ಶುಕ್ರವಾರ, ಮೇ 20, 2022
23 °C
ಕೃಷಿ ಕಾಯ್ದೆ ವಿರೋಧದ ರೈತ ಹೋರಾಟಕ್ಕೆ ವಿನೂತನ ರೀತಿಯಲ್ಲಿ ಬೆಂಬಲ

ಹರಿಯಾಣದಲ್ಲಿ ಲಗ್ನ ಪತ್ರಿಕೆ ಮೇಲೆ ‘ರೈತ ಪರ ಘೋಷಣೆ‘

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕೈಥಾಲ್ ‌(ಹರಿಯಾಣ): ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯ ಗಡಿಭಾಗದಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರರನ್ನು ಬೆಂಬಲಿಸಲು ಸಚಿವರೊಬ್ಬರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಕೆಲವರು ಉದ್ಯೋಗಗಳನ್ನು ತ್ಯಜಿಸಿದರು. ಇನ್ನೂ ಕೆಲವರು ಪ್ರಶಸ್ತಿ–ಪದಕಗಳನ್ನು ವಾಪಸ್ ಮಾಡಿದರು.. ಹಲವರು ಸಾಂಕೇತಿಕವಾಗಿ ಉಪವಾಸ ಮಾಡಿದರು!

ಈಗ ಹರಿಯಾಣದ ಕೆಲವು ರೈತರು ತಮ್ಮ ಮಕ್ಕಳ‌ ಲಗ್ನ ಪತ್ರಿಕೆಯಲ್ಲಿ ‘ರೈತರು ಇಲ್ಲದಿದ್ದರೆ ಆಹಾರವಿಲ್ಲ‘ ಎಂಬ ರೈತ ಪರ ಘೋಷಣೆ ಹಾಗೂ ರೈತ ನಾಯಕ ಸರ್ ಛೋಟು ರಾಮ್ ಅವರ ಭಾವಚಿತ್ರವನ್ನೂ ಮುದ್ರಿಸುವ ಮೂಲಕ ವಿನೂತನ ರೀತಿಯಲ್ಲಿ ರೈತರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಹೀಗೆ ಲಗ್ನಪತ್ರಿಕೆಯ ಮೇಲೆ ರೈತ ಪರ ಘೋಷಣೆ ಮುದ್ರಿಸಿರುವ ರೈತರಲ್ಲಿ ಇಲ್ಲಿನ ದುಂದ್ರೆಹ್ರಿ ಗ್ರಾಮದ ರೈತ ಪ್ರೇಮ್ ಸಿಂಗ್ ಗೋಯತ್ ಕೂಡ ಒಬ್ಬರು. 

‘ಕೃಷಿ ಕಾಯ್ದೆಗಳ ವಿರುದ್ಧ ರೈತರು ಹೋರಾಡುತ್ತಿದ್ದಾರೆ. ಇದೇ ವೇಳೆ ನನ್ನ ಮಗನ ಮದುವೆಯೂ ನಿಶ್ಚಯವಾಗಿತ್ತು. ಈ ಮದುವೆಯ ಆಮಂತ್ರಣ ಪತ್ರಿಕೆಯಲ್ಲಿ ರೈತ ಪರ ಘೋಷಣೆ ಮುದ್ರಿಸಿ, ಆ ಮೂಲಕ ನಾವೂ ರೈತರೊಟ್ಟಿಗೆ ನಿಲ್ಲಬಹುದಲ್ಲ ಎಂದು ಯೋಚನೆ ಬಂತು. ಆ ಯೋಚನೆಯನ್ನು ಕಾರ್ಯರೂಪಕ್ಕೆ ತಂದೆ. ಆಮಂತ್ರಣ ಪತ್ರಿಕೆ ಮೇಲೆ ‘ರೈತರಿಲ್ಲದ್ದರೆ ಆಹಾರವಿಲ್ಲ‘ ಎಂಬ ಘೋಷವಾಕ್ಯದ ಜತೆಗೆ ರೈತ ನಾಯಕ ಸರ್ ಛೋಟು ರಾಮ್ ಸ್ವಾತಂತ್ರ್ಯ ಹೋರಾಟಗಾರ ಭಗತ್‌ಸಿಂಗ್‌ ಚಿತ್ರಗಳನ್ನೂ ಅಚ್ಚು ಹಾಕಿಸಿದೆ‘ ಎಂದು ಗೋಯತ್ ಹೇಳಿದರು.

ಮುದ್ರಣಾಲಯದ ಮಾಲೀಕರ ಪ್ರಕಾರ, ಇತ್ತೀಚೆಗೆ ಬಹಳಷ್ಟು ರೈತರ ಕುಟುಂಬಗಳು ಮತ್ತು ಇತರೆ ಜನರು ಲಗ್ನ ಪತ್ರಿಕೆಗಳ ಮೇಲೆ ‘ರೈತರಿಲ್ಲದಿದ್ದರೆ ಆಹಾರವಿಲ್ಲ‘ ಎಂಬ ಘೋಷವಾಕ್ಯಗಳ ಜತೆಗೆ, ರೈತ ನಾಯಕ ಛೋಟು ರಾಮ್‌ ಮತ್ತು ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಫೋಟೊಗಳನ್ನು  ಮುದ್ರಿಸಿಕೊಡುವಂತೆ ಬೇಡಿಕೆ ಇಡುತ್ತಿದ್ದಾರಂತೆ.

ನವೆಂಬರ್ 24, 1888ರಂದು ಜನಸಿದ ರೈತ ನಾಯಕ ಸರ್ ಛೋಟು ರಾಮ್‌, ಸ್ವಾತಂತ್ರ್ಯ ಪೂರ್ವದಲ್ಲಿ ರೈತರ ಸಬಲೀಕರಣಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಬ್ರಿಟಿಷ್ ಆಡಳಿತದ ಅವಧಿಯಲ್ಲಿ ರೈತರ ಹಕ್ಕುಗಳಿಗಾಗಿ ಹೋರಾಡಿದ್ದರು. ಹೀಗಾಗಿ ಅವರನ್ನು ರೈತರ ನಾಯಕ ಎಂದೇ ಪರಿಗಣಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು