ಮಂಗಳವಾರ, ಡಿಸೆಂಬರ್ 7, 2021
23 °C

ಪಾಕಿಸ್ತಾನಕ್ಕೆ ರಹಸ್ಯ ಮಾಹಿತಿ ರವಾನೆ: ಬಿಎಸ್‌ಎಫ್ ಕಾನ್‌ಸ್ಟೆಬಲ್ ಬಂಧನ

ಪಿಟಿಐ Updated:

ಅಕ್ಷರ ಗಾತ್ರ : | |

ಭುಜ್: ಪಾಕಿಸ್ತಾನಕ್ಕೆ ವಾಟ್ಸ್‌ಆ್ಯಪ್ ಮೂಲಕ ರಹಸ್ಯ ಮತ್ತು ಸೂಕ್ಷ್ಮ ಮಾಹಿತಿಯನ್ನು ರವಾನಿಸಿದ ಆರೋಪದ ಮೇಲೆ ಗುಜರಾತ್‌ನ ಭುಜ್ ಬೆಟಾಲಿಯನ್‌ನ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಕಾನ್‌ಸ್ಟೆಬಲ್ ಒಬ್ಬರನ್ನು ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಬಂಧಿಸಿದೆ. ಆತ, ನೆರೆಯ ದೇಶಕ್ಕಾಗಿ ಬೇಹುಗಾರಿಕೆ ಮಾಡುತ್ತಿದ್ದ ಎಂದು ಎಟಿಎಸ್ ಹೇಳಿದೆ.

ಬಂಧಿತ ಬಿಎಸ್‌ಎಫ್ ಸಿಬ್ಬಂದಿಯನ್ನು ಮೊಹಮ್ಮದ್ ಸಜ್ಜದ್ ಎಂದು ಗುರುತಿಸಲಾಗಿದೆ. ಈತ ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ಸರೋಲಾ ಗ್ರಾಮದವರಾಗಿದ್ದು, ಜುಲೈ 2021 ರಲ್ಲಿ ಭುಜ್‌ನಲ್ಲಿರುವ 74 ಬಿಎಸ್‌ಎಫ್ ಬೆಟಾಲಿಯನ್‌ಗೆ ನಿಯೋಜನೆಗೊಂಡಿದ್ದರು ಎಂದು ಎಟಿಎಸ್ ಪ್ರಕಟಣೆಯಲ್ಲಿ ತಿಳಿಸಿದೆ. ಸಜ್ಜದ್‌ನನ್ನು ಭುಜ್‌ನ ಬಿಎಸ್‌ಎಫ್ ಪ್ರಧಾನ ಕಚೇರಿಯಲ್ಲಿ ಬಂಧಿಸಲಾಗಿದೆ.

ಸಜ್ಜದ್ 2012 ರಲ್ಲಿ ಬಿಎಸ್‌ಎಫ್‌ಗೆ ಕಾನ್‌ಸ್ಟೇಬಲ್ ಆಗಿ ಸೇರಿಕೊಂಡಿದ್ದರು. ಆತ ನೀಡಿದ ಮಾಹಿತಿಗೆ ಆತನ ಸಹೋದರ ವಾಜೀದ್ ಮತ್ತು ಸಹೋದ್ಯೋಗಿ ಇಕ್ಬಾಲ್ ರಶೀದ್ ಖಾತೆಗಳಿಗೆ ಪಾಕಿಸ್ತಾನದಿಂದ ಹಣ ಬರುತ್ತಿತ್ತು ಎಂದು ಎಟಿಎಸ್ ತಿಳಿಸಿದೆ.

ಸಜ್ಜದ್ ಜಮ್ಮುವಿನ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಯಿಂದ ಪಾಸ್‌ಪೋರ್ಟ್ ಪಡೆದಿದ್ದರು. ಅದೇ ಪಾಸ್‌ಪೋರ್ಟ್‌ನಲ್ಲಿ ಅವರು ಡಿಸೆಂಬರ್ 1, 2011 ಮತ್ತು ಜನವರಿ 16, 2012 ರ ನಡುವೆ ಪಾಕಿಸ್ತಾನಕ್ಕೆ ಪ್ರಯಾಣಿಸಿ ಅಲ್ಲಿ 46 ದಿನ ಕಳೆದಿದ್ದಾರೆ. ಪಾಕಿಸ್ತಾನಕ್ಕೆ ಭೇಟಿ ನೀಡಲು ಅಟ್ಟಾರಿ ರೈಲು ನಿಲ್ದಾಣದಿಂದ ಸಂಝೌತಾ ಎಕ್ಸ್‌ಪ್ರೆಸ್‌ಗೆ ಹತ್ತಿದ್ದರು ಎಂದು ಎಟಿಎಸ್ ಹೇಳಿದೆ. ಎಟಿಎಸ್ ಪ್ರಕಾರ, ಸಜ್ಜದ್ ಎರಡು ಫೋನ್ ಬಳಸಿದ್ದಾನೆ. ಅವರ ಒಂದು ಫೋನಿಗಾಗಿ ಕೊನೆಯದಾಗಿ ಜನವರಿ 15, 2021 ರಂದು ಸಿಮ್ ಕಾರ್ಡ್ ಅನ್ನು ಸಕ್ರಿಯಗೊಳಿಸಿದ್ದರು.

ಆ ಸಂಖ್ಯೆಯ ಸಿಡಿಆರ್ (ಕಾಲ್ ಡೇಟಾ ರೆಕಾರ್ಡ್) ಪರೀಕ್ಷಿಸಿದಾಗ, ಸಿಮ್ ಕಾರ್ಡ್ ತ್ರಿಪುರಾದ ಸತ್ಯಗೋಪಾಲ್ ಘೋಷ್ ಎಂಬವರ ಹೆಸರಲ್ಲಿರುವುದು ಗೊತ್ತಾಗಿದೆ. ನವೆಂಬರ್ 7, 2020 ರಂದು ಮೊದಲ ಬಾರಿಗೆ ಆ ಸಿಮ್ ಸಕ್ರಿಯಗೊಳಿಸಲಾಗಿತ್ತು. ಆತ (ಸಜ್ಜದ್) ಆ ಸಂಖ್ಯೆಗೆ ಎರಡು ಕರೆಗಳನ್ನು ಸ್ವೀಕರಿಸಿದ್ದಾನೆ. ಬಳಿಕ ಸಿಮ್ ನಿಷ್ಕ್ರಿಯಗೊಳಿಸಲಾಗಿದೆ. ‘ಜನವರಿ 15, 2021 ರಂದು, ಆ ಸಂಖ್ಯೆಯನ್ನು ಮತ್ತೆ ಸಕ್ರಿಯಗೊಳಿಸಿದಾಗ, ಸುಮಾರು 12:38 ಗಂಟೆಗೆ ಎಸ್ಎಂಎಸ್ ಬಂದಿತ್ತು. ಅದು ವಾಟ್ಸ್‌ಆ್ಯಪ್‌ಗಾಗಿ ಪಡೆದ ಒಟಿಪಿಯಾಗಿತ್ತು. ನಂತರ ಸಂಖ್ಯೆಯನ್ನು ನಿಷ್ಕ್ರಿಯಗೊಳಿಸಲಾಯಿತು,’ಎಂದು ಎಟಿಎಸ್‌ ಹೇಳಿದೆ. ಆರೋಪಿಯು ಈ ನಂಬರ್‌ನಲ್ಲಿ ಒಟಿಪಿಯನ್ನು ಸ್ವೀಕರಿಸಿ ಅದನ್ನು ಪಾಕಿಸ್ತಾನಕ್ಕೆ ಕಳುಹಿಸಿದ್ದನು. ಅಲ್ಲಿ ಅವನು ರಹಸ್ಯ ಮಾಹಿತಿಯನ್ನು ಕಳುಹಿಸಲು ಬಳಸುತ್ತಿದ್ದ ವಾಟ್ಸ್‌ಆ್ಯಪ್ ಅನ್ನು ಸಕ್ರಿಯಗೊಳಿಸಿದ್ದನು ಎಂದು ಎಟಿಎಸ್ ತಿಳಿಸಿದೆ.

ಆ ವಾಟ್ಸ್‌ಆ್ಯಪ್ ಇನ್ನೂ ಸಕ್ರಿಯವಾಗಿದೆ ಮತ್ತು ಪಾಕಿಸ್ತಾನದಲ್ಲಿ ಸಜ್ಜದ್ ಜೊತೆ ಸಂಪರ್ಕದಲ್ಲಿದ್ದ ಕೆಲವರು ಈಗಲೂ ಅದನ್ನು ಬಳಸುತ್ತಿದ್ದಾರೆ ಎಂದು ಎಟಿಎಸ್ ಹೇಳಿದೆ. ಸಜ್ಜದ್ ತಪ್ಪು ಜನ್ಮ ದಿನಾಂಕವನ್ನು ನೀಡುವ ಮೂಲಕ ಬಿಎಸ್ಎಫ್ ಅನ್ನು ದಾರಿ ತಪ್ಪಿಸಿದ್ದಾರೆ ಎಂದು ಎಟಿಎಸ್ ಹೇಳಿದೆ. ಅವರ ಆಧಾರ್ ಕಾರ್ಡ್ ಪ್ರಕಾರ, ಅವರು ಜನವರಿ 1,1992 ರಂದು ಜನಿಸಿದ್ದಾರೆ. ಆದರೆ, ಪಾಸ್‌ಪೋರ್ಟ್‌ನಲ್ಲಿ ಅವರ ಜನ್ಮ ದಿನಾಂಕವನ್ನು ಜನವರಿ 30,1985 ಎಂದು ತೋರಿಸಲಾಗಿದೆ. ‘ಎರಡು ಮೊಬೈಲ್ ಫೋನ್‌ಗಳು ಮತ್ತು ಅವುಗಳ ಸಿಮ್ ಕಾರ್ಡ್‌ಗಳು, ಎರಡು ಹೆಚ್ಚುವರಿ ಸಿಮ್ ಕಾರ್ಡ್‌ಗಳನ್ನು ಸಜ್ಜದ್ ಅವರಿಂದ ವಶಪಡಿಸಿಕೊಳ್ಳಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ’ಎಂದು ಎಟಿಎಸ್ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು