ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಸ್‌ ಸಂಘಟನೆಯಲ್ಲಿ ವಿವಿಧ ರಾಜ್ಯಗಳ ವ್ಯಕ್ತಿಗಳು

ದಕ್ಷಿಣ ಭಾರತದಲ್ಲಿ 17 ಪ್ರಕರಣಗಳ ದಾಖಲು, 122 ಮಂದಿ ಬಂಧನ
Last Updated 16 ಸೆಪ್ಟೆಂಬರ್ 2020, 7:57 IST
ಅಕ್ಷರ ಗಾತ್ರ

ನವದೆಹಲಿ: ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಕೆಲ ವ್ಯಕ್ತಿಗಳು ಇಸ್ಲಾಮಿಕ್‌ ಸ್ಟೇಟ್‌ (ಐಎಸ್‌) ಭಯೋತ್ಪಾದನೆ ಸಂಘಟನೆ ಸೇರಿದ್ದಾರೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ರಾಜ್ಯಸಭೆಯಲ್ಲಿ ಬುಧವಾರ ಗೃಹ ಖಾತೆ ರಾಜ್ಯ ಸಚಿವ ಜಿ. ಕಿಷಣ್‌ ರೆಡ್ಡಿ ಈ ವಿಷಯ ತಿಳಿಸಿದ್ದಾರೆ.

ಕೇಂದ್ರ ಮತ್ತು ರಾಜ್ಯ ತನಿಖಾ ಸಂಸ್ಥೆಗಳು ಈ ಸಂಘಟನೆಯ ಚಟುವಟಿಕೆಗಳ ಮೇಲೆ ನಿಗಾವಹಿಸಿವೆ ಎಂದು ತಿಳಿಸಿದ್ದಾರೆ.

ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ, ತೆಲಂಗಾಣ, ಕೇರಳ, ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಐಎಸ್‌ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) 17 ಪ್ರಕರಣಗಳನ್ನು ದಾಖಲಿಸಿದ್ದು, 122 ಮಂದಿಯನ್ನು ಬಂಧಿಸಿದೆ ಎಂದು ತಿಳಿಸಿದ್ದಾರೆ.

ಕೇರಳ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ತಮಿಳುನಾಡು, ಪಶ್ಚಿಮ ಬಂಗಾಳ, ರಾಜಸ್ಥಾನ, ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶ ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ಐಎಸ್‌ ಸಂಘಟನೆ ಅತಿ ಹೆಚ್ಚು ಕ್ರಿಯಾಶೀಲವಾಗಿದೆ ಎನ್ನುವುದು ಎನ್‌ಐಎ ತನಿಖೆಯಿಂದ ತಿಳಿದು ಬಂದಿದೆ ಎಂದು ಸಚಿವರು ತಿಳಿಸಿದ್ದಾರೆ.

ತನ್ನ ಸಿದ್ಧಾಂತಗಳ ಪ್ರಚಾರಕ್ಕೆ ಇಂಟರ್‌ನೆಟ್‌ ಆಧಾರಿತ ಸಾಮಾಜಿಕ ಮಾಧ್ಯಮಗಳನ್ನು ಐಎಸ್‌ ಸಂಘಟನೆ ಬಳಸಿಕೊಳ್ಳುತ್ತಿದೆ. ಹೀಗಾಗಿ, ಸೈಬರ್‌ ಜಾಲದ ಮೇಲೆ ಹೆಚ್ಚು ನಿಗಾವಹಿಸಲಾಗಿದ್ದು, ಕಾನೂನು ಪ್ರಕಾರ ಕ್ರಮಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಈ ಸಂಘಟನೆಗೆ ಯಾವ ರೀತಿ ಹಣ ನೀಡಲಾಗುತ್ತಿದೆ ಮತ್ತು ಭಯೋತ್ಪಾದನೆ ಚಟುವಟಿಕೆಗಳನ್ನು ಕೈಗೊಳ್ಳಲು ವಿದೇಶದಿಂದ ಹಣ ಒದಗಿಸಲಾಗುತ್ತಿದೆಯೇ ಎನ್ನುವ ಬಗ್ಗೆ ಸರ್ಕಾರದ ಬಳಿ ಮಾಹಿತಿ ಇದ್ದು, ತನಿಖಾ ಸಂಸ್ಥೆಗಳು ನಿರಂತರವಾಗಿ ಕ್ರಮಕೈಗೊಳ್ಳುತ್ತಿವೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT