ಗುರುವಾರ , ನವೆಂಬರ್ 26, 2020
22 °C
ಶರಣಾಗುವ ಉಗ್ರಗಾಮಿಗಳಿಗೆ ಪುನರ್ವಸತಿ ಕಲ್ಪಿಸುವ ಪ್ರಯತ್ನ

ಅಂತಿಮ ಹಂತದಲ್ಲಿ ‘ಶರಣಾಗತಿ-ಪುನರ್ವಸತಿ ನೀತಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶ್ರೀನಗರ: ಹಿಂಸೆಯ ಹಾದಿ ತ್ಯಜಿಸಿ ಶರಣಾಗುವ ಭಯೋತ್ಪಾದಕರಿಗೆ ಪುನವರ್ಸತಿ ಕಲ್ಪಿಸುವ ಕೇಂದ್ರ ಸರ್ಕಾರದ ‘ಶರಣಾಗತಿ-ಪುನರ್ವಸತಿ ನೀತಿ‘ ಅಂತಿಮ ಹಂತದಲ್ಲಿದ್ದು, ಪ್ರಸ್ತುತ ಈ ವಿಷಯದ ಕುರಿತು ರಕ್ಷಣೆ ಮತ್ತು ಗೃಹ ಸಚಿವಾಲಯಗಳು ಚರ್ಚೆ ನಡೆಸುತ್ತಿರುವುದಾಗಿ ಉನ್ನತ ಮೂಲಗಳು ‘ಪ್ರಜಾವಾಣಿ‘ಗೆ ತಿಳಿಸಿವೆ.

ಈ ನೀತಿಗೆ ಸಂಬಂಧಿಸಿದಂತೆ ಸೇನೆ ಹಾಗೂ ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಕೇಂದ್ರಕ್ಕೆ ಶಿಫಾಸುಗಳನ್ನು ಕಳುಹಿಸಿದ್ದಾರೆ. ಶೀಘ್ರದಲ್ಲೇ ಹೊಸ ಶರಣಾಗತಿ ನೀತಿ ಜಾರಿಯಾಗುವ ಎಲ್ಲ ಸಾಧ್ಯತೆಗಳಿವೆ.

‘ಭಯೋತ್ಪಾದನೆ ಬಿಟ್ಟು ಮುಖ್ಯವಾಹಿನಿಗೆ ಮರಳುವ ಉಗ್ರರಿಗೆ ಭದ್ರತೆ ಒದಗಿಸುವ ಜತೆಗೆ ಅವರು ಸಂತೋಷದಿಂದ ಜೀವನ ನಡೆಸುವುದಕ್ಕೆ ಅನುಕೂಲವಾಗುವ ರೀತಿಯಲ್ಲಿ ಪುನರ್ವಸತಿ ಕಲ್ಪಿಸುವುದು ಹೊಸ ನೀತಿಯ ಮೂಲ ಉದ್ದೇಶವಾಗಿದೆ. ಈ ನೀತಿಯು ಶರಣಾಗುವ ಸ್ಥಳೀಯ ಉಗ್ರರ ವಿರುದ್ಧ ವಿಚಾರಣೆ ನಡೆಸದೇ, ಕ್ಷಮಾದಾನ ನೀಡುವುದು ಹಾಗೂ ಶರಣಾದವರಿಗೆ ಉದ್ಯೋಗ ನೀಡಲು, ಅವರ ಹಿಂದಿನ ಚಟುವಟಿಕೆಗಳು ಅಡ್ಡಿಯಾಗದಂತೆ ಮಾಡುವುದು ಈ ನೀತಿಯ ಉದ್ದೇಶವಾಗಿದೆ‘ ಎಂದು ಮೂಲಗಳು ತಿಳಿಸಿವೆ.

ಶ್ರೀನಗರದ ಲೆಫ್ಟಿನೆಂಟ್‌ ಜನರಲ್ ಬಿ.ಎಸ್‌.ರಾಜು ಅವರು ‘ಸರ್ಕಾರ ಈ ಹೊಸ ನೀತಿಯನ್ನು ಪರಿಶೀಲಿಸುತ್ತಿದೆ. ಈ ನೀತಿಯಲ್ಲಿ ಅನೇಕ ಸಮಸ್ಯೆಗಳಿವೆ‘ ಎಂದು ಹೇಳಿದ್ದಾರೆ. ‘ಉಗ್ರರ ನಿಗ್ರಹ ಕಾರ್ಯಾಚರಣೆಯಲ್ಲಿ ತೊಡಗಿರುವವರಿಗೆ ಹೊರಗಿನಿಂದ ಪಡೆಗಳನ್ನು ಬಳಸದಂತೆ‘ ಅವರು ನಿರ್ದೇಶಿಸಿದ್ದಾರೆ.

‘ಕೃತ್ಯದಲ್ಲಿ ಸ್ಥಳೀಯ ಉಗ್ರಗಾಮಿಗಳು ಭಾಗಿಯಾಗಿದ್ದರೆ, ಮೊದಲಿಗೆ ಅವರನ್ನು ಶರಣಾಗತಿಯಾಗಲು ತಿಳಿಸುತ್ತೇವೆ. ಯಾವುದೋ ಕಾರಣಕ್ಕೆ ವ್ಯಕ್ತಿಯೊಬ್ಬ ಬಂದೂಕು ಹಿಡಿದು ನಿಂತು ಫೋಟೊ ತೆಗೆಸಿಕೊಂಡಿದ್ದಾನೆಂದರೆ, ಆತ ಸಾಯಬೇಕೆಂದು ಅರ್ಥವಲ್ಲ‘ ಎಂದು ಅಧಿಕಾರಿ ಹೇಳಿದರು.

ಉತ್ತರ ಕಾಶ್ಮೀರ ಮೂಲದ ಜಿಒಸಿ ಕಿಲೊ ಫೋರ್ಸ್‌, ಮೇಜರ್ ಜನರಲ್ ಫೋರ್ಸ್‌ ಎಚ್‌.ಎಸ್‌.ಶಾಹಿ ಅವರು ಗುರುವಾರ, ‘ಉಗ್ರಗಾಮಿಗಳ ಶರಣಾಗತಿ ಮತ್ತು ಪುನವರ್ಸತಿಗೆ ಸಂಬಂಧಿಸಿದ ನೀತಿ ಜಾರಿಯ ಬಗ್ಗೆ ಸೇನೆ ಆಸಕ್ತಿವಹಿಸಿದೆ‘ ಎಂದು ಉಲ್ಲೇಖಿಸಿದ ಹಿನ್ನೆಲೆಯಲ್ಲಿ, ನೀತಿ ಕುರಿತು ಈ ಅಂಶಗಳು ಚರ್ಚೆಗೆ ಬಂದಿವೆ.

‘ಶರಣಾಗತಿ ನೀತಿಗೆ ಸಂಬಂಧಿಸಿದಂತೆ ಸೇನೆ ಮತ್ತು ಪೊಲೀಸರು ಕೆಲವೊಂದು ಶಿಫಾರಸುಗಳನ್ನು ಕಳಿಸಿದ್ದಾರೆ. ಆದರೆ, ಇಲ್ಲಿಯವರೆಗೂ ಕರಡು ನೀತಿ ಇನ್ನೂ ಅಂತಿಮಗೊಂಡಿಲ್ಲ. ಹೊಸ ಪಾಲಿಸಿ ಬರುವವರೆಗೂ, ನಾವು ಹಳೆಯದನ್ನೇ ಅನುಸರಿಸುತ್ತೇವೆ‘ ಎಂದು ಸೇನೆ ಶಾಹಿ ಹೇಳಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು