ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋವಾ: ಆಮ್ಲಜನಕ ಕೊರತೆ, 26 ಕೋವಿಡ್‌ ರೋಗಿಗಳ ಸಾವು

ಹೈಕೋರ್ಟ್‌ ಮೇಲ್ವಿಚಾರಣೆಯಲ್ಲಿ ತನಿಖೆ ಅಗತ್ಯ: ಸಚಿವ ರಾಣೆ
Last Updated 11 ಮೇ 2021, 15:32 IST
ಅಕ್ಷರ ಗಾತ್ರ

ಪಣಜಿ: ಇಲ್ಲಿನ ಗೋವಾ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ (ಜಿಎಂಸಿಎಚ್‌) ಆಮ್ಲಜನಕದ ಕೊರತೆಯಿಂದಾಗಿ ಮಂಗಳವಾರ ನಸುಕಿನಲ್ಲಿ ನಾಲ್ಕು ಗಂಟೆಗಳ ಅವಧಿಯಲ್ಲಿ 26 ಕೋವಿಡ್‌–19 ರೋಗಿಗಳು ಮೃತಪಟ್ಟಿದ್ದಾರೆ.

‘ನಸುಕಿನ 2 ರಿಂದ 6 ಗಂಟೆ ಅವಧಿಯಲ್ಲಿ ೀ ಘಟನೆ ಸಂಭವಿಸಿದೆ. ಆಸ್ಪತ್ರೆಗೆ ಅಗತ್ಯ ಪ್ರಮಾಣದಷ್ಟು ಆಮ್ಲಜನಕ ಪೂರೈಕೆಯಾಗಿಲ್ಲ. ಆದರೆ, ಆಸ್ಪತ್ರೆಯಲ್ಲಿದ್ದ ಆಮ್ಲಜನಕದ ನಿರ್ವಹಣೆಯಲ್ಲಿ ಯಾವುದೇ ವೈಫಲ್ಯ ಕಂಡುಬಂದಿಲ್ಲ’ ಎಂದು ಆರೋಗ್ಯ ಸಚಿವ ವಿಶ್ವಜಿತ್‌ ರಾಣೆ ಹೇಳಿದರು.

‘ಈ ಘಟನೆ ಕುರಿತು ಕೂಡಲೇ ಬಾಂಬೆ ಹೈಕೋರ್ಟ್‌ನ ಪಣಜಿ ಪೀಠ ತನಿಖೆ ನಡೆಸಬೇಕು. ಜಿಎಂಸಿಎಚ್‌ನಲ್ಲಿ ಕೋವಿಡ್‌ ರೋಗಿಗಳಿಗೆ ನೀಡುವ ಚಿಕಿತ್ಸೆಯ ಉಸ್ತುವಾರಿಯನ್ನೂ ಪೀಠ ವಹಿಸಿಕೊಳ್ಳಬೇಕು’ ಎಂದು ಸಚಿವ ರಾಣೆ ಒತ್ತಾಯಿಸಿದರು.

‘ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆ ಇತ್ತೇ ಅಥವಾ ನಿರ್ವಹಣೆಯ ಕೊರತೆ ಇತ್ತೇ ಎಂಬುದನ್ನು ಪತ್ತೆ ಹಚ್ಚಬೇಕು ಎಂದು ಹೈಕೋರ್ಟ್‌ ಪೀಠಕ್ಕೆ ಮನವಿ ಮಾಡುತ್ತೇನೆ. ತಜ್ಞರ ನೆರವು ಪಡೆದು, ಈ ಸಂಬಂಧ ಶ್ವೇತಪತ್ರವನ್ನು ಹೊರತರಬೇಕು ಎಂದೂ ಕೋರುತ್ತೇನೆ’ ಎಂದರು.

ಜಿಎಂಸಿಎಚ್‌ಗೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್ ಅವರ ಹೇಳಿಕೆಗಳು, ಸಚಿವ ರಾಣೆ ಅವರ ಅಭಿಪ್ರಾಯಗಳಿಗೆ ತದ್ವಿರುದ್ಧವಾಗಿದ್ದವು.

‘ಆಸ್ಪತ್ರೆಯ ಕೋವಿಡ್‌ ವಾರ್ಡ್‌ನಲ್ಲಿ ಆಮ್ಲಜನಕದ ಕೊರತೆ ಇಲ್ಲ. ಸಿಲಿಂಡರ್‌ಗಳನ್ನು ಸಕಾಲಕ್ಕೆ ರೋಗಿಗಳ ಬಳಿ ಒಯ್ದು, ಆಮ್ಲಜನಕ ಪೂರೈಕೆಗೆ ಕ್ರಮ ತೆಗೆದುಕೊಳ್ಳಲಿಲ್ಲ. ಹೀಗಾಗಿ ರೋಗಿಗಳು ಸಾವನ್ನಪ್ಪಿದ್ದಾರೆ’ ಎಂದು ಹೇಳುವ ಮೂಲಕ, ಆಸ್ಪತ್ರೆಯಲ್ಲಿಆಮ್ಲಜನಕದ ನಿರ್ವಹಣೆಯಲ್ಲಿ ಕೊರತೆ ಇದೆ ಎಂದು ಅಭಿಪ್ರಾಯ ಹೊರಹಾಕಿದರು.

‘ಆಸ್ಪತ್ರೆಯಲ್ಲಿ ಆಮ್ಲಜನಕ ಸಿಲಿಂಡರ್‌ಗಳ ಸಾಕಷ್ಟು ದಾಸ್ತಾನಿದೆ. ಅವುಗಳನ್ನು ಸಕಾಲಕ್ಕೆ ಬಳಸಿದಿದ್ದರೆ, ಅವುಗಳ ದಾಸ್ತಾನು ಇದ್ದರೂ ವ್ಯರ್ಥ’ ಎಂದರು.

ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಬಗ್ಗೆ ಮೃತ ರೋಗಿಗಳ ಸಂಬಂಧಿಕರುಮುಖ್ಯಮಂತ್ರಿ ಸಾವಂತ್‌ ಅವರಿಗೆ ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಾವಂತ್‌, ‘ಒಂದು ದಿನದಲ್ಲಿ ಈ ಸಮಸ್ಯೆಯನ್ನು ಬಗೆಹರಿಸುವೆ’ ಎಂದು ಭರವಸೆ ನೀಡಿದರು.

ಸಮರ್ಪಕವಾಗಿ ಆಮ್ಲಜನಕ ಪೂರೈಕೆ ಖಾತರಿಪಡಿಸುವುದು ಸೇರಿದಂತೆ ಕೊವಿಡ್‌ ರೋಗಿಗಳ ಚಿಕಿತ್ಸೆ ಕುರಿತಂತೆ ಚರ್ಚಿಸಲು ಅವರು ಉನ್ನತ ಅಧಿಕಾರಿಗಳು ಹಾಗೂ ಜಿಎಂಸಿಎಚ್‌ ಅಧಿಕಾರಿಗಳೊಂದಿಗೆ ಚರ್ಚಿಸುವರು ಎಂದು ಮೂಲಗಳು ಹೇಳಿವೆ.

ಮುಸುಕಿನ ಗುದ್ದಾಟ: ರಾಜ್ಯದಲ್ಲಿನ ಕೋವಿಡ್–19 ಪರಿಸ್ಥಿತಿ ನಿರ್ವಹಣೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಹಾಗೂ ಆರೋಗ್ಯ ಸಚಿವ ವಿಶ್ವಜಿತ್‌ ರಾಣೆ ನಡುವೆ ಕಳೆದ ಕೆಲವು ವಾರಗಳಿಂದ ಮುಸುಕಿನ ಗುದ್ದಾಟ ನಡೆದಿದೆ. ಈಗ ಜಿಎಂಸಿಎಚ್‌ನಲ್ಲಿನ ದುರಂತದಿಂದ ಇದು ಬಹಿರಂಗಗೊಂಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಆಸ್ಪತ್ರೆಗಳಿಗೆ ಆಮ್ಲಜನಕ ಪೂರೈಸುವ ಮೇಲ್ವಿಚಾರಣೆಯ ಜವಾಬ್ದಾರಿಯನ್ನು ಇತ್ತೀಚೆಗೆ ಸಚಿವ ರಾಣೆ ಅವರಿಂದ ಕಿತ್ತುಕೊಂಡಿದ್ದ ಮುಖ್ಯಮಂತ್ರಿ ಸಾವಂತ್‌, ಅದನ್ನು ತಾವೇ ನಿರ್ವಹಣೆ ಮಾಡುತ್ತಿದ್ದಾರೆ. ಇದು ರಾಣೆ ಅವರ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ.

ಈ ವಿಷಯವಾಗಿ ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಸಚಿವರು ತಮ್ಮಲ್ಲಿನ ಭಿನ್ನಾಭಿಪ್ರಾಯಗಳನ್ನು ಬದಿಗಿರಿಸಿ, ಕೋವಿಡ್‌–19 ವಿರುದ್ಧದ ಹೋರಾಟಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದ್ದವು.

ಈ ಕುರಿತು ಟ್ವೀಟ್‌ ಮಾಡಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ದಿಗಂಬರ ಕಾಮತ್‌,‘ನಿರ್ವಹಣೆಯಲ್ಲಿ ವೈಫಲ್ಯವಿದೆ ಎಂಬುದು ಮನವರಿಕೆಯಾಗಲು ಇನ್ನೂ ಎಷ್ಟು ಸಾವು ಸಂಭವಿಸಬೇಕು’ ಎಂದು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT