ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ರಕ್ಷಣಾ ಅಕಾಡೆಮಿ: ಮಹಿಳೆಯರ ಪ್ರವೇಶಕ್ಕೆ ಕೇಂದ್ರ ಒಪ್ಪಿಗೆ

Last Updated 8 ಸೆಪ್ಟೆಂಬರ್ 2021, 19:45 IST
ಅಕ್ಷರ ಗಾತ್ರ

ನವದೆಹಲಿ: ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಲ್ಲಿ (ಎನ್‌ಡಿಎ) ಮಹಿಳೆಯರ ಸೇರ್ಪಡೆಗೆ ಅವಕಾಶ ಕೊಡಲಾಗುವುದು ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಬುಧವಾರ ತಿಳಿಸಿದೆ. ಇದರಿಂದಾಗಿ, ರಕ್ಷಣಾ ಪಡೆಗಳಲ್ಲಿ ಮಹಿಳೆಯರ ಕಾಯಂ ನೇರ ನೇಮಕಾತಿಗೆ ಅವಕಾಶ ಲಭ್ಯವಾಗಲಿದೆ. ಇದೊಂದು ಚಾರಿತ್ರಿಕ ನಿರ್ಧಾರ ಎಂದು ಹೇಳಲಾಗಿದೆ.

ಮಹಿಳೆಯರಿಗೆ ಎನ್‌ಡಿಎ ಮೂಲಕ ಕಾಯಂ ನೇಮಕಾತಿ ಸಾಧ್ಯವಾಗಿಸಲು ಸಶಸ್ತ್ರ ಪಡೆಗಳು ಮತ್ತು ಕೇಂದ್ರ ಸರ್ಕಾರದ ಅತ್ಯುನ್ನತ ಹಂತಗಳಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಐಶ್ವರ್ಯಾ ಬಾಟಿ ಅವರು ಕೋರ್ಟ್‌ಗೆ ತಿಳಿಸಿದರು.

ಪ್ರವೇಶ ಅವಕಾಶಕ್ಕೆ ಸಂಬಂಧಿಸಿದ ವಿವರಗಳನ್ನು ಪ್ರಮಾಣಪತ್ರದ ಮೂಲಕ ಸಲ್ಲಿಸಲು ಅವಕಾಶ ಕೊಡುವಂತೆ ನ್ಯಾಯಾಲಯವನ್ನು ಐಶ್ವರ್ಯಾ ಅವರು ಕೋರಿದರು. ಪ್ರಕ್ರಿಯೆ ಮತ್ತು ಮೂಲಸೌಕರ್ಯಗಳಲ್ಲಿ ಬದಲಾವಣೆಗಳು ಆಗಬೇಕಿರುವುದರಿಂದ ಈ ವರ್ಷದ ಎನ್‌ಡಿಎ ಪರೀಕ್ಷೆಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ಅನುಮತಿ ನೀಡುವಂತೆಯೂ ಅವರು ವಿನಂತಿಸಿಕೊಂಡರು.

ಎನ್‌ಡಿಎ ಪರೀಕ್ಷೆಯನ್ನು ಸೆಪ್ಟೆಂಬರ್‌ 5ರಂದು ನಡೆಸಲು ಉದ್ದೇಶಿಸಲಾಗಿತ್ತು. ಆದರೆ, ಈ ಪ್ರಕರಣವು ವಿಚಾರಣೆ ಹಂತದಲ್ಲಿದ್ದ ಕಾರಣ ನವೆಂಬರ್‌ 14ಕ್ಕೆ ಮುಂದೂಡಲಾಗಿದೆ.

ಎನ್‌ಡಿಎ ಪ್ರವೇಶದ ವಿಚಾರ ಸಶಸ್ತ್ರ ಪಡೆಗಳ ಗಮನದಲ್ಲಿ ಇದ್ದರೂ ಅದಿನ್ನೂ ಪ್ರಾಥಮಿಕ ಹಂತದಲ್ಲಿಯೇ ಇದೆ ಎಂಬುದನ್ನು ಐಶ್ವರ್ಯಾ ಅವರು ನ್ಯಾಯಾಲಯದ ಗಮನಕ್ಕೆ ತಂದರು.

ಲಿಂಗ ತಾರತಮ್ಯ:ಎನ್‌ಡಿಎ ಪ್ರವೇಶದ ಮಹಿಳೆಯರ ಅವಕಾಶವನ್ನು ಲಿಂಗದ ಏಕೈಕ ಕಾರಣಕ್ಕೆ ನಿರಾಕರಿಸುವುದು ಸಮಾನತೆಯ ಮೂಲಭೂತ ಹಕ್ಕಿನ ಉಲ್ಲಂಘನೆ ಎಂದು ವಕೀಲರಾದ ಕುಶ್‌ ಕಾಲ್ರಾ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಹ ಪುರುಷರಿಗೆ ಮಾತ್ರ ಎನ್‌ಡಿಎ ಪ್ರವೇಶ ಪರೀಕ್ಷೆ ಬರೆಯಲು ಅವಕಾಶ ಇದೆ. ಮಹಿಳೆ
ಯರಿಗೆ ಈ ಅವಕಾಶ ನಿರಾಕರಣೆಗೆ ಸಂವಿಧಾನದಲ್ಲಿ ಸಮರ್ಥನೀಯವಾದ ಯಾವ ಕಾರಣವೂ ಇಲ್ಲ ಎಂದು ಅರ್ಜಿಯಲ್ಲಿ ವಾದಿಸಲಾಗಿತ್ತು.

ಮಹಿಳೆಯರನ್ನು ಹೀಗೆ ಹೊರಗೆ ಇರಿಸುವುದು ಸಂವಿಧಾನದಲ್ಲಿರುವ ಸಮಾನತೆ ಮತ್ತು ತಾರತಮ್ಯರಹಿತತೆಯ ಮೌಲ್ಯಗಳಿಗೆ ಮಾಡಿದ ಅವಮಾನ ಎಂದೂ ಅರ್ಜಿದಾರರು ವಾದಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌, ಮಹಿಳೆಯರಿಗೆ ಅವಕಾಶ ನಿರಾಕರಣೆಯ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಬೇಕು. ಎನ್‌ಡಿಎ ಪ್ರವೇಶಕ್ಕೆ ಅವಕಾಶ ಕಲ್ಪಿಸಬೇಕು ಎಂದು ಆಗಸ್ಟ್‌ 18ರಂದು ನಡೆದ ವಿಚಾರಣೆ ವೇಳೆ ಹೇಳಿತ್ತು.ಸರ್ಕಾರವು ಈಗ ಏನು ಮಾಡುತ್ತಿದೆ ಮತ್ತು ಮುಂದಿನ ದಿನಗಳಲ್ಲಿ ಏನು ಮಾಡಲಿದೆ ಎಂಬುದನ್ನು ಲಿಖಿತವಾಗಿ ಸಲ್ಲಿಸುವಂತೆ ಪೀಠವು ಸೂಚಿಸಿದೆ. ಇದನ್ನು ಇದೇ 22ರಂದು ನಡೆಯಲಿರುವ ವಿಚಾರಣೆಯ ವೇಳೆಪರಿಶೀಲನೆಗೆ ಒಳಪಡಿಸಲಾಗುವುದು ಎಂದಿದೆ.

‘ಲಿಂಗ ಸಮಾನತೆಗೆ ಕೆಲಸ ಮಾಡಿ’

ಲಿಂಗ ಸಮಾನತೆ ಸಾಧಿಸುವುದಕ್ಕಾಗಿ ರಕ್ಷಣಾ ಪಡೆಗಳೇ ಸ್ವಯಂಪ್ರೇರಿತವಾಗಿ ಕ್ರಮಗಳನ್ನು ಕೈಗೊಳ್ಳಬೇಕು. ಅದಕ್ಕಾಗಿ ನ್ಯಾಯಾಲಯವು ನಿರ್ದೇಶನ ನೀಡುವುದಕ್ಕೆ ಕಾಯಬಾರದು. ಇಂತಹ ತೀರ್ಮಾನ ತೆಗೆದು
ಕೊಳ್ಳುವಂತೆ ಸಂಬಂಧಪಟ್ಟ ಪ್ರಾಧಿಕಾರಗಳಿಗೆ ನ್ಯಾಯಾಲಯವು ನೆನಪು ಮಾಡುತ್ತಲೇ ಇದೆ ಎಂದು ಪೀಠವು ಹೇಳಿತು.

‘ಏನೂ ಆಗುವುದಿಲ್ಲ ಎಂದಿದ್ದಾಗ ಮಾತ್ರ ನ್ಯಾಯಾಲಯವು ಹಸ್ತಕ್ಷೇಪ ಮಾಡುತ್ತದೆ. ಹಸ್ತಕ್ಷೇಪ ನಡೆಸು
ವುದು ಖುಷಿಯ ವಿಚಾರ ಏನೂ ಅಲ್ಲ. ಸಶಸ್ತ್ರ ಪಡೆಗಳೇ ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ದೇಶದ ಗೌರವಾನ್ವಿತ ಪಡೆಗಳು ಲಿಂಗ ಸಮಾನತೆಗಾಗಿ ಕೆಲಸ ಮಾಡಬೇಕು’ ಎಂದು ಪೀಠವು ಹೇಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT