ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮೂಹಿಕ ಅತ್ಯಾಚಾರ ಪ್ರಕರಣ: ಗೋವಾ ಸಿಎಂ ಸಾವಂತ್ ಹೇಳಿಕೆಗೆ ವಿರೋಧ ಪಕ್ಷಗಳ ಆಕ್ಷೇಪ

Last Updated 29 ಜುಲೈ 2021, 7:38 IST
ಅಕ್ಷರ ಗಾತ್ರ

ಪಣಜಿ: ಕಡಲತೀರವೊಂದರಲ್ಲಿ ಇಬ್ಬರು ಅಪ್ರಾಪ್ತೆಯರ ಮೇಲೆ ನಡೆದಿರುವ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸದನದಲ್ಲಿ ನೀಡಿದ ಹೇಳಿಕೆಗೆ ವಿರೋಧ ಪಕ್ಷಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

‘ಮಕ್ಕಳು ತಡರಾತ್ರಿವರೆಗೆ ಬೀಚ್‌ನಲ್ಲಿ ಏಕೆ ಇರುತ್ತಾರೆ ಎಂಬ ಬಗ್ಗೆ ಪೋಷಕರು ಆತ್ಮಾವಲೋಕನ ಮಾಡಿಕೊಳ್ಳಬೇಕು.ಮಕ್ಕಳು ಪೋಷಕರ ಮಾತು ಕೇಳುವುದಿಲ್ಲ ಎಂಬ ಕಾರಣಕ್ಕೆ, ಆ ಜವಾಬ್ದಾರಿಯನ್ನು ಸರ್ಕಾರ ಮತ್ತು ಪೊಲೀಸರ ಮೇಲೆ ಹೊರಿಸಲು ಸಾಧ್ಯವಿಲ್ಲ‘ ಎಂದುಸಾವಂತ್ ಅವರು ಬುಧವಾರ ಸದನದಲ್ಲಿ ಹೇಳಿದ್ದರು.

‘ಮಕ್ಕಳ ಸುರಕ್ಷತೆ ಬಗ್ಗೆ ಪೋಷಕರೇ ಜವಾಬ್ದಾರಿ ತೆಗೆದುಕೊಳ್ಳಬೇಕು. ವಿಶೇಷವಾಗಿ ಅಪ್ರಾಪ್ತರನ್ನು ರಾತ್ರಿ ವೇಳೆ ಹೊರಗೆ ಕಳುಹಿಸಬಾರದು‘ ಎಂದು ಗೃಹ ಖಾತೆಯನ್ನೂ ಹೊಂದಿರುವ ಸಾವಂತ್ ಅವರು ಸಲಹೆ ನೀಡಿದ್ದರು.

ಈ ಹೇಳಿಕೆಗೆ ಗುರುವಾರ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಗೋವಾದ ಕಾಂಗ್ರೆಸ್ ವಕ್ತಾರ ಅಲ್ಟೊನೆ ಡಿ ಕೋಸ್ಟಾ, ‘ಗೋವಾ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಸೂಕ್ತ ಭದ್ರತೆ ಒದಗಿಸಿದರೆ, ನಾವು ರಾತ್ರಿ ತಿರುಗಾಡುವಾಗ ಏಕೆ ಭಯಪಡಬೇಕು. ಅಪರಾಧಿಗಳು ಜೈಲಿನಲ್ಲಿದ್ದರೆ, ಕಾನೂನು ಪಾಲಿಸುವ ನಾಗರಿಕರು ಮುಕ್ತವಾಗಿ ತಿರುಗಾಡುತ್ತಾರೆ‘ ಎಂದು ಹೇಳಿದ್ದಾರೆ.

ಗೋವಾ ಫಾರ್ವರ್ಡ್ ಪಕ್ಷದ ಶಾಸಕ ವಿಜಯ್‌ ಸರ್ದೇಸಾಯಿ, ‘ಮುಖ್ಯಮಂತ್ರಿಗಳ ಹೇಳಿಕೆ ತೀರಾ ಹಾಸ್ಯಾಸ್ಪದವಾಗಿದೆ. ನಾಗರಿಕರ ಸುರಕ್ಷತೆಯ ಜವಾಬ್ದಾರಿ ಪೊಲೀಸರು ಮತ್ತು ಸರ್ಕಾರದ ಮೇಲಿದೆ. ಇವರಿಬ್ಬರೂ ನಮಗೆ ರಕ್ಷಣೆ ನೀಡದಿದ್ದರೆ, ಮುಖ್ಯಮಂತ್ರಿಯವರಿಗೆ ಆ ಸ್ಥಾನದಲ್ಲಿ ಮುಂದುವರಿಯಲು ಯಾವುದೇ ಹಕ್ಕು ಇಲ್ಲ‘ ಎಂದು ಹೇಳಿದರು.

‘ರಾತ್ರಿ ವೇಳೆಯ ಓಡಾಟ ಸುರಕ್ಷಿತವಲ್ಲ ಎಂದು ಹೇಳುತ್ತಾ, ಪೋಷಕರನ್ನು ದೂರುತ್ತಿರುವ ಮುಖ್ಯಮಂತ್ರಿಗಳ ಹೇಳಿಕೆ ಅಘಾತ ಉಂಟು ಮಾಡಿದೆ. ರಾಜ್ಯ ಸರ್ಕಾರವು ನಮಗೆ ಸುರಕ್ಷತೆಯ ಭರವಸೆ ನೀಡದಿದ್ದರೆ, ಇನ್ನ್ಯಾರು ನೀಡಲು ಸಾಧ್ಯ?‘ ಎಂದು ಪಕ್ಷೇತರ ಶಾಸಕ ರೋಹನ್ ಖೌಂಟೆ ಟ್ವೀಟ್‌ನಲ್ಲಿ ಪ್ರಶ್ನಿಸಿದ್ದಾರೆ.

ಪಣಜಿಯಿಂದ ದಕ್ಷಿಣಕ್ಕೆ 30 ಕಿ.ಮೀ ದೂರದಲ್ಲಿರುವ ಬೆನೌಲಿಮ್ ಕಡಲತೀರದಲ್ಲಿ ಇಬ್ಬರು ಬಾಲಕಿಯರ ಮೇಲೆ ನಾಲ್ವರು ಅತ್ಯಾಚಾರ ಎಸಗಿದ್ದರು. ಆರೋಪಿಗಳಲ್ಲಿ ಒಬ್ಬ ಕೃಷಿ ಇಲಾಖೆಯ ಕಾರು ಚಾಲಕ. ಪೊಲೀಸರೆಂದು ಸುಳ್ಳು ಹೇಳಿಕೊಂಡು ಬಂದ ಆರೋಪಿಗಳು, ಅವರ ಜತೆಗಿದ್ದ ಹುಡುಗರನ್ನು ಥಳಿಸಿ, ಅಪ್ರಾಪ್ತೆಯರ ಮೇಲೆ ಅತ್ಯಾಚಾರ ಎಸಗಿದ್ದರು.

ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಬಂಧಿಸಿರುವುದಾಗಿ ಪ್ರಮೋದ್ ಸಾವಂತ್‌ ಬುಧವಾರ ಸದನಕ್ಕೆ ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT