ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾರಿಕೇಡ್ ಮುರಿದು, ದೆಹಲಿ ಪ್ರವೇಶಿಸಲು ಮುಂದಾದ ಪ್ರತಿಭಟನಾನಿರತ ರೈತರು

ಬ್ಯಾರಿಕೇಡ್ ಮುರಿದವರು ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿಯವರು: ಕೆಎಸ್‌ಎಂ
Last Updated 26 ಜನವರಿ 2021, 6:06 IST
ಅಕ್ಷರ ಗಾತ್ರ

ನವದೆಹಲಿ: ಪೊಲೀಸರ ಮನವರಿಕೆಗೂ ಜಗ್ಗದ ದೆಹಲಿಯ ಗಡಿಭಾಗಗಳಾದ ಸಿಂಘು ಮತ್ತು ಟಿಕ್ರಿಯಲ್ಲಿ ಬೀಡು ಬಿಟ್ಟಿದ್ದ ರೈತ ಸಂಘಟನೆಯ ಸದಸ್ಯರು ಮಂಗಳವಾರ ಮುಂಜಾನೆ ಬ್ಯಾರಿಕೇಡ್‌ಗಳನ್ನು ಮುರಿದು ಹೊರ ವರ್ತುಲ ರಸ್ತೆಯ ಮೂಲಕ ದೆಹಲಿ ಪ್ರವೇಶಿಸಲು ಹೆಜ್ಜೆ ಹಾಕಿದರು.

ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ದೆಹಲಿಯ ಗಡಿಭಾಗಗಳಲ್ಲಿ ಬೀಡುಬಿಟ್ಟಿದ್ದ ಸಾವಿರಾರು ಪ್ರತಿಭಟನಾ ನಿರತ ರೈತರು ಮಂಗಳವಾರ ದೆಹಲಿಯಲ್ಲಿ ಟ‍್ರ್ಯಾಕ್ಟರ್ ರ‍್ಯಾಲಿ ನಡೆಸಲು ನಿರ್ಧರಿಸಿದ್ದರು. ದೆಹಲಿಯ ರಾಜ್‌ಪತ್‌ನಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ ಮುಗಿದ ನಂತರ ರ‍್ಯಾಲಿಗೆ ಪೊಲೀಸರು ಅನುಮತಿ ನೀಡಿದ್ದರು.

‘ಈ ವಿಷಯವನ್ನು ರೈತರಿಗೆ ಮನವರಿಕೆ ಮಾಡಲು ಪ್ರಯತ್ನಿಸಿದರೂ, ಅದನ್ನು ಲೆಕ್ಕಿಸದ ರೈತರ ಗುಂಪು ಬ್ಯಾರಿಕೇಡ್‌ಗಳನ್ನು ಮುರಿದು ರಿಂಗ್‌ರೋಡ್‌ ಮೂಲಕ ದೆಹಲಿಯತ್ತ ಮುನ್ನುಗ್ಗಿತು‘ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ಕಿಸಾನ್ ಮಜ್ದೂರ್‌ ಸಂಘರ್ಷ ಸಮಿತಿಗೆ ಸೇರಿದ ಕೆಲವು ಸದಸ್ಯರು ಬ್ಯಾರಿಕೇಡ್‌ಗಳನ್ನು ಮುರಿದಿದ್ದಾರೆ‘ ಎಂದು ಸಂಯುಕ್ತ ಕಿಸಾನ್ ಮೋರ್ಚಾ (ಕೆಎಸ್‌ಎಂ) ಸದಸ್ಯರೊಬ್ಬರು ತಿಳಿಸಿದ್ದಾರೆ. ಕೆಎಸ್‌ಎಂ, ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ 41 ರೈತ ಸಂಘಗಳ ಒಕ್ಕೂಟವಾಗಿದೆ.

‘ಪೊಲೀಸರ ಅನುಮತಿಯಂತೆ ಈಗಾಗಲೇ ನಿಗದಿತಪಡಿಸಿರುವ ಸಮಯದಲ್ಲಿ ಸಂಯುಕ್ತ ಕಿಸಾನ್ ಮೋರ್ಚಾದ ಟ್ರ್ಯಾಕ್ಟರ್ ರ‍್ಯಾಲಿ ಆರಂಭವಾಗಲಿದೆ. ಕೆಎಸ್‌ಎಂ ಸೋಮವಾರ ಪ್ರಕಟಿಸಿರುವಂತೆ ಟ್ರ್ಯಾಕ್ಟರ್‌ ರ‍್ಯಾಲಿ ದೆಹಲಿ ಹೊರ ವರ್ತುಲ ರಸ್ತೆಯಲ್ಲಿ ಸಾಗಲಿದೆ‘ ಎಂದು ಅವರು ತಿಳಿಸಿದರು.

ಮೂರು ಹೊಸ ಕೃಷಿ ಕಾನೂನುಗಳನ್ನು ರದ್ದುಪಡಿಸುವುದು ಸೇರಿದಂತೆ ತಮ್ಮ ಬೇಡಿಕೆಗಳಿಗೆ ಒತ್ತಾಯಿಸಲು ಪ್ರತಿಭಟನಡೆ ನಡೆಸುತ್ತಿರುವ ವಿವಿಧ ರೈತ ಸಂಘಟನೆಗಳು ಬಜೆಟ್ ಅಧಿವೇಶನ ನಡೆಯುವ ಫೆಬ್ರುವರಿ 1 ರಂದು ಸಂಸತ್ತಿನತ್ತ ಕಾಲ್ನಡಿಗೆ ಜಾಥಾ ಹಮ್ಮಿಕೊಂಡಿವೆ.

'ಕಿಸಾನ್ ಗಣತಂತ್ರ ಮೆರವಣಿಗೆ‘ಯ ಹಿನ್ನೆಲೆಯಲ್ಲಿ ಮಂಗಳವಾರ ಸಿಂಘು, ಟಿಕ್ರಿ ಮತ್ತು ಗಾಜಿಪುರ ಗಡಿ ಭಾಗಗಳಲ್ಲಿ ಭಾರಿ ಭದ್ರತೆ ಒದಗಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT