ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭತ್ತ ಸೇರಿ 14 ಬೆಳೆಗಳ ಎಂಎಸ್‌ಪಿ ಹೆಚ್ಚಳ

Last Updated 8 ಜೂನ್ 2022, 16:14 IST
ಅಕ್ಷರ ಗಾತ್ರ

ನವದೆಹಲಿ: ಭತ್ತ, ಜೋಳ, ರಾಗಿ ಹಾಗೂ ದ್ವಿದಳ ಧಾನ್ಯಗಳು ಸೇರಿದಂತೆ 14 ಕೃಷಿ ಉತ್ಪನ್ನಗಳಿಗೆ ಕೇಂದ್ರ ಸರ್ಕಾರ 2022–23ನೇ ಸಾಲಿಗಾಗಿ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‌ಪಿ) ಹೆಚ್ಚಳ ಮಾಡಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಆರ್ಥಿಕ ವ್ಯವಹಾರಗಳ ಮೇಲಿನ ಸಂಪುಟ ಸಮಿತಿಯ (ಸಿಸಿಇಎ) ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.

ಬೇಸಾಯದ ಪ್ರದೇಶವನ್ನು ವಿಸ್ತರಿಸಲು ಹಾಗೂ ವಿವಿಧ ಬೆಳೆಗಳನ್ನು ಬೆಳೆಯುವಂತೆ ರೈತರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವಾರ್ತಾ ಮತ್ತು ಪ್ರಸಾರ ಸಚಿವ ಅನುರಾಗ್‌ ಠಾಕೂರ್‌ ಅವರು ಸಭೆ ಬಳಿಕ ಸುದ್ದಿಗಾರರಿಗೆ ತಿಳಿಸಿದರು.

‘ಬಿತ್ತನೆ ಆರಂಭಕ್ಕೂ ಮುನ್ನವೇ ಯಾವ ಯಾವ ಬೆಳೆಗಳಿಗೆ ನೀಡಲಾಗುವ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸಲಾಗಿದೆ ಎಂಬ ಬಗ್ಗೆ ರೈತರಿಗೆ ಮಾಹಿತಿ ಸಿಗುವುದು. ಯಾವ ಬೆಳೆಯನ್ನು ಬೆಳೆಯಬೇಕು ಎಂಬ ಬಗ್ಗೆ ನಿರ್ಧಾರ ಕೈಗೊಳ್ಳಲು ರೈತರಿಗೆ ಇದರಿಂದ ನೆರವಾಗಲಿದೆ’ ಎಂದು ಅವರು ಹೇಳಿದರು.

ಭತ್ತ ಸೇರಿದಂತೆ 14 ಬೆಳೆಗಳಿಗೆ ನೀಡುವ ಎಂಎಸ್‌ಪಿಯಲ್ಲಿ ಪ್ರತಿ ಕ್ವಿಂಟಲ್‌ಗೆ ₹ 92 ರಿಂದ ₹523ರಷ್ಟು ಹೆಚ್ಚಳ ಮಾಡಲಾಗಿದೆ. ಪ್ರತಿ ಕ್ವಿಂಟಲ್‌ ಮೆಕ್ಕೆಜೋಳಕ್ಕೆ ನೀಡಲಾಗುವ ಎಂಎಸ್‌ಪಿಯಲ್ಲಿ ₹ 92 ಹೆಚ್ಚಳ ಮಾಡಲಾಗಿದೆ. ಗರಿಷ್ಠ ಹೆಚ್ಚಳ ₹ 523 ಎಳ್ಳಿಗೆ ನೀಡಲಾಗಿದೆ.

ಭತ್ತಕ್ಕೆ ನೀಡುವ ಎಂಎಸ್‌ಪಿಯನ್ನು ₹ 100ರಷ್ಟು ಹೆಚ್ಚಿಸಲಾಗಿದ್ದು, ಕ್ವಿಂಟಲ್‌ ದರ ₹ 2,040 ಆಗಲಿದೆ. ಕಳೆದ ವರ್ಷದ ದರ ₹ 1,940 ಇತ್ತು. ‘ಎ’ ಗ್ರೇಡ್‌ ಭತ್ತಕ್ಕೆ ನೀಡುವ ಎಂಎಸ್‌ಪಿ ₹ 1,960 ಇದ್ದದ್ದು, ₹ 2,060 ಆಗಲಿದೆ.

ಸಜ್ಜೆಗೆ ನೀಡಲಾಗುವ ಎಂಎಸ್‌ಪಿಯನ್ನು ಪ್ರತಿ ಕ್ವಿಂಟಲ್‌ಗೆ ₹ 100ರಷ್ಟು ಹೆಚ್ಚಳ ಮಾಡಲಾಗಿದೆ. ತೊಗರಿ, ಉದ್ದು, ಕಡಲೆಕಾಯಿಗಳಿಗೆ ಸಂಬಂಧಿಸಿದ ಎಂಎಸ್‌ಪಿಯನ್ನು ₹ 300ರಷ್ಟು ಹೆಚ್ಚಿಸಲಾಗಿದೆ. ಪ್ರತಿ ಕ್ವಿಂಟಲ್‌ ತೊಗರಿಗೆ ₹ 6,600, ಹೆಸರು ಕಾಳಿಗೆ ₹ 7,755 ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಲಾಗಿದೆ.

ಮಧ್ಯಮ ಉದ್ದ ದಾರದ ಹತ್ತಿಗೆ ₹ 5,726ರಿಂದ 6,080ಕ್ಕೆ ಹೆಚ್ಚಿಸಲಾಗಿದ್ದರೆ, ಅಧಿಕ ಉದ್ದ ದಾರದ ಹತ್ತಿಗೆ ₹ 6,025ರಿಂದ 6,380ಗೆ ಹೆಚ್ಚಿಸಲಾಗಿದೆ.

2014–15ನೇ ಸಾಲಿನ ಎಂಎಸ್‌ಪಿಗೆ ಹೋಲಿಸಿದಾಗ, 2022–23ನೇ ಸಾಲಿಗಾಗಿ ಈ 14 ಬೆಳೆಗಳಿಗೆ ಘೋಷಿಸಿರುವ ಎಂಎಸ್‌ಪಿ ಶೇ 46 ರಿಂದ ಶೇ 131ರಷ್ಟು ಹೆಚ್ಚಳವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT