ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಲತಾಣ ಇನ್‌ಫ್ಲುಯೆನ್ಸರ್‌ಗಳಿಗೆ ಮಾರ್ಗಸೂಚಿ

Last Updated 20 ಜನವರಿ 2023, 22:17 IST
ಅಕ್ಷರ ಗಾತ್ರ

ನವದೆಹಲಿ/ಬೆಂಗಳೂರು: ಸಾಮಾಜಿಕ ಜಾಲತಾಣ ಇನ್‌ಫ್ಲುಯೆನ್ಸರ್‌ಗಳು ಯಾವುದೇ ವಾಣಿಜ್ಯ ಉತ್ಪನ್ನ ಮತ್ತು ಸೇವೆಗಳಿಗೆ ನೀಡುವ ಪ್ರಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆಯು ಮಾರ್ಗಸೂಚಿಯನ್ನು ಹೊರಡಿಸಿದೆ. ಈ ಮಾರ್ಗಸೂಚಿಯನ್ನು ಉಲ್ಲಂಘಿಸುವವರಿಗೆ ₹10 ಲಕ್ಷದಿಂದ ₹50 ಲಕ್ಷದವರೆಗೆ ದಂಡ ವಿಧಿಸಲು ಅವಕಾಶವಿದೆ.

ಇನ್‌ಫ್ಲುಯೆನ್ಸರ್‌ಗಳು ಮತ್ತು ಗಣ್ಯರು ಉತ್ಪನ್ನಗಳು ಹಾಗೂ ಸೇವೆಗಳ ಬಗ್ಗೆ ನೀಡುವ ಪ್ರಚಾರದಿಂದ ಗ್ರಾಹಕ
ರಿಗೆ ಆಗುವ ಸಂಭಾವ್ಯ ವಂಚನೆಯನ್ನು ತಡೆಯಲು ಈ ಮಾರ್ಗಸೂಚಿಗಳನ್ನು ಜಾರಿಗೆ ತರಲಾಗಿದೆ. ಇದನ್ನು ಉಲ್ಲಂಘಿಸುವವರು ಗ್ರಾಹಕ ಹಕ್ಕುಗಳ ರಕ್ಷಣಾ ಕಾಯ್ದೆ ಅಡಿ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಗ್ರಾಹಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ಹೇಳಿದ್ದಾರೆ.

ಇನ್‌ಫ್ಲುಯೆನ್ಸರ್‌ಗಳ ಪ್ರಚಾರದಿಂದ ತಮಗೆ ವಂಚನೆಯಾಗಿದೆ ಎಂದು ಸಾಮಾಜಿಕ ಜಾಲತಾಣ ವೀಕ್ಷಕರು ಅಥವಾ ಫಾಲೋವರ್‌ಗಳು ಭಾವಿಸಿದರೆ, ಕಾನೂನು ಕ್ರಮಕ್ಕೆ ಮುಂದಾಗಬಹುದು ಎಂದು ಅವರು ಹೇಳಿದ್ದಾರೆ.

ಮಾರ್ಗಸೂಚಿಗಳು
*
ಸಾಮಾಜಿಕ ಜಾಲತಾಣ ಇನ್‌ಫ್ಲುಯೆನ್ಸರ್‌ಗಳು, ಗಣ್ಯರು ಮತ್ತು ಕಂಪ್ಯೂಟರ್ ಮೂಲಕ ಸೃಷ್ಟಿಸಲಾದ ಅವತಾರ್ ರೂಪದ ಇನ್‌ಫ್ಲುಯೆನ್ಸರ್‌ಗಳಿಗೆ ಈ ಮಾರ್ಗಸೂಚಿಗಳು ಅನ್ವಯವಾಗುತ್ತದೆ

* ಉತ್ಪನ್ನ ಮತ್ತು ಸೇವೆಗಳಿಗೆ ಸಂಬಂಧಿಸಿದಂತೆ ನೀಡಲಾಗುವ ಮಾಹಿತಿಗಳಿಗೆ ಆಧಾರವಿರಬೇಕು. ಉತ್ಪನ್ನ ಮತ್ತು ಸೇವೆಗಳನ್ನು ತಾವು ಸ್ವತಃ ಬಳಸದೆಯೇ, ಪ್ರಚಾರ ನೀಡಬಾರದು

* ಪ್ರಚಾರದ ಸ್ವರೂಪವನ್ನು ಇನ್‌ಫ್ಲುಯೆನ್ಸರ್‌ಗಳು ಬಹಿರಂಗಪಡಿಸಬೇಕು. ತಮ್ಮ ಪೋಸ್ಟ್‌ಗಳಲ್ಲಿ ನೀಡುತ್ತಿರುವ ಪ್ರಚಾರವು ‘ಜಾಹೀರಾತು’ ಅಥವಾ ‘ಪ್ರಾಯೋಜಿತ’ ಎಂಬ ಬ್ಯಾಡ್ಜ್‌ ಅನ್ನು ಎದ್ದುಕಾಣುವ ರೀತಿಯಲ್ಲಿ ಹಾಕಿರಬೇಕು

* ಉತ್ಪನ್ನ ಮತ್ತು ಸೇವೆಯನ್ನು ಒದಗಿಸುತ್ತಿರುವ ಕಂಪನಿಯ ಜತೆಗೆ ತಮಗಿರುವ ಸಂಬಂಧ ಏನು ಎಂಬುದನ್ನು ಬಹಿರಂಗಪಡಿಸಬೇಕು. ಕಂಪನಿಯಿಂದ ತಾವು ಹಣ ಪಡೆದಿದ್ದೇವೆಯೇ, ಉತ್ಪನ್ನವನ್ನು ಉಚಿತವಾಗಿ ಪಡೆದಿದ್ದೇವೆಯೇ ಅಥವಾ ಉಚಿತ ಪ್ರವಾಸದ ಪ್ಯಾಕೇಜ್‌ ಪಡೆದಿದ್ದೇವೆಯೇ ಅಥವಾ ಯಾವುದೇ ರೀತಿಯ ಅನುಕೂಲ ಪಡೆದಿದ್ದೇವೆಯೇ ಎಂಬುದನ್ನು ಬಹಿರಂಗ ಪಡಿಸಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT