ಶನಿವಾರ, ಸೆಪ್ಟೆಂಬರ್ 25, 2021
24 °C

ಬಿಜೆಪಿ ಶಾಸಕಾಂಗ ಪಕ್ಷದ ಸಭೆ, ಇಂದೇ ಗುಜರಾತ್‌ ನೂತನ ಮುಖ್ಯಮಂತ್ರಿ ಆಯ್ಕೆ ಸಂಭವ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಗಾಂಧಿನಗರ: ಗುಜರಾತ್‌ನ ನೂತನ ಮುಖ್ಯಮಂತ್ರಿ ಆಯ್ಕೆಗಾಗಿ ಭಾನುವಾರ ಸಂಜೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ರಾತ್ರಿಯೊಳಗೆಯೇ ನೂತನ ಮುಖ್ಯಮಂತ್ರಿಯನ್ನು ಘೋಷಿಸುವ ಸಾಧ್ಯತೆ ಇದೆ.

ಕೇಂದ್ರ ವೀಕ್ಷಕರಾಗಿರುವ ಸಚಿವರಾದ ನರೇಂದ್ರ ಸಿಂಗ್ ತೋಮರ್ ಮತ್ತು ಪ್ರಲ್ಹಾದ ಜೋಷಿ ಅವರು ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದು, ತೋಮರ್‌ ಅವರು ಭಾನುವಾರ ಬೆಳಿಗ್ಗೆ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಸಿ.ಆರ್‌.ಪಾಟೀಲ್‌ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

‘ನೂತನ ಮುಖ್ಯಮಂತ್ರಿ ಬಗ್ಗೆ ಇನ್ನಷ್ಟು ಚರ್ಚೆ ನಡೆಸುವ ಸಲುವಾಗಿ ನಾವು ಇಲ್ಲಿಗೆ ಬಂದಿದ್ದೇವೆ’ ಎಂದು ವಿಮಾನನಿಲ್ದಾಣದಲ್ಲಿ ತೋಮರ್ ಅವರು ಹೇಳಿದರೆ, ‘ನಾವು ಗುಜರಾತ್‌ ನಾಯಕರೊಂದಿಗೆ ಚರ್ಚಿಸಲಿದ್ದೇವೆ, ಬಳಿಕ ಕೇಂದ್ರ ನಾಯಕತ್ವ ನಿರ್ಧಾರವೊಂದನ್ನು ತೆಗೆದುಕೊಳ್ಳಲಿದೆ’ ಎಂದು ಪ್ರಲ್ಹಾದ ಜೋಷಿ ಹೇಳಿದರು.

ಕೇಂದ್ರಾಡಳಿತ ಪ್ರದೇಶಗಳಾದ ಲಕ್ಷದ್ವೀಪ, ದಾದ್ರ ಮತ್ತು ನಗರ ಹವೇಲಿ, ದಮನ್‌ ಮತ್ತು ಡಿಯು ಆಡಳಿತಾಧಿಕಾರಿ ಪ್ರಫುಲ್‌ ಖೋಡಾ ಪಟೇಲ್‌ ಅವರು ಮುಖ್ಯಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿ ಎಂದು ಹೇಳಲಾಗುತ್ತಿದೆ. ಕೇಂದ್ರ ಸಚಿವರಾದ ಪುರುಷೋತ್ತಮ ರೂಪಾಲ ಮತ್ತು ಮನ್‌ಸುಖ್‌ ಮಾಂಡವೀಯ ಅವರ ಹೆಸರು ಕೇಳಿಬರುತ್ತಿದೆ. ಈ ಇಬ್ಬರೂ ನಾಯಕರು ಪಾಟೀದಾರ್ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಉಪಮುಖ್ಯಮಂತ್ರಿ ನಿತಿನ್ ಪಟೇಲ್‌ ಮತ್ತು ಕೃಷಿ ಸಚಿವ ಆರ್‌.ಸಿ.ಫಾಲ್ದು ಅವರ ಹೆಸರೂ ಕೇಳಿಬರುತ್ತಿದೆ.

ಎರಡು ಅವಧಿಯಲ್ಲಿ ಮುಖ್ಯಮಂತ್ರಿಯಾಗಿ ಐದು ವರ್ಷ ಪೂರೈಸಿರುವ ವಿಜಯ್‌ ರೂಪಾಣಿ ಅವರು ಶನಿವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. 2022ರ ಡಿಸೆಂಬರ್‌ನಲ್ಲಿ ರಾಜ್ಯ ವಿಧಾನಸಭೆ ಚುನಾವಣೆ ನಡೆಯಲಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು