ಶನಿವಾರ, ಅಕ್ಟೋಬರ್ 23, 2021
25 °C

ಗೌಪ್ಯ ವರದಿ ಸೋರಿಕೆ; ಸ್ಪರ್ಧಾ ಆಯೋಗದ ವಿರುದ್ಧ ರಿಟ್‌ ಅರ್ಜಿ ಸಲ್ಲಿಸಿದ ಗೂಗಲ್‌

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ತನಗೆ ಸಂಬಂಧಿಸಿದ ಗೌಪ್ಯ ವರದಿಗಳನ್ನು ಭಾರತೀಯ ಸ್ಪರ್ಧಾ ಆಯೋಗವು (ಸಿಸಿಐ) ಸೋರಿಕೆ ಮಾಡಿದೆ ಎಂದು ಆರೋಪಿಸಿ ಗೂಗಲ್‌ ಸಂಸ್ಥೆ ದೆಹಲಿ ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಿದೆ.

ಸಿಸಿಐ ವಿಶ್ವಾಸದ್ರೋಹದ ಕೆಲಸ ಮಾಡಿದೆ. ಇದರಿಂದ ಗೂಗಲ್‌ ಮತ್ತು ಅದರ ಪಾಲುದಾರ ಸಂಸ್ಥೆಗಳಿಗೆ ಕೆಡುಕಾಗುವಂತಿದೆ. ಸಿಸಿಐನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೆಹಲಿ ಹೈಕೋರ್ಟ್‌ಗೆ ಗೂಗಲ್‌ ಮನವಿ ಮಾಡಿದೆ. 

ಗೂಗಲ್‌ ಸ್ಪರ್ಧಾ ನಿಯಮಗಳನ್ನು ಮೀರುತ್ತಿದೆ ಎಂದು ಮೇಲ್ನೋಟಕ್ಕೆ ತಿಳಿಯುತ್ತಿದೆ ಎಂದು ಶಂಕಿಸಿ, 2019ರಲ್ಲಿ ಗೂಗಲ್‌ ವಿರುದ್ಧ ವಿವರವಾಗಿ ತನಿಖೆ ನಡೆಸುವಂತೆ ಸಿಸಿಐ ಆದೇಶಿಸಿತ್ತು. ಅದರಂತೆ, ಆ್ಯಂಡ್ರಾಯ್ಡ್‌ ಸಂಸ್ಥೆಗೆ ಸಂಬಂಧಿಸಿದ ವ್ಯವಹಾರದಲ್ಲಿ ಗೂಗಲ್‌ ಅವ್ಯವಹಾರ ನಡೆಸುತ್ತಿದೆ ಎಂಬ ಕುರಿತು ಕಳೆದ ವಾರ ಸಿಸಿಐ ಮಹಾ ನಿರ್ದೇಶಕರು (ಡಿಜಿ) ಮಾಹಿತಿ ಕಲೆಹಾಕಿದ್ದರು. ಆ ವರದಿ ಬಹಿರಂಗವಾಗಿದೆ ಮತ್ತು ಮಾಧ್ಯಮಗಳಿಗೆ ದೊರಕಿದೆ ಎನ್ನಲಾಗಿದೆ.

ತನಿಖೆ ಜಾರಿಯಲ್ಲಿರುವ ಮೊಕದ್ದಮೆಗೆ ಸಂಬಂಧಿಸಿದಂತೆ ಗೌಪ್ಯವಾಗಿ ಇರಬೇಕಿದ್ದ ವರದಿಗಳನ್ನು ಡಿಜಿ ಬಹಿರಂಗಪಡಿಸಿದ್ದಾರೆ. ಗೌಪ್ಯ ಮಾಹಿತಿಗಳನ್ನು ಕಾಪಾಡುವುದು ಸರ್ಕಾರದ ವತಿಯಿಂದ ನಡೆಯುವ ಎಲ್ಲಾ ತನಿಖೆಗಳ ಮೂಲಭೂತ ಕರ್ತವ್ಯವಾಗಿದೆ. ನಾವು ನಮ್ಮ ನ್ಯಾಯಸಮ್ಮತ ಹಕ್ಕನ್ನು ಪಡೆಯಲು ಮತ್ತು ಮುಂದೆ ಈ ರೀತಿಯ ಕಾನೂನು ಬಾಹಿರ ಕೆಲಸಗಳು ನಡೆಯದಂತೆ ನೋಡಿಕೊಳ್ಳಲು ಹೈಕೋರ್ಟ್ ಮೆಟ್ಟಿಲೇರಿದ್ದೇವೆ ಎಂದು ಗೂಗಲ್‌ ವಕ್ತಾರರೊಬ್ಬರು ಹೇಳಿದರು.

ಸಂಸ್ಥೆಗೆ ಸಂಬಂಧಿಸಿದ ಇತರ ಗೌಪ್ಯ ಮಾಹಿತಿಗಳನ್ನು ಸಿಸಿಐ ಬಹಿರಂಗಪಡಿಸದಂತೆ ನೋಡಿಕೊಳ್ಳುವ ಗುರಿ ಹೊಂದಿದ್ದೇವೆ. ಅಲ್ಲದೇ, ಸಂಸ್ಥೆ ಇನ್ನೂ ಆ ವರದಿಯನ್ನು ಪಡೆದಿಲ್ಲ ಮತ್ತು ಪರಿಶೀಲಿಸಿಲ್ಲ ಎಂದು ಕೂಡಾ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು