತಿಯನ್ನು ಗಳಿಸಿದರು. ತಮ್ಮ ಆಸಕ್ತಿಯ ಕ್ಷೇತ್ರಗಳಾದ ಕ್ರೀಡೆ ಮತ್ತು ತಂತ್ರಜ್ಞಾನಗಳಿಗೆ ಸಂಬಂಧಿಸಿದ ವ್ಯವಹಾರಗಳಲ್ಲಿ ಅವರು ತೊಡಗಿಸಿಕೊಂಡರು.

ಬ್ಯುಸಿನೆಸ್‌ ಟುಡೇ ವರದಿಯ ಪ್ರಕಾರ, ಅವರು ಎಂ.ಎಂ.ಎ ಫೈಟಿಂಗ್ ಲೀಗ್ ಮತ್ತು ಪೋಕರ್ ಗೇಮ್ ಲೀಗ್ ಅನ್ನು ಪ್ರಾರಂಭಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಟೆಲಿಶಾಪಿಂಗ್ ಚಾನೆಲ್ 'ಬೆಸ್ಟ್ ಡೀಲ್ ಟಿವಿ'ಯಲ್ಲಿ ಸಹ ಅವರು ಹೂಡಿಕೆ ಮಾಡಿದ್ದಾರೆ. ಆನ್‌ಲೈನ್‌ ಆ್ಯಪ್‌ಗಳಲ್ಲಿ ತೀವ್ರ ಆಸಕ್ತಿ ಹೊಂದಿರುವ ಕುಂದ್ರಾ 'ಲೈವ್ ಸ್ಟ್ರೀಮ್ ಅಪ್ಲಿಕೇಶನ್' ಅನ್ನೂ ಸಹ ಪ್ರಾರಂಭಿಸಿದರು.

ಇದನ್ನೂ ಓದಿ: ಮುಂಬೈ ಟು ಲಂಡನ್... ಇದು ರಾಜ್ ಕುಂದ್ರಾ ಅಶ್ಲೀಲ ಚಿತ್ರಗಳ ಯಾನ

ಆದರೆ, ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಬಂಡವಾಳ ಹೂಡಿದ್ದು ಕುಂದ್ರಾ ಅವರ ಅತ್ಯಂತ ಜನಪ್ರಿಯ ಉದ್ಯಮವಾಗಿದೆ. 2009ರಲ್ಲಿ ರಾಜಸ್ಥಾನ್ ರಾಯಲ್ಸ್‌ ತಂಡದ ಮಾಲೀಕತ್ವದಲ್ಲಿ ಪಾಲುದಾರರಾಗಿ ಕುಂದ್ರಾ ಮಿಂಚಿದರು. ಅವರ ಪತ್ನಿ, ಖ್ಯಾತ ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಅವರೊಂದಿಗೆ ಸೇರಿ ಶೇ 12 ರಷ್ಟು ಪಾಲನ್ನು ತಮ್ಮದಾಗಿಸಿಕೊಂಡರು.

2013ರಲ್ಲಿ ಬೆಳಕಿಗೆ ಬಂದ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಕುಂದ್ರಾ ಭಾಗಿಯಾಗಿರುವ ಆರೋಪಗಳು ಕೇಳಿಬಂದವು. ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ತೊಡಗಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕುಂದ್ರಾ ಅವರನ್ನು ದೆಹಲಿ ಪೊಲೀಸರು ವಿಚಾರಣೆಗೆ ಒಳಪಡಿಸಿದರು.

'ನಾನು ಯಾವುದೇ ಮ್ಯಾಚ್‌ಗಳನ್ನು ಫಿಕ್ಸ್‌ ಮಾಡಿಲ್ಲ. ಆದರೆ, ತನ್ನ ವ್ಯವಹಾರಿಕ ಪಾಲುದಾರ ಮತ್ತು ಸ್ನೇಹಿತ ಉಮೇಶ್‌ ಗೋಯಾಂಕಾ ಮೂಲಕ ಬೆಟ್ಟಿಂಗ್‌ನಲ್ಲಿ ತೊಡಗಿದ್ದು ನಿಜ' ಎಂದು ವಿಚಾರಣೆ ವೇಳೆ ರಾಜ್‌ ಕುಂದ್ರಾ ಹೇಳಿಕೆ ನೀಡಿದರು.

ಎರಡು ವರ್ಷಗಳ ಕಾಲ ಐಪಿಎಲ್‌ನಲ್ಲಿ ಭಾಗವಹಿಸದಿರಲು ರಾಜಸ್ಥಾನ್‌ ರಾಯಲ್ಸ್‌ ತಂಡವನ್ನು ಸುಪ್ರೀಂ ಕೋರ್ಟ್‌ 2015ರಲ್ಲಿ ನಿರ್ಬಂಧಿಸಿತು. ಐಪಿಎಲ್ ಮತ್ತು ಅದಕ್ಕೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಭಾಗವಹಿಸದಂತೆ ಕುಂದ್ರಾ ಅವರಿಗೆ ಜೀವಾವಧಿ ನಿಷೇಧವನ್ನೂ ಹೇರಲಾಯಿತು.

ಇದನ್ನೂ ಓದಿ- ಲಂಡನ್‌ ಮೂಲದ ಸಂಸ್ಥೆಯೊಂದಿಗೆ ಕೈಜೋಡಿಸಿದ್ದ ರಾಜ್‌ ಕುಂದ್ರಾ: ಮುಂಬೈ ಪೊಲೀಸರು

ಸ್ಪಾಟ್ ಫಿಕ್ಸಿಂಗ್‌ ಘಟನೆ ಬಳಿಕ ಸುಮ್ಮನೇ ಕುಳಿತುಕೊಳ್ಳದ ರಾಜ್ ಕುಂದ್ರಾ ಇದೇ ರೀತಿಯ ಮತ್ತೊಂದು ಉದ್ಯಮದಲ್ಲಿ ಹೂಡಿಕೆ ಮಾಡಿದರು. ಇದನ್ನು ಮ್ಯಾಚ್ ಇಂಡಿಯಾ ಪೋಕರ್ ಲೀಗ್ ಅಥವಾ ಮ್ಯಾಚ್ಐಪಿಎಲ್ ಎಂದು ಕರೆಯಲಾಗುತ್ತದೆ. ಅವರ ಕಂಪನಿ 'ವಿಯಾನ್ ಇಂಡಸ್ಟ್ರೀಸ್' 2017 ರಲ್ಲಿ ಇಂಟರ್ನ್ಯಾಷನಲ್ ಫೆಡರೇಶನ್ ಆಫ್ ಪೋಕರ್ ಸಹಭಾಗಿತ್ವದಲ್ಲಿ ಲೀಗ್ ಅನ್ನು ಪ್ರಾರಂಭಿಸಿತು. ಗೇಮಿಂಗ್, ಎನಿಮೇಷನ್ ಮತ್ತು ಮನರಂಜನೆಯಲ್ಲಿ ವಿಯಾನ್ ಇಂಡಸ್ಟ್ರೀಸ್ ತೊಡಗಿಸಿಕೊಂಡಿದೆ.

'ತಂತ್ರಜ್ಞಾನದ ಕೊಡುಗೆಗಳ ಮೂಲಕ ಜನಸಾಮಾನ್ಯರ ಜೀವನಶೈಲಿಯಲ್ಲಿ ಬದಲಾವಣೆಗಳನ್ನು ತರುವುದು ನಮ್ಮ ಉದ್ದೇಶವಾಗಿದೆ' ಎಂದು ವಿಯಾನ್ ಇಂಡಸ್ಟ್ರೀಸ್ ಹೇಳಿಕೊಂಡಿದೆ. 'ಇದೇ ವಿಯಾನ್ ಇಂಡಸ್ಟ್ರೀಸ್ ಲಂಡನ್ ಮೂಲದ ಕೆನ್ರಿನ್ ಸಂಸ್ಥೆ ಜೊತೆ ಒಪ್ಪಂದ ಮಾಡಿಕೊಂಡಿದೆ. ಕೆನ್ರಿನ್‌ ಸಂಸ್ಥೆಯು 'ಹಾಟ್‌ ಶಾಟ್ಸ್' ಎಂಬ ಆ್ಯಪ್‌ ಹೊಂದಿದ್ದು, ಅಶ್ಲೀಲ ಚಿತ್ರಗಳನ್ನು ತಯಾರಿಸಿ, ಬಿಡುಗಡೆ ಮಾಡುತ್ತಿತ್ತು' ಎಂದು ಮುಂಬೈನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಈಗ ತಿಳಿಸಿದ್ದಾರೆ.

ಕೆನ್ರಿನ್‌ ಸಂಸ್ಥೆಯ ಜೊತೆ ಒಪ್ಪಂದ ಹೊಂದಿದ್ದ ರಾಜ್‌ ಕುಂದ್ರಾ ಅವರ ಕಂಪನಿಯು ಭಾರತೀಯ ವೀಕ್ಷಕರಿಗಾಗಿಯೇ ಅಶ್ಲೀಲ ಚಿತ್ರಗಳನ್ನು ತಯಾರಿಸುವಲ್ಲಿ ಕಾರ್ಯನಿರತವಾಗಿತ್ತು ಎಂದು ಪೊಲೀಸ್‌ ಮೂಲಗಳು ಹೇಳಿವೆ.

ಇದನ್ನೂ ಓದಿ: ನಟಿಗೆ ನಗ್ನವಾಗಿ ಕಾಣಿಸಿಕೊಳ್ಳಲು ಹೇಳಿದ್ದ ರಾಜ್‌ ಕುಂದ್ರಾ?

ರಾಜ್ ಕುಂದ್ರಾ ತೊಡಗಿಸಿಕೊಂಡಿರುವ ಮತ್ತೊಂದು ಅತ್ಯಂತ ಯಶಸ್ವಿ ವ್ಯವಹಾರವೆಂದರೆ ಜೆ.ಎಲ್. ಸ್ಟ್ರೀಮ್ ಪ್ರೈವೇಟ್ ಲಿಮಿಟೆಡ್. ಇದನ್ನು ಕೇಂದ್ರ ಸರ್ಕಾರದ ಸ್ಟಾರ್ಟ್ಅಪ್ ಇಂಡಿಯಾ ಕಾರ್ಯಕ್ರಮದ ಅಡಿಯಲ್ಲಿ ಸ್ಥಾಪಿಸಲಾಯಿತು.

ಕುಂದ್ರಾ ಅವರು ಸ್ಥಾಪಿಸಿರುವ ಜಲ್ದಿ ಲೈವ್ ಸ್ಟ್ರೀಮ್ ಅಪ್ಲಿಕೇಶನ್‌ ಮೂಲಕ ವೃತ್ತಿಪರರು ಮತ್ತು ಹವ್ಯಾಸಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಬಹುದಾಗಿದೆ. ಕಂಪನಿಯು ಮುಂಬೈ, ಲಂಡನ್ ಮತ್ತು ಸಿಂಗಾಪುರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.

ಇದನ್ನೂ ಓದಿ- ಜೈಲಲ್ಲಿ ಕೊಳೆಯಲಿ: ರಾಜ್‌ ಕುಂದ್ರಾಗೆ ಯೂಟ್ಯೂಬ್‌ ಸ್ಟಾರ್‌ ಶಾಪ ಹಾಕಿದ್ದೇಕೆ?

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು