ಮಂಗಳವಾರ, ಅಕ್ಟೋಬರ್ 27, 2020
19 °C
ರೈತರನ್ನು ಭಯೋತ್ಪಾದಕರು ಎಂದ ನಟಿ ವಿರುದ್ಧ ಶಿವಸೇನಾ ಕಿಡಿ

ಕಂಗನಾ ರನೌತ್ ವಿಚಾರದಲ್ಲಿ ಬಿಜೆಪಿ ಹಾವಿನಂತೆ ಪಕ್ಕಕ್ಕೆ ಸರಿದಿದೆ: ಶಿವಸೇನಾ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

Kangana Ranaut

ಮುಂಬೈ: ಕೇಂದ್ರದ ಕೃಷಿ ಮಸೂದೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಭಯೋತ್ಪಾದಕರಿಗೆ ಹೋಲಿಸಿ ಟ್ವೀಟ್ ಮಾಡಿದ್ದ ಬಾಲಿವುಡ್ ನಟಿ ಕಂಗನಾ ರನೌತ್ ವಿಚಾರವಾಗಿ ಮೌನವಾಗಿರುವ ಭಾರತೀಯ ಜನತಾ ಪಕ್ಷವನ್ನು (ಬಿಜೆಪಿ) ಶಿವಸೇನೆ ಮಂಗಳವಾರ ಟೀಕಿಸಿದೆ. 

ಪಕ್ಷದ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಈ ಕುರಿತು ಬರೆದಿರುವ ಸೇನೆಯು, ನಟಿಯ ಹೇಳಿಕೆಗೆ ಹಾವಿನಂತೆ ಸರಿದುಹೋದ ರಾಜಯಕೀಯ ಪಕ್ಷವು ಈಗ ರೈತರಿಗೆ ಅವಮಾನ ಮಾಡಿರುವ ವಿಚಾರವಾಗಿಯೂ ಮೌನ ತಳೆದಿದೆ ಎಂದು ಪರೋಕ್ಷವಾಗಿ ಬಿಜೆಪಿಯನ್ನು ಜರಿದಿದೆ. 

ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಎರಡು ಪ್ರಮುಖ ಮಸೂದೆಗಳು ರಾಜ್ಯಸಭೆಯಲ್ಲಿ ಅಂಗೀಕಾರಗೊಂಡ ನಂತರ, ಪ್ರಧಾನಿ ನರೇಂದ್ರ ಮೋದಿಯವರು ಸರಣಿ ಟ್ವೀಟ್ ಮಾಡಿ, ಕನಿಷ್ಟ ಬೆಂಬಲ ಬೆಲೆ ಮತ್ತು ಸರ್ಕಾರವು ರೈತರ ಉತ್ಪನ್ನಗಳನ್ನು ಖರೀದಿಸುವುದನ್ನು ಮುಂದುವರಿಸುವುದಾಗಿ ರೈತರಿಗೆ ಭರವಸೆ ನೀಡಿದರು.

ಈ ಪೈಕಿ ಒಂದು ಟ್ವೀಟನ್ನು ರೀಟ್ವೀಟ್ ಮಾಡಿದ್ದ ಕಂಗನಾ, ಇವರು ಅದೇ ಭಯೋತ್ಪಾದಕರು. ಸಿಎಎಯಿಂದ ಯಾರು ಪೌರತ್ವ ಕಳೆದುಕೊಳ್ಳದಿದ್ದರೂ ರಕ್ತದ ಕೋಡಿ ಹರಿಸಿದವರೇ ಇಂದು ಈ ಕೃಷಿ ಮಸೂದೆಯ ವಿರುದ್ಧವೂ ಪ್ರತಿಭಟನೆ ನಡೆಸುತ್ತಿದ್ದಾರೆ' ಎಂದು ರೈತರನ್ನು ಭಯೋತ್ಪಾದಕರಿಗೆ ಹೋಲಿಸಿದ್ದರು. ಬಳಿಕ ತಾನು ರೈತರನ್ನು 'ಭಯೋತ್ಪಾದಕರು' ಎಂದು ಕರೆದಿಲ್ಲ ಮತ್ತು ಅದನ್ನು ಸಾಬೀತುಪಡಿಸಲು ಯಾರಿಗಾದರೂ ಧೈರ್ಯವಿದೆಯೇ ಎಂದು ಸ್ಪಷ್ಟಪಡಿಸಿದರು.

ಸೋಮವಾರ ಟ್ವೀಟ್ ಮಾಡಿದ್ದ ನಟಿ, 'ಭಗವಾನ್ ಕೃಷ್ಣ ನಾರಾಯಣಿ ಸೈನ್ಯವನ್ನು ಹೊಂದಿರುವಂತೆ, ಪಪ್ಪು ತನ್ನ ಚಂಪು ಸೈನ್ಯವನ್ನು ಹೊಂದಿದ್ದಾನೆ. ಅದಕ್ಕೆ ಕೇವಲ ವದಂತಿಗಳ ಆಧಾರದ ಮೇಲೆ ಹೋರಾಡಲು ಮಾತ್ರ ತಿಳಿದಿದೆ. ಇದು ನನ್ನ ಮೂಲ ಟ್ವೀಟ್, ನಾನು ರೈತರನ್ನು ಭಯೋತ್ಪಾದಕರು ಎಂದು ಕರೆದಿದ್ದೇನೆ ಎಂದು ಯಾರಾದರೂ ಸಾಬೀತುಪಡಿಸಿದರೆ ನಾನು ಕ್ಷಮೆಯಾಚಿಸುತ್ತೇನೆ ಮತ್ತು ಟ್ವಿಟ್ಟರ್ ಅನ್ನು ಶಾಶ್ವತವಾಗಿ ತೊರೆಯುತ್ತೇನೆ ಎಂದಿದ್ದರು. 

ರನೌತ್‌ ಅವರ ಹೆಸರನ್ನೇಳದೆ, ತಮ್ಮ ಹಕ್ಕುಗಳಿಗಾಗಿ ಹೋರಾಡುವ ರೈತರು ‘ಭಯೋತ್ಪಾದಕರು’, ಒಂದು ವೇಳೆ ಬೇರೆ ಯಾರಾದರೂ ಇದನ್ನು ಹೇಳಿದ್ದರೆ ಅದು ವಂಚನೆಯಾಗುತ್ತಿತ್ತು. ಆದರೆ ನಟಿ ಈ ರೀತಿ ಮಾತನಾಡುವಾಗ ಹಾವಿನಂತೆ ಪಕ್ಕಕ್ಕೆ ಹರಿಯುವ ರಾಜಕೀಯ ಪಕ್ಷಗಳು ಈಗ ರೈತರ ಅವಮಾನದ ಬಗ್ಗೆ ಮೌನವಾಗಿವೆ. ರೈತರನ್ನು 'ವಂಚಕರು' ಮತ್ತು 'ಭಯೋತ್ಪಾದಕರು' ಎಂದು ಕರೆಯಲಾಗುತ್ತಿದೆ, ಆದರೆ ಆತ್ಮಹತ್ಯೆ ಮಾಡಿಕೊಳ್ಳಲು ಅವರಿಗೆ ಯಾವ ಮಾರ್ಗವಿದೆ ಎಂದು ಸಂಪಾದಕೀಯದಲ್ಲಿ ಹೇಳಲಾಗಿದೆ.

'ರೈತರು ಭಯೋತ್ಪಾದಕರು, ಮುಂಬೈ ಪಾಕಿಸ್ತಾನ ಮತ್ತು ಮಹಾನಗರ ಪಾಲಿಕೆಯು (ಬಿಎಂಸಿ)ಯು ಬಾಬರ್‌ನ ಸೈನ್ಯ ಎಂದು ದೂರಲಾಯಿತು. ಆಡಳಿತಾರೂಢ ಬಿಜೆಪಿ ರೈತರ ಅವಮಾನದ ಬಗ್ಗೆ ತಳೆದಿರುವ ಧೋರಣೆ ಬಗ್ಗೆ ಅವರ ಮುಖವಾಡವನ್ನಾದರೂ ತೆಗೆದುಹಾಕಬೇಕು. ಇದು ನಮ್ಮ ಏಕೈಕ ನಿರೀಕ್ಷೆಯಾಗಿತ್ತು' ಎಂದಿದೆ.

ಮೋದಿ ಸರ್ಕಾರ ತಂದ ಮಸೂದೆಗಳು 'ಕ್ರಾಂತಿಕಾರಿ ಮತ್ತು ಐತಿಹಾಸಿಕ' ವಾಗಿರುವುದೇ ಆಗಿದ್ದರೆ ಏಕೆ ಅವುಗಳನ್ನು ಒತ್ತಾಯದಿಂದ ಅಂಗೀಕರಿಸಲಾಯಿತು. 'ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶಗಳಲ್ಲಿ ಕೃಷಿ ಮಸೂದೆಗಳನ್ನು ವಿರೋಧಿಸಿ ರೈತರು ಬೀದಿಗಿಳಿದಿದ್ದಾರೆ. ಅವರು ಅನೇಕ ಸ್ಥಳಗಳಲ್ಲಿ ರಸ್ತೆಗಳನ್ನು ನಿರ್ಬಂಧಿಸಿದ್ದಾರೆ. ಇದೆಲ್ಲವೂ ಮಿತವಾಗಿ ಮತ್ತು ಶಾಂತಿಯಿಂದ ನಡೆಯುತ್ತಿರುವಾಗ, ಅವರನ್ನು ಭಯೋತ್ಪಾದಕರು ಎಂದು ಕರೆಯಲು ಯಾವ ಲಕ್ಷಣಗಳಿವೆ?' ಎಂದು ಸಂಪಾದಕೀಯದಲ್ಲಿ ಬರೆಯಲಾಗಿದೆ.

ರೈತರ ಮೇಲೆ ಲಾಠಿ ಚಾರ್ಜ್ ಮಾಡಲಾಗಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇದು ವಿಪರೀತವಾಗಿದೆ. ಬಾಬರ್‌ನ ಸೈನ್ಯ ಕೂಡ ಈ ರೀತಿಯ ದಬ್ಬಾಳಿಕೆಯನ್ನು ಮಾಡಿರಲಿಲ್ಲ. ಆದರೆ ಈ ದೇಶವನ್ನು ‘ಸುಜಲಾಂ, ಸುಫಲಾಂ’ ಮಾಡಿದ ಜನರನ್ನು ಬಿಜೆಪಿ ಪರ ನಟಿ ಭಯೋತ್ಪಾದಕರು ಎಂದು ಕರೆದಿದ್ದಾರೆ. ಪ್ರತಿಭಟನೆ ನಡೆಸಿದ ರೈತರು ಭಯೋತ್ಪಾದಕರಾಗಿದ್ದರೆ, ಸರ್ಕಾರವು ಅಂಗೀಕರಿಸಿದ ಕೃಷಿ ಮಸೂದೆಯು ಎಲ್ಲ ಭಯೋತ್ಪಾದಕರಿಗಾಗಿಯೇ? ಎಂದು ಕೇಳಿದೆ.

ಮಸೂದೆ ಸಂಬಂಧಿಸಿದಂತೆ ಸಂಸತ್ತಿನ ಉಭಯ ಸದನಗಳಲ್ಲಿ ಭಿನ್ನ ನಿಲುವುಗಳನ್ನು ತಾಳಿದ ಶಿವಸೇನಾ, ಲೋಕಸಭೆಯಲ್ಲಿ ಮಸೂದೆಯನ್ನು ಮಂಡಿಸಿದಾಗ ಸೇನಾ ಸಂಸದರು ಅದನ್ನು ಸ್ವಾಗತಿಸಿದರು. ರಾಜ್ಯಸಭೆಯಲ್ಲಿ ಮಂಡನೆಯಾದಾಗ, ಸಂಜಯ್ ರಾವುತ್, ಮಸೂದೆ ವಿಚಾರವಾಗಿ ಪಕ್ಷವು ತಟಸ್ಥ ನೀತಿಯನ್ನು ಅನುಸರಿಸುವುದಾಗಿ ಹೇಳಿದರು.

ಆದರೆ ಸಂಪಾದಕೀಯದಲ್ಲಿ ಮಸೂದೆಯನ್ನು ಪ್ರಶ್ನಿಸಿದೆ. ಪ್ರಧಾನಿ ಮೋದಿಯವರು ರೈತರ ಶತ್ರು ಎಂದು ನಾವು ಎಂದಿಗೂ ಹೇಳುವುದಿಲ್ಲ. ಆದರೆ ಹೊಸ ಮಸೂದೆಗೆ ಎರಡು ಮುಖಗಳಿವೆ. ಸರ್ಕಾರವು ಎಪಿಎಂಸಿಯಲ್ಲಿ ದಲ್ಲಾಳಿಗಳನ್ನು ಕೊನೆಗೊಳಿಸುತ್ತದೆ ಮತ್ತು ರೈತರು ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆಗಳ ಹೊರಗಡೆ ಮಾರಾಟ ಮಾಡಲು ಅನುವು ಮಾಡಿಕೊಟ್ಟಿದೆ ಆದರೆ ಅವುಗಳನ್ನು ಯಾರು ಖರೀದಿಸುತ್ತಾರೆ? ಇದೇ ವಿವಾದ. ದೊಡ್ಡ ಕೈಗಾರಿಕೋದ್ಯಮಿಗಳು ಈಗಾಗಲೇ ಕಿರಾಣಿ ವ್ಯವಹಾರದಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಕಾರ್ಪೊರೇಟ್ ಕಂಪನಿಗಳ ಹೊಸ ಗುಲಾಮಗಿರಿಯಲ್ಲಿ ರೈತರು ಈಗ ಸಿಕ್ಕಿಹಾಕಿಕೊಳ್ಳುವ ಸಾಧ್ಯತೆಯಿದೆ ಎಂಬುದು ಇದರರ್ಥವಾಗಿದೆ ಎಂದಿದೆ.

ಕೃಷಿಯನ್ನು ಕೂಡ ಒಪ್ಪಂದದ ರೀತಿಯಲ್ಲಿ ಮಾಡಲು ಅನುಮೋದನೆ ನೀಡಲಾಗಿದೆ ಆದರೆ ಈ ಯೋಜನೆ ಯುಎಸ್ ಮತ್ತು ಯುರೋಪಿನಲ್ಲಿ ವಿಫಲವಾಗಿದೆ. ಕನಿಷ್ಠ ಬೆಂಬಲ ಬೆಲೆ ಸಿಗುವುದಿಲ್ಲ ಎಂದು ರೈತರು ಭಯಪಡುತ್ತಿದ್ದಾರೆ. ಆದರೆ ಈ ರೀತಿ ಆಗುವುದಿಲ್ಲ. ಇದೆಲ್ಲ ಕೇವಲ ವದಂತಿ ಎಂದು ಸರ್ಕಾರ ಹೇಳುತ್ತಿದೆ. ಒಂದು ವೇಳೆ ಎಂಎಸ್‌ಪಿ ತೊಂದರೆಯಾಗುವುದಿಲ್ಲ ಎನ್ನುವುದಾದರೆ ಮಸೂದೆ ವಿರೋಧಿಸಿ ಕೇಂದ್ರ ಸಚಿವೆ ಏಕೆ ರಾಜೀನಾಮೆ ನೀಡಿದರು ಮತ್ತು ರೈತರು ಏಕೆ ಮಸೂದೆಯನ್ನು ವಿರೋಧಿಸಿ ಬೀದಿಗಿಳಿದಿದ್ದಾರೆ ಎಂದು ಶಿವಸೇನಾ ಪ್ರಶ್ನಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು