ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಗಳ ತಲಾ ಆದಾಯದ ಅಂಕಿ ಅಂಶ ಉಲ್ಲೇಖಿಸಿ ಯೋಗಿ ವಿರುದ್ಧ ಕೆಸಿಆರ್‌ ವಾಗ್ದಾಳಿ

Last Updated 29 ನವೆಂಬರ್ 2020, 3:53 IST
ಅಕ್ಷರ ಗಾತ್ರ

ಹೈದರಾಬಾದ್‌ (ತೆಲಂಗಾಣ): ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆ ಪ್ರಚಾರದ ವೇಳೆ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್‌ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಮತ್ತು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

'ತಲಾ ಆದಾಯದಲ್ಲಿ 28ನೇ ಸ್ಥಾನದಲ್ಲಿರುವ ರಾಜ್ಯವೊಂದರ ಮುಖ್ಯಮಂತ್ರಿ, 5ನೇ ಸ್ಥಾನದಲ್ಲಿರುವ ನಮಗೆ ಪಾಠ ಕಲಿಸಲು ಪ್ರಯತ್ನಿಸುತ್ತಿದ್ದಾರೆ,' ಎಂದು ಕೆಸಿಆರ್‌ ಕುಹಕವಾಡಿದ್ದಾರೆ.

ಬಿಜೆಪಿ ಪರವಾಗಿ ಹೈದರಾಬಾದ್‌ನಲ್ಲಿ ಶನಿವಾರ ಪ್ರಚಾರ ಕೈಗೊಂಡಿದ್ದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, 'ಟಿಆರ್‌ಎಸ್‌ ಅಧಿಕಾರ ದುರ್ಬಳಕೆ, ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಆರೋಪಸಿದ್ದರು. ಇನ್ನು ಮುಂದೆ ಲೂಟಿ ಮಾಡಲು ಅವಕಾಶ ನೀಡುವುದಿಲ್ಲ ಎಂಬ ಸಂದೇಶವನ್ನು ಮತದಾರರು ಅವರಿಗೆ ನೀಡಬೇಕು,' ಎಂದು ಆಗ್ರಹಿಸಿದ್ದರು.

ಇದೇ ಹಿನ್ನೆಲೆಯಲ್ಲಿ ಕೆಸಿಆರ್‌, ಯೋಗಿ ಅದಿತ್ಯನಾಥ್‌ ಅವರ ವಿರುದ್ಧ ಹರಿಹಾಯ್ದಿದ್ದಾರೆ.

'ಇಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಬಂದಿದ್ದಾರೆ. ತಲಾ ಆದಾಯದ ದೃಷ್ಟಿಯಿಂದ ನಮ್ಮ ರಾಜ್ಯವು 6 ವರ್ಷಗಳ ಹಿಂದೆ 13 ನೇ ಸ್ಥಾನದಲ್ಲಿತ್ತು. ಈಗ 5 ನೇ ಸ್ಥಾನದಲ್ಲಿದೆ. ಉತ್ತರ ಪ್ರದೇಶ 28 ಅಥವಾ 29 ನೇ ಸ್ಥಾನದಲ್ಲಿದೆ. ಅವರು ನಮಗೆ ಪಾಠ ಕಲಿಸಲು ಬರುತ್ತಾರೆ. ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡಣವೀಸ್ ಬಂದರು. ಅವರ ರಾಜ್ಯ 10 ನೇ ಸ್ಥಾನದಲ್ಲಿದೆ. ಐದನೇ ಸ್ಥಾನದಲ್ಲಿರುವ ನಮಗೆ ಅವರು ಕಲಿಸಲು ಪ್ರಯತ್ನಿಸುತ್ತಾರೆ,' ಎಂದು ವ್ಯಂಗ್ಯವಾಡಿದ್ದಾರೆ.

ರಾಜ್ಯದ ನೆರೆ ಹಾವಳಿ ಮತ್ತು ಅದಕ್ಕೆ ಕೇಂದ್ರ ಸ್ಪಂದಿಸಿದ ರೀತಿಯನ್ನು ಉಲ್ಲೇಖಿಸಿ ಕೆಸಿಆರ್‌ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

'ನೆರೆ ಪರಿಸ್ಥಿತಿ ನಿಭಾಯಿಸಲು ₹1,300 ಕೋಟಿ ಸಹಾಯ ಕೇಳಿದರೆ, ₹13ಗಳನ್ನೂ ಕೇಂದ್ರ ಸರ್ಕಾರ ಕೊಡಲಿಲ್ಲ. ಆದರೆ, ಯಶಸ್ವಿಯಾಗಿ ನಡೆಯುತ್ತಿರುವ ಎಲ್‌ಐಸಿ, ರೈಲ್ವೆಯಂಥ ಸಾರ್ವಜನಿಕ ವಲಯದ ಉದ್ದಿಮೆಗಳನ್ನು ಮಾರಾಟ ಮಾಡುತ್ತಿದೆ,' ಎಂದು ಆಕ್ರೋಶ ವ್ಯಕ್ತಪಡಿಸಿದರು.

'ಕೆಲವು ವಿಭಜಕ ಶಕ್ತಿಗಳು ಹೈದರಾಬಾದ್‌ಗೆ ಪ್ರವೇಶಿಸಿ ನಗರದಲ್ಲಿ ಸಮಸ್ಯೆ ಸೃಷ್ಟಿ ಮಾಡಲು ಪ್ರಯತ್ನಿಸುತ್ತಿವೆ. ನಾವು ಅದಕ್ಕೆ ಅವಕಾಶ ನೀಡಬೇಕೇ? ನಾವು ಶಾಂತಿ ಕಳೆದುಕೊಳ್ಳಬೇಕೆ? ದಯವಿಟ್ಟು ಪ್ರಗತಿಪರ ಚಿಂತನೆಯ ಪಕ್ಷವಾದ ಟಿಆರ್‌ಎಸ್‌ ಅನ್ನು ಬೆಂಬಲಿಸಿ. ಹೈದರಾಬಾದ್ ಅನ್ನು ಈ ವಿಭಜಕ ಶಕ್ತಿಗಳಿಂದ ರಕ್ಷಿಸಿ' ಎಂದು ಅವರು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT