ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ನರೇಂದ್ರ ಮೋದಿ ಪದವಿ ಮಾಹಿತಿ: ಅರವಿಂದ್ ಕೇಜ್ರಿವಾಲ್‌ಗೆ ₹ 25,000 ದಂಡ

ಸಿಐಸಿ ಆದೇಶ ರದ್ದುಗೊಳಿಸಿದ ಗುಜರಾತ್‌ ಹೈಕೋರ್ಟ್‌
Last Updated 31 ಮಾರ್ಚ್ 2023, 14:16 IST
ಅಕ್ಷರ ಗಾತ್ರ

ಅಹಮದಾಬಾದ್‌: ಪ್ರಧಾನಿ ನರೇಂದ್ರ ಮೋದಿ ಅವರ ಪದವಿ ಮಾಹಿತಿಯನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ನೀಡುವಂತೆ ಕೇಂದ್ರ ಮಾಹಿತಿ ಆಯೋಗ (ಸಿಐಸಿ)ದ ಏಳು ವರ್ಷಗಳ ಹಿಂದಿನ ಆದೇಶವನ್ನು ಗುಜರಾತ್ ಹೈಕೋರ್ಟ್ ಶುಕ್ರವಾರ ರದ್ದುಗೊಳಿಸಿ, ಕೇಜ್ರಿವಾಲ್‌ಗೆ ದಂಡ ವಿಧಿಸಿದೆ.

ಸಿಐಸಿ ಆದೇಶದ ವಿರುದ್ಧ ಗುಜರಾತ್ ವಿಶ್ವವಿದ್ಯಾಲಯದ ಮೇಲ್ಮನವಿಗೆ ಅನುಮತಿ ನೀಡಿದ ನ್ಯಾಯಮೂರ್ತಿ ಬಿರೇನ್ ವೈಷ್ಣವ್ ಅವರು ಕೇಜ್ರಿವಾಲ್ ಅವರಿಗೆ ₹ 25,000 ದಂಡ ವಿಧಿಸಿ, ನಾಲ್ಕು ವಾರಗಳಲ್ಲಿ ಮೊತ್ತವನ್ನು ಗುಜರಾತ್ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ (ಜಿಎಸ್ಎಲ್ಎಸ್ಎ) ಜಮಾ ಮಾಡುವಂತೆ ಹೇಳಿದ್ದಾರೆ.

ಕೇಜ್ರಿವಾಲ್ ವಕೀಲ ಪರ್ಸಿ ಕವಿನಾ ಅವರು ಮನವಿ ಮಾಡಿದರೂ ನ್ಯಾಯಮೂರ್ತಿ ವೈಷ್ಣವ್ ಅವರು ತಮ್ಮ ಆದೇಶ ತಡೆಹಿಡಿಯಲು ನಿರಾಕರಿಸಿದರು.

2016 ರ ಏಪ್ರಿಲ್‌ನಲ್ಲಿ ಆಗಿನ ಸಿಐಸಿಯ ಎಂ. ಶ್ರೀಧರ್ ಆಚಾರ್ಯುಲು ಅವರು ದೆಹಲಿ ವಿಶ್ವವಿದ್ಯಾಲಯ ಮತ್ತು ಗುಜರಾತ್ ವಿಶ್ವವಿದ್ಯಾಲಯಕ್ಕೆ ಮೋದಿ ಪಡೆದ ಪದವಿಗಳ ಬಗ್ಗೆ ಕೇಜ್ರಿವಾಲ್ ಅವರಿಗೆ ಮಾಹಿತಿ ನೀಡುವಂತೆ ನಿರ್ದೇಶನ ನೀಡಿದ್ದರು.

ಮೂರು ತಿಂಗಳ ನಂತರ, ಸಿಐಸಿ ಆದೇಶದ ವಿರುದ್ಧ ವಿಶ್ವವಿದ್ಯಾಲಯ ಮೇಲ್ಮನವಿ ಸಲ್ಲಿಸಿದ ಬಳಿಕ ಗುಜರಾತ್ ಹೈಕೋರ್ಟ್ ಸಿಐಸಿ ಆದೇಶ ತಡೆಹಿಡಿದಿತ್ತು.

ಹಿನ್ನೆಲೆ: ಕೇಜ್ರಿವಾಲ್ ಅವರು ಆಚಾರ್ಯುಲು ಅವರಿಗೆ ಪತ್ರ ಬರೆದು, ‘ಆಯೋಗವು ಮೋದಿ ಅವರ ಶೈಕ್ಷಣಿಕ ಅರ್ಹತೆಗಳ ಕುರಿತು ಮಾಹಿತಿಯನ್ನು ಮರೆಮಾಚಲು ಏಕೆ ಬಯಸಿದೆ’ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದರು.

ಪತ್ರದ ಆಧಾರದ ಮೇಲೆ ಆಚಾರ್ಯುಲು ಅವರು ಮೋದಿ ಅವರ ಶೈಕ್ಷಣಿಕ ಅರ್ಹತೆಯ ದಾಖಲೆಗಳನ್ನು ಕೇಜ್ರಿವಾಲ್ ಅವರಿಗೆ ನೀಡುವಂತೆ ಗುಜರಾತ್ ವಿಶ್ವವಿದ್ಯಾಲಯಕ್ಕೆ ನಿರ್ದೇಶನ ನೀಡಿದ್ದರು.

ಹಿಂದಿನ ವಿಚಾರಣೆಗಳಲ್ಲಿ ಗುಜರಾತ್ ವಿಶ್ವವಿದ್ಯಾಲಯ ಸಿಐಸಿ ಆದೇಶವನ್ನು ತೀವ್ರವಾಗಿ ಆಕ್ಷೇಪಿಸಿತ್ತು.

ಫೆಬ್ರುವರಿಯಲ್ಲಿ ನಡೆದ ಕೊನೆ ವಿಚಾರಣೆ ವೇಳೆ ವಿಶ್ವವಿದ್ಯಾಲಯ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಪ್ರಧಾನಿ ಅವರ ಪದವಿಗಳ ಬಗ್ಗೆ ಮಾಹಿತಿಯು ಈಗಾಗಲೇ ಸಾರ್ವಜನಿಕವಾಗಿ ಸಿಗುವಂತೆ ಇರುವುದರಿಂದ ಮುಚ್ಚಿಡಲು ಏನೂ ಇಲ್ಲ ಎಂದು ಪ್ರತಿಪಾದಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT