ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮಿಳುನಾಡು: ಪೊಂಗಲ್‌ ಆಹ್ವಾನ ಪತ್ರಿಕೆಯಿಂದ ರಾಜ್ಯ ಲಾಂಛನ ಕೈಬಿಟ್ಟ ರಾಜ್ಯಪಾಲ ರವಿ

ತಮಿಳುನಾಡು: ಮತ್ತೊಂದು ವಿವಾದ ಸೃಷ್ಟಿಸಿದ ಆರ್‌.ಎನ್‌.ರವಿ; ರಾಜ್ಯಪಾಲರ ನಡೆಗೆ ಆಕ್ರೋಶ
Last Updated 10 ಜನವರಿ 2023, 18:50 IST
ಅಕ್ಷರ ಗಾತ್ರ

ಚೆನ್ನೈ: ತಮಿಳುನಾಡು ರಾಜ್ಯಪಾಲ ಆರ್‌.ಎನ್‌.ರವಿ ಅವರು ಇದೇ 12ರಂದು ರಾಜಭವನದಲ್ಲಿ ಪೊಂಗಲ್‌ ಸಂಭ್ರಮಾಚರಣೆ ನಡೆಸಲು ಉದ್ದೇಶಿಸಿದ್ದು, ಇದಕ್ಕಾಗಿ ಸಿದ್ಧಪಡಿಸಿರುವ ಆಹ್ವಾನ ಪತ್ರಿಕೆಯಿಂದ ರಾಜ್ಯ ಲಾಂಛನ ಕೈಬಿಟ್ಟಿರುವುದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ.

ಅತಿ ಗಣ್ಯರು ಹಾಗೂ ಇತರರಿಗೆ ಈಗಾಗಲೇ ಆಹ್ವಾನ ಪತ್ರಿಕೆ ರವಾನಿಸಲಾಗಿದ್ದು, ಅದರಲ್ಲಿ ತಮ್ಮ ಹೆಸರಿನಡಿ ತಮಿಳುನಾಡು ರಾಜ್ಯಪಾಲ ಎನ್ನುವ ಬದಲು ತಮಿಳಗಂ ರಾಜ್ಯಪಾಲ ಎಂದು ಮುದ್ರಿಸಿರುವುದು ವಿವಿಧ ಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದೆ. ರಾಜ್ಯಕ್ಕೆ ತಮಿಳುನಾಡು ಎಂದು ಕರೆಯುವ ಬದಲು ತಮಿಳಗಂ ಎಂದು ಸಂಬೋಧಿಸುವುದೇ ಸೂಕ್ತ ಎಂದು ಕೆಲ ದಿನಗಳ ಹಿಂದೆ ಅವರು ಹೇಳಿದ್ದರು.

2022ರ ಏಪ್ರಿಲ್‌ 14ರಂದು ರಾಜಭವನದಲ್ಲಿ ಚಹಾ ಕೂಟ ಏರ್ಪಡಿಸಲಾಗಿತ್ತು. ಆಗ ಸಿದ್ಧಪಡಿಸಿದ್ದ ಆಹ್ವಾನ ಪತ್ರಿಕೆಯಲ್ಲಿ ರಾಜ್ಯ ಲಾಂಛನ ಮುದ್ರಿಸಲಾಗಿತ್ತು. ಡಿಸೆಂಬರ್‌ 14ರಂದು ಉದಯನಿಧಿ ಸ್ಟಾಲಿನ್‌ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಆ ಸಮಾರಂಭದ ಆಹ್ವಾನ ಪತ್ರಿಕೆಯಲ್ಲಿ ರಾಜ್ಯದ ಜೊತೆಗೆ ಕೇಂದ್ರದ ಲಾಂಛನವನ್ನೂ ನಮೂದಿಸಲಾಗಿತ್ತು. ಆದರೆ ‍ಈಗ ಕೇಂದ್ರ ಸರ್ಕಾರದ ಲಾಂಛನವನ್ನಷ್ಟೇ ಮುದ್ರಿಸಲಾಗಿದೆ.

ಸಿಪಿಐ (ಎಂ) ಸಂಸದ ಸು.ವೆಂಕಟೇಶನ್‌ ಅವರು 2022 ಹಾಗೂ 2023ರಲ್ಲಿ ರಾಜಭವನದಿಂದ ತಮಗೆ ಕಳುಹಿಸಲಾಗಿರುವ ಆಹ್ವಾನ ಪತ್ರಿಕೆಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

‘ರಾಜ್ಯ ಲಾಂಛನದಲ್ಲಿ ತಮಿಳುನಾಡಿನ ಹೆಸರೂ ಇದೆ. ಆದ್ದರಿಂದ ರಾಜ್ಯಪಾಲರು ಆಹ್ವಾನ ಪತ್ರಿಕೆಯಲ್ಲಿ ಲಾಂಛನ ಮುದ್ರಿಸಿಲ್ಲ. ಅವರು ಇರುವುದು ಬಾಡಿಗೆ ನಿವಾಸ (ರಾಜಭವನ). ಅದನ್ನು ಖಾಲಿ ಮಾಡುತ್ತಾರೆಯೇ? ಅವರು ರಾಜ್ಯ ತೊರೆಯುವುದನ್ನು ನಾವು ನಿರೀಕ್ಷಿಸಬಹುದೇ’ ಎಂದು ವೆಂಕಟೇಶನ್‌ ಪ್ರಶ್ನಿಸಿದ್ದಾರೆ.

ಪೊಂಗಲ್‌ ಆಹ್ವಾನ ಪತ್ರಿಕೆಯು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಹಲವರು ರಾಜ್ಯಪಾಲರ ನಡೆಯನ್ನು ಖಂಡಿಸಿದ್ದಾರೆ. ತಮಿಳುನಾಡು ಎಂದು ಸಂಬೋಧಿಸುವುದಕ್ಕೆ ಮನಸ್ಸಿಲ್ಲದಿದ್ದರೆ ಅವರು ರಾಜ್ಯ ಬಿಟ್ಟು ಹೋಗಲಿ ಎಂದು ಕಿಡಿಕಾರಿದ್ದಾರೆ.

ರಾಜ್ಯಪಾಲರ ವಿರುದ್ಧ ಹಲವೆಡೆ ಪ್ರತಿಭಟನೆ
ಚೆನ್ನೈ (‍ಪಿಟಿಐ):
ಆಡಳಿತಾರೂಢ ಡಿಎಂಕೆ ಹಾಗೂ ರವಿ ನಡುವಣ ತಿಕ್ಕಾಟ ತೀವ್ರಗೊಂಡಿರುವ ಬೆನ್ನಲ್ಲೇ ಅವರನ್ನು ವಜಾಗೊಳಿಸುವಂತೆ ಆಗ್ರಹಿಸಿ ಮಂಗಳವಾರ ರಾಜ್ಯದ ಹಲವೆಡೆ ಪ್ರತಿಭಟನೆ ನಡೆಸಲಾಗಿದೆ.

ಪ್ರತಿಭಟನಕಾರರು ‘ಗೆಟ್‌ಔಟ್‌ರವಿ’ ಬರಹವಿರುವ ಫಲಕ ಹಿಡಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಲವೆಡೆ ಕಾಂಪೌಂಡ್‌ಗಳ ಮೇಲೂ ‘ಗೆಟ್‌ಔಟ್‌ರವಿ’ ಬರಹವುಳ್ಳ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ.

ಕೊಯಮತ್ತೂರಿನಲ್ಲಿ ಪ್ರತಿಭಟನೆ ನಡೆಸಿದ ತಂತೈ ಪೆರಿಯಾರ್‌ ದ್ರಾವಿಡರ್‌ ಕಳಗಂ ಸಂಘಟನೆಯ ಕಾರ್ಯಕರ್ತರು ರವಿ ಅವರ ಪ್ರತಿಕೃತಿ ದಹಿಸಲು ಯತ್ನಿಸಿದರು. ಅವರನ್ನು ಪೊಲೀಸರು ವಶಕ್ಕೆ ಪಡೆದರು.

ರಾಜ್ಯಪಾಲರು ಸದನವನ್ನು ಉದ್ದೇಶಿಸಿ ಮಾತನಾಡುವಾಗ ಸರ್ಕಾರ ಸಿದ್ಧಪಡಿಸಿಕೊಟ್ಟಿದ್ದ ಭಾಷಣದಲ್ಲಿನ ಕೆಲ ಅಂಶಗಳನ್ನು ಉದ್ದೇಶಪೂರ್ವಕವಾಗಿ ಕೈಬಿಟ್ಟಿದ್ದಾರೆ ಎಂದು ಆರೋಪಿಸಿದ್ದ ಡಿಎಂಕೆ ಮೈತ್ರಿಕೂಟದ ಶಾಸಕರು ಸದನದಲ್ಲಿ ಸೋಮವಾರ ಗದ್ದಲ ನಡೆಸಿದ್ದರು. ರಾಜ್ಯಪಾಲರ ವೈಯಕ್ತಿಕ ಅಭಿಪ್ರಾಯಗಳನ್ನು ಕಡತದಿಂದ ತೆಗೆದುಹಾಕುವಂತೆ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಗೊತ್ತುವಳಿಯನ್ನೂ ಮಂಡಿಸಿದ್ದರು.

‘ಪ್ರತಿಬಾರಿಯೂ ಸದನದಲ್ಲಿ ತೀಕ್ಷ್ಣ ಉತ್ತರ ನೀಡುವ ಮೂಲಕ ವಿರೋಧ ಪಕ್ಷಗಳ ಬಾಯಿ ಮುಚ್ಚಿಸುತ್ತಿದ್ದ ನಮ್ಮ ನಾಯಕ ಸ್ಟಾಲಿನ್‌ ಅವರು ಸೋಮವಾರ ರಾಜ್ಯಪಾಲರನ್ನೇ ಸದನ ತೊರೆಯುವಂತೆ ಮಾಡಿದ್ದಾರೆ. ನಮ್ಮ ಹಕ್ಕುಗಳಿಗೆ ಧಕ್ಕೆಯಾದಾಗ ದನಿ ಎತ್ತುವ ಮೊದಲ ಮುಖ್ಯಮಂತ್ರಿ ಅವರಾಗಿದ್ದಾರೆ’ ಎಂದು ಸಚಿವ ಉದಯನಿಧಿ ಸ್ಟಾಲಿನ್‌ ಮಂಗಳವಾರ ಹೇಳಿದ್ದಾರೆ.

ರವಿ ಅವರನ್ನು ಬೆಂಬಲಿಸಿ ಪುದುಕೊಟ್ಟೈನಲ್ಲಿ ಧರಣಿ ನಡೆಸಿರುವ ಬಿಜೆಪಿ ಕಾರ್ಯಕರ್ತರು, ಡಿಎಂಕೆ ವಿರುದ್ಧ ಕಿಡಿಕಾರಿದ್ದಾರೆ. ರಾಜ್ಯ ಬಿಜೆಪಿ ಘಟಕದ ಕಾರ್ಯದರ್ಶಿ ಎ.ಅಶ್ವತ್ಥಮನ್‌ ಅವರು ಡಿಎಂಕೆಯ ಕೆಲ ಶಾಸಕರ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಐಪಿಸಿ ಸೆಕ್ಷನ್‌ 124ರ ಅಡಿಯಲ್ಲಿ ಪ್ರಕರಣ ದಾಖಲಿಸಿರುವುದಾಗಿ ಅವರು ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT