ಶುಕ್ರವಾರ, ಆಗಸ್ಟ್ 12, 2022
20 °C

ಪಶ್ಚಿಮ ಬಂಗಾಳ| ಎನ್‌ಡಿಎ ತೊರೆದ ಜಿಜೆಎಂ, ಟಿಎಂಸಿ ಜತೆಗೆ ಮೈತ್ರಿ

ಪಿಟಿಐ Updated:

ಅಕ್ಷರ ಗಾತ್ರ : | |

ಕೋಲ್ಕತ್ತಾ: ಬಹುಕಾಲದಿಂದಲೂ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದಲ್ಲಿದ್ದ ಗೋರ್ಖಾ ಜನಮುಕ್ತಿ ಮೋರ್ಚಾ (ಜಿಜೆಎಂ) ಬುಧವಾರ ಆಡಳಿತಾ ರೂಢ ತೃಣಮೂಲ ಕಾಂಗ್ರೆಸ್‌(ಟಿಎಂಸಿ) ಜೊತೆಗೆ ಕೈಜೋಡಿಸಿದೆ.

2017ರಲ್ಲಿ ಪ್ರತ್ಯೇಕ ಗೋರ್ಖಾಲ್ಯಾಂಡ್‌ಗಾಗಿ ನಡೆದಿದ್ದ ಹೋರಾಟ ಹಿಂಸಾಚಾರಕ್ಕೆ ತಿರುಗಿದ ನಂತರ ಭೂಗತರಾಗಿದ್ದ ಜಿಜೆಎಂನ ನಾಯಕ ಬಿಮಲ್‌ ಗುರುಂಗ್‌ ಬುಧವಾರ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡರು. ಅಲ್ಲದೆ, ಜಿಜೆಎಂ ಎನ್‌ಡಿಎ ಮೈತ್ರಿಕೂಟ ತೊರೆಯುತ್ತಿರುವುದಾಗಿ ಘೋಷಿಸಿದರು.

‘ಡಾರ್ಜಿಲಿಂಗ್‌ಗೆ ಶಾಶ್ವತ ಪರಿಹಾರ ಕಲ್ಪಿಸಿಕೊಡುವಲ್ಲಿ ಬಿಜೆಪಿ ವಿಫಲವಾಗಿದೆ. ನಾವು 2009ರಿಂದ ಎನ್‌ಡಿಎಯ ಭಾಗವಾಗಿದ್ದೇವೆ. ಆದರೆ ಬಿಜೆಪಿಯು ಡಾರ್ಜಿಲಿಂಗ್‌ಗೆ ಶಾಶ್ವತ ರಾಜಕೀಯ ಪರಿಹಾರ ನೀಡುವ ಭರವಸೆಯನ್ನು ಉಳಿಸಿಕೊಂಡಿಲ್ಲ. 11 ಗೋರ್ಖಾ ಸಮುದಾಯಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂಬ ನಮ್ಮ ಬೇಡಿಕೆಯನ್ನು ಬಿಜೆಪಿ ಈಡೇರಿಲ್ಲ. ನಾವು ಮೋಸ ಹೋಗಿದ್ದೇವೆ. ಹೀಗಾಗಿಯೇ ನಾವು ಎನ್‌ಡಿಎಯಿಂದ ಹೊರಬಂದಿದ್ದೇವೆ,’ ಎಂದು ಬಿಮಲ್‌ ಹೇಳಿದರು.

‘2021ರ ಚುನಾವಣೆಯಲ್ಲಿ ನಾವು ಮಮತಾ ಬ್ಯಾನರ್ಜಿ ಅವರ ನೇತೃತ್ವದ ಟಿಎಂಸಿಯನ್ನು ಬೆಂಬಲಿಸುತ್ತೇವೆ. ಬಿಜೆಪಿಗೆ ಪಾಠ ಕಲಿಸುತ್ತೇವೆ. ಡಾರ್ಜಿಲಿಂಗ್‌ನ 11 ಸಮುದಾಯಗಳನ್ನು ಮಮತಾ ಅವರು ಪರಿಶಿಷ್ಠ ಪಂಗಡಕ್ಕೆ ಸೇರಿಸಿದ್ದಾರೆ. ಆದರೆ, ಬಿಜೆಪಿ ಮಾತ್ರ ಇನ್ನೂ ಅದನ್ನು ಮಾಡುವ ಆಶ್ವಾಸನೆಯಲ್ಲೇ ಇದೆ,’ ಎಂದು ಬಿಮಲ್‌ ವ್ಯಂಗ್ಯವಾಡಿದರು.

ಪ್ರತ್ಯೇಕ ಗೋರ್ಖಾಲ್ಯಾಂಡ್‌ಗಾಗಿ ಹೋರಾಟ ಮುಂದುವರಿಯುವುದಾಗಿಯೂ ಇದೇ ವೇಳೆ ಬಿಮಲ್‌ ತಿಳಿಸಿದರು. ತಮ್ಮ ಮೇಲಿರುವ ಪ್ರಕರಣಗಳನ್ನು ಹಿಂದಕ್ಕೆ ಪಡೆಯುವ ವಿಶ್ವಾಸ ಸಿಕ್ಕಿದೆಯೇ ಎಂಬ ಪ್ರಶ್ನೆಗೆ, ‘ಅಂಥ ಯಾವ ಆಶ್ವಾಸನೆಯೂ ಸಿಕ್ಕಿಲ್ಲ. ನಾನೊಬ್ಬ ರಾಜಕೀಯ ನಾಯಕ. ನನಗೆ ರಾಜಕೀಯ ಪರಿಹಾರ ಬೇಕು,’ ಎಂದು ಹೇಳಿದರು.

2017ರ ಪ್ರತ್ಯೇಕ ಗೋರ್ಖಾಲ್ಯಾಂಡ್‌ ಹೋರಾಟದ ನಂತರ ತಲೆಮರೆಸಿಕೊಂಡಿದ್ದ ಬಿಮಲ್‌ ವಿರುದ್ಧ ಕೊಲೆ ಸೇರಿದಂತೆ ಕಾನೂನು ಬಾಹಿರ ತಡೆ ಕಾಯ್ದೆ ಅಡಿಯಲ್ಲಿ 150 ಅಧಿಕ ಪ್ರಕರಣಗಳಿವೆ. ಮೂಲಗಳ ಪ್ರಕಾರ ಬಿಮಲ್‌ ಟಿಎಂಸಿಯೊಂದಿಗೆ ಒಂದು ತಿಂಗಳಿಂದಲೂ ಸಂಪರ್ಕದಲ್ಲಿದ್ದರು ಎಂದು ಗೊತ್ತಾಗಿದೆ.

ಎರಡು ದಿನಗಳ ಹಿಂದೆಯಷ್ಟೇ ಉತ್ತರ ಬಂಗಾಳಕ್ಕೆ ಪ್ರವಾಸ ಕೈಗೊಂಡಿದ್ದ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ, ಡಾರ್ಜಿಲಿಂಗ್‌ನ 11 ಸಮುದಾಯಗಳನ್ನು ಎಸ್‌ಟಿಗೆ ಸೇರಿಸುವ, ಡಾರ್ಜಿಲಿಂಗ್‌ ಅನ್ನು ಪ್ರತ್ಯೇಕ ಗೋರ್ಖಾ ಲ್ಯಾಂಡ್‌ ಆಗಿ ಘೋಷಿಸುವ ಭರವಸೆ ನೀಡಿದ್ದರು. ಈ ಮಧ್ಯೆ ಜಿಜೆಎಂ ಟಿಎಂಸಿ ಜೊತೆ ಸೇರಿದೆ.

ಬಿಮಲ್‌ ಮತ್ತು ಟಿಎಂಸಿಯನ್ನು ಬೆಸೆಯಲು ರಾಜಕೀಯ ಕಾರ್ಯತಂತ್ರಜ್ಞ ಪ್ರಶಾಂತ್‌ ಕಿಶೋರ್‌ ಅವರು ಪ್ರಮುಖ ಪಾತ್ರ ನಿರ್ವಹಿಸಿರುವುದಾಗಿ ಟಿಎಂಸಿ ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಕೇಂದ್ರದ ಕೃಷಿ ಮಸೂದೆಗಳನ್ನು ವಿರೋಧಿಸಿ, ಎನ್‌ಡಿಎ ಮೈತ್ರಿಕೂಟದ ಹಳೇ ಮಿತ್ರಪಕ್ಷ, ಪಂಜಾಬ್‌ನ ಶಿರೋಮಣಿ ಅಕಾಲಿದಳ ಇತ್ತೀಚೆಗೆ ಮೈತ್ರಿಕೂಟ ತೊರೆದಿತ್ತು. ಬಿಹಾರದಲ್ಲಿ ಲೋಕಜನಶಕ್ತಿ ಪಕ್ಷದ (ಎಲ್‌ಜೆಪಿ) ಪ್ರತ್ಯೇಕವಾಗಿ ವಿಧಾನಸಭೆ ಚುನಾವಣೆ ಎದುರಿಸುತ್ತಿದೆ. ಇದಕ್ಕೂ ಹಿಂದೆ ಮಹಾರಾಷ್ಟ್ರದ ಶಿವಸೇನೆಯೂ ಮೈತ್ರಿಕೂಟ ತೊರೆದಿತ್ತು. ಈಗ ಜಿಜೆಎಂ ಮೈತ್ರಿ ತೊರೆದಿದೆ.  ಜಿಜೆಎಂ ಸಂಸತ್‌ ಸದಸ್ಯರನ್ನು ಹೊಂದಿಲ್ಲ.

***

ಪ್ರತ್ಯೇಕ ಗೋರ್ಖಾಲ್ಯಾಂಡ್ ಬೇಡಿಕೆ ವಿಚಾರದಲ್ಲಿ ಟಿಎಂಸಿ ಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು. ತಮ್ಮ ಪಕ್ಷಕ್ಕೆ ಬಂಬಲ ನೀಡಿರುವ ಬಿಮಲ್‌ ಅವರ ಮೇಲಿನ ಪ್ರಕರಣಗಳನ್ನು ಟಿಎಂಸಿ ಹಿಂಪಡೆಯುವುದೇ ಎಂಬುದನ್ನೂ ತಿಳಿಸಬೇಕು

– ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್

***

ಉತ್ತರ ಬಂಗಾಳದಲ್ಲಿ ಕಳೆದುಹೋಗಿರುವ ನೆಲೆಯನ್ನು ಭದ್ರಪಡಿಸುವ ಭಾಗವಾಗಿ ಮಮತಾ ಬ್ಯಾನರ್ಜಿ ಅವರು ಗುರುಂಗ್ ಅವರ ನೇತೃತ್ವದಲ್ಲಿ ಪ್ರತ್ಯೇಕತಾವಾದಿ ಪಡೆಗಳೊಂದಿಗೆ ಅಪವಿತ್ರ ಮೈತ್ರಿ ಮಾಡಿಕೊಂಡಿದ್ದಾರೆ. ಗೋರ್ಖಾಲ್ಯಾಂಡ್, ಟಿಎಂಸಿ ಮತ್ತು ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ವಿಭಜಕ ರಾಜಕೀಯದಲ್ಲಿ ತೊಡಗಿವೆ

– ಅಧೀರ್‌ ರಂಜನ್‌ ಚೌದರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು