ಬುಧವಾರ, ಮೇ 25, 2022
24 °C
ಗೋವಾ: ಅರವಿಂದ ಕೇಜ್ರಿವಾಲ್ ಅವರಿಂದ ಅಚ್ಚರಿಯ ಆಯ್ಕೆ

Goa Election 2022: ಅಮಿತ್ ಪಾಲೇಕರ್ ಎಎಪಿ ಮುಖ್ಯಮಂತ್ರಿ ಅಭ್ಯರ್ಥಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪಣಜಿ: ಗೋವಾ ವಿಧಾನಸಭಾ ಚುನಾವಣೆಗೆ ಸಜ್ಜಾಗಿರುವ ಆಮ್ ಆದ್ಮಿ ಪಕ್ಷವು (ಎಎಪಿ) ಮುಖ್ಯಮಂತ್ರಿ ಅಭ್ಯರ್ಥಿಯಾಗಿ  ವಕೀಲ ಹಾಗೂ ರಾಜಕಾರಣಿ ಅಮಿತ್ ಪಾಲೇಕರ್ ಅವರ ಹೆಸರನ್ನು ಬುಧವಾರ ಘೋಷಿಸಿದೆ. 46 ವರ್ಷದ ಪಾಲೇಕರ್ ಅವರು ಕಳೆದ ಅಕ್ಟೋಬರ್‌ನಲ್ಲಿ ಎಎಪಿ ಸೇರ್ಪಡೆಯಾಗಿದ್ದರು. ಇವರನ್ನು ಸೇಂಟ್ ಕ್ರೂಸ್‌ ವಿಧಾನಸಭಾ ಕ್ಷೇತ್ರದಿಂದ ಪಕ್ಷ ಕಣಕ್ಕಿಳಿಸಲಿದೆ.  

ಅಮಿತ್ ಪಾಲೇಕರ್ ಅವರ ಹೆಸರು ಪ್ರಕಟಿಸಿದ ಎಎಪಿ ಸಂಚಾಲಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು, ಗೋವಾ ಜನರು ಬದಲಾವಣೆ ಬಯಸಿದ್ದಾರೆ ಎಂದಿದ್ದಾರೆ. ‘ಎಎಪಿಗೆ ರಾಜ್ಯದಲ್ಲಿ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ದೆಹಲಿ ಮಾದರಿಯ ಆಡಳಿತದಿಂದ ಗೋವಾದ ಜನರು ಸಾಕಷ್ಟು ಪ್ರಭಾವಿತರಾಗಿದ್ದಾರೆ’ ಎಂದರು.

ಈ ಬಾರಿ ಚುನಾವಣೆಯಲ್ಲಿ ರಾಜ್ಯದ ಹೊಸ ಮುಖಗಳಿಗೆ ಪಕ್ಷ ಆದ್ಯತೆ ನೀಡಿದೆ. ಪಾಲೇಕರ್ ಅವರು ಗೋವಾಕ್ಕಾಗಿ ತಮ್ಮ ಜೀವನವನ್ನೇ ಮುಡುಪಿಡಲು ಸಿದ್ಧವಾಗಿದ್ದಾರೆ ಎಂದು ಕೇಜ್ರಿವಾಲ್ ಹೇಳಿದ್ದಾರೆ. ಅಮಿತ್ ಪಾಲೇಕರ್ ಅವರು ಗೋವಾದ ಭಂಡಾರಿ ಸಮುದಾಯಕ್ಕೆ ಸೇರಿದ್ದಾರೆ. ಎಎಪಿ ಜಾತಿ ರಾಜಕಾರಣದಲ್ಲಿ ತೊಡಗಿದೆ ಎಂಬ ಆರೋಪವನ್ನು ಕೇಜ್ರಿವಾಲ್ ತಳ್ಳಿಹಾಕಿದ್ದಾರೆ. ಈವರೆಗೆ ರಾಜ್ಯದಲ್ಲಿ ಮಾಡಲಾದ ಜಾತಿ ರಾಜಕಾರಣವನ್ನು ತಮ್ಮ ಪಕ್ಷ ಬದಲಿಸುತ್ತಿದೆ ಎಂದು ಅವರು ಹೇಳಿದ್ದಾರೆ.

ಅಮಿತ್ ಪಾಲೇಕರ್ ಯಾರು?

ಅಮಿತ್ ಪಾಲೇಕರ್ ಅವರು ರಾಜಕೀಯಕ್ಕೆ ಹೊಸಬರಾಗಿದ್ದು, ಆಮ್ ಆದ್ಮಿ ಪಕ್ಷವು ಇವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸುವ ಮೂಲಕ ಅಚ್ಚರಿ ಮೂಡಿಸಿದೆ. ಪಾಲೇಕರ್ ಅವರು ಗೋವಾದ ಒಬಿಸಿ ವರ್ಗದ ಭಂಡಾರಿ ಸಮುದಾಯಕ್ಕೆ ಸೇರಿದವು. ಗೋವಾದಲ್ಲಿ ಈ ಸಮುದಾಯಕ್ಕೆ ಸೇರಿದ ಶೇ 35ರಷ್ಟು ಜನರಿದ್ದಾರೆ. 

ಹಳೆ ಗೋವಾದ ಯುನೆಸ್ಕೊ ಪಾರಂಪರಿಕ ಸ್ಥಳಗಳಲ್ಲಿ ಅಕ್ರಮ ಕಟ್ಟಡ ನಿರ್ಮಾಣವನ್ನು ವಿರೋಧಿಸಿ ಪಾಲೇಕರ್ ಅವರು ಇತ್ತೀಚೆಗೆ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಸೇವ್ ಓಲ್ಡ್ ಗೋವಾ ಆ್ಯಕ್ಷನ್ ಕಮಿಟಿ (ಎಸ್‌ಒಜಿಎಸಿ) ನಡೆಸಿದ್ದ ಪ್ರತಿಭಟನೆಯಲ್ಲಿ ಅವರು ಭಾಗಿಯಾಗಿದ್ದರು. ಐದು ದಿನಗಳ ಉಪವಾಸ ಮುಗಿಯುವ ಹೊತ್ತಿಗೆ ಅವರು ಕೇಜ್ರಿವಾಲ್ ಅವರಿಂದ ಇವರು ಪ್ರಶಂಸೆಗೆ ಒಳಗಾಗಿದ್ದರು. 

ಕಳೆದ ಅಕ್ಟೋಬರ್‌ನಲ್ಲಿ ಎಎಪಿ ಸೇರಿದ್ದ ಅವರು ಸಾಮಾಜಿಕ ಕಾರ್ಯಕರ್ತರಾಗಿ ಹಾಗೂ ತಮ್ಮ ಸಮುದಾಯದ ಅಭಿವೃದ್ಧಿ ಕಾರ್ಯಗಳಲ್ಲಿ ಹೆಸರು ಮಾಡಿದ್ದರು. ಇದನ್ನು ಗಮನಿಸಿದ್ದ ಕೇಜ್ರಿವಾಲ್, ಅವರನ್ನು ಪಕ್ಷಕ್ಕೆ ಬರಮಾಡಿಕೊಂಡಿದ್ದರು. ಇದೀಗ ರಾಜ್ಯದಲ್ಲಿ ಪಕ್ಷದ ಸಾರಥ್ಯವನ್ನು ನೀಡಿದ್ದಾರೆ. ರಾಜ್ಯದ ‘ಪ್ರಾಮಾಣಿಕ ವ್ಯಕ್ತಿ’ಗೆ ಚುನಾವಣೆಯ ನೇತೃತ್ವ ವಹಿಸಲಾಗಿದೆ ಎಂದಿರುವ ಕೇಜ್ರಿವಾಲ್ ಅವರ ಮಾತುಗಳಲ್ಲಿ, ಭ್ರಷ್ಟಾಚಾರ ರಹಿತ ಹಾಗೂ ವಿವಾದ ರಹಿತ ರಾಜಕಾರಣಿಯನ್ನು ಪರಿಚಯಿಸುವ ಉದ್ದೇಶ ವ್ಯಕ್ತವಾಗಿದೆ. 

ರಾಜ್ಯದ ಜನರಿಗಾಗಿ ಮಿಡಿಯುವ, ರಾಜ್ಯಕ್ಕಾಗಿ ಜೀವನ ಮೀಸಲಿಡುವ ವ್ಯಕ್ತಿ ಎಂಬುದಾಗಿ ಕೇಜ್ರಿವಾಲ್ ಅವರಿಂದ ಪಾಲೇಕರ್ ಹೊಗಳಿಸಿದ್ದಾರೆ. ಜಾತಿ, ಧರ್ಮಗಳನ್ನು ಮೀರಿ, ಬಡವ–ಶ್ರೀಮಂತ ಎಂಬ ಭೇದ ಮಾಡದೇ, ಎಲ್ಲರನ್ನೂ ಒಗ್ಗಟ್ಟಾಗಿ ತೆಗೆದುಕೊಂಡು ಹೋಗುವುದೂ ಅವರ ವ್ಯಕ್ತಿತ್ವದ ಪ್ರಮುಖ ಅಂಶವಾಗಿದೆ. ಉತ್ತರ ಗೋವಾ ಹಾಗೂ ದಕ್ಷಿಣ ಗೋವಾಗಳೆರಡನ್ನೂ ಒಂದೇ ರೀತಿಯಲ್ಲಿ ನೋಡುವ ಪಾಲೇಕರ್ ಅವರ ವ್ಯಕ್ತಿತ್ವವನ್ನು ಪಕ್ಷ ಪರಿಗಣಿಸಿದೆ ಎನ್ನಲಾಗಿದೆ. ಇದೇ ಸಮುದಾಯಕ್ಕೆ ಸೇರಿದ ರವಿ ನಾಯಕ್ ಎಂಬುವರು ಈ ಮೊದಲು ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದರು.

***

ಗೋವಾವನ್ನು ಭ್ರಷ್ಟಾಚಾರ ಮುಕ್ತ ಮಾಡುತ್ತೇನೆ. ಕಳೆದುಹೋದ ರಾಜ್ಯದ ವೈಭವವನ್ನು ಮರಳಿ ಪಡೆಯಲು ಪಕ್ಷವು ಸಹಾಯ ಮಾಡುತ್ತದೆ. ನಾನು ಹೇಳಿದ ಪ್ರತಿ ಮಾತನ್ನೂ ಉಳಿಸಿಕೊಳ್ಳುತ್ತೇನೆ. ಇದು ಖಚಿತ

–ಅಮಿತ್ ಪಾಲೇಕರ್, ಎಎಪಿ ಮುಖ್ಯಮಂತ್ರಿ ಅಭ್ಯರ್ಥಿ

***

ಗೋವಾದ ಪ್ರಮುಖ ಭಂಡಾರಿ ಸಮುದಾಯವು ಕಳೆದ 60 ವರ್ಷಗಳಲ್ಲಿ ತೀವ್ರ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಈವರೆಗೆ ಸಮುದಾಯದ ಒಬ್ಬ ಮುಖ್ಯಮಂತ್ರಿ ಮಾತ್ರ ಆಗಿದ್ದಾರೆ

–ಅರವಿಂದ ಕೇಜ್ರಿವಾಲ್, ದೆಹಲಿ ಮುಖ್ಯಮಂತ್ರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು