ಮಂಗಳವಾರ, ಮಾರ್ಚ್ 28, 2023
33 °C

ಹರಿಯಾಣ: 10,000 ಎಕರೆ ಪ್ರದೇಶದಲ್ಲಿ ವಿಶ್ವದ ಅತಿ ದೊಡ್ಡ ಸಫಾರಿ ಪಾರ್ಕ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಚಂಡೀಗಢ: ‘ಹರಿಯಾಣವು ಅರಾವಳಿ ಕಾಡಿನ ವ್ಯಾಪ್ತಿಯಲ್ಲಿ ವಿಶ್ವದ ಅತಿ ದೊಡ್ಡ ಜಂಗಲ್‌ ಸಫಾರಿ ಪಾರ್ಕ್‌ ಅನ್ನು ಅಭಿವೃದ್ಧಿಪಡಿಸಲಿದೆ’ ಎಂದು ಅಲ್ಲಿನ ರಾಜ್ಯ ಸರ್ಕಾರ ಗುರುವಾರ ತಿಳಿಸಿದೆ.

‘ಗುರುಗ್ರಾಮ್‌ ಹಾಗೂ ನುಹ್‌ ಜಿಲ್ಲೆಗಳ 10,000 ಎಕರೆ ಪ್ರದೇಶದಲ್ಲಿ ಈ ಸಫಾರಿ ಪಾರ್ಕ್‌ ಅನ್ನು ನಿರ್ಮಿಸಲು ಯೋಜಿಸಲಾಗಿದೆ. ಇದು ವಿಶ್ವದ ಅತಿ ದೊಡ್ಡ ಯೋಜನೆಯಾಗಲಿದೆ’ ಎಂದು ಸರ್ಕಾರದ ಹೇಳಿಕೆಯಲ್ಲಿ ವಿವರಿಸಲಾಗಿದೆ.

ಸದ್ಯ 2,000 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ ಶಾರ್ಜಾದ ಪಾರ್ಕ್‌ ವಿಶ್ವದ ಅತಿ ದೊಡ್ಡ ಸಫಾರಿ ಪಾರ್ಕ್‌ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಪಾರ್ಕ್‌ ಫೆಬ್ರುವರಿಯಲ್ಲಿ ಪ್ರಾರಂಭವಾಗಿತ್ತು.

‘ಈಗ ಅರಾವಳಿಯಲ್ಲಿ ಅಭಿವೃದ್ಧಿಪಡಿಸಲು ಪ್ರಸ್ತಾಪಿಸಲಾಗಿರುವ ಸಫಾರಿ ಪಾರ್ಕ್‌, ಶಾರ್ಜಾದ ಸಫಾರಿ ಪಾರ್ಕ್‌ಗಿಂತಲೂ ಐದು ಪಟ್ಟು ದೊಡ್ಡದಾಗಿರಲಿದೆ. ಈ ಪಾರ್ಕ್‌ನಲ್ಲಿ ಹರ್ಪಟೇರಿಯಮ್‌ (ಸರೀಸೃಪ ಹಾಗೂ ಉಭಯಚರ ಪ್ರಾಣಿಗಳ ಪ್ರದರ್ಶನ ಸ್ಥಳ), ಪಕ್ಷಿ ಉದ್ಯಾನ, ಚಿರತೆಗಳಿಗಾಗಿ ನಾಲ್ಕು ವಲಯಗಳು, ಸಸ್ಯಾಹಾರಿ ಪ್ರಾಣಿಗಳಿಗೆ ದೊಡ್ಡ ಪ್ರಮಾಣದ ಸ್ಥಳ, ವಿದೇಶಿ ಪ್ರಾಣಿ ಪಕ್ಷಿಗಳಿಗೆ ಬೇರೆ ಸ್ಥಳ, ಪ್ರವಾಸೋದ್ಯಮ ವಲಯಗಳು, ಸಸ್ಯ ಶಾಸ್ತ್ರೀಯ ಉದ್ಯಾನ ಇನ್ನೂ ಮುಂತಾದವು ಇರಲಿವೆ’ ಎಂದೂ ಹೇಳಿಕೆಯಲ್ಲಿ ಮಾಹಿತಿ ನೀಡಲಾಗಿದೆ.

‘ಈ ಯೋಜನೆ ಸಂಬಂಧ ಕೇಂದ್ರ ಅರಣ್ಯ ಸಚಿವ ಭೂಪೇಂದರ್‌ ಯಾದವ್‌ ಹಾಗೂ ಹರಿಯಾಣದ ಮುಖ್ಯಮಂತ್ರಿ ಮನೋಹರ್‌ ಲಾಲ್‌ ಖಟ್ಟರ್‌ ಅವರು ಶಾರ್ಜಾಕ್ಕೆ ಭೇಟಿ ನೀಡಿ ಬಂದಿದ್ದಾರೆ’ ಎಂದು ಅಲ್ಲಿನ ರಾಜ್ಯ ಸರ್ಕಾರ ತಿಳಿಸಿದೆ.

ಗುರುವಾರ ರಾಜ್ಯಕ್ಕೆ ಮರಳಿದ ಖಟ್ಟರ್‌ ಅವರು, ‘ಜಂಗಲ್‌ ಸಫಾರಿ ಪಾರ್ಕ್‌ ಅನ್ನು ಅಭಿವೃದ್ಧಿಪಡಿಸಲು ಹರಿಯಾಣದ ಎನ್‌ಸಿಆರ್ ಪ್ರದೇಶವು (ರಾಷ್ಟ್ರೀಯ ರಾಜಧಾನಿ ಪ್ರದೇಶ) ಅಪಾರ ಸಾಮರ್ಥ್ಯ ಹೊಂದಿದೆ. ಈ ಯೋಜನೆಯು ಪ್ರವಾಸೋದ್ಯಮವನ್ನು ಹೆಚ್ಚಿಸುವುದಲ್ಲದೇ, ಅಲ್ಲಿನ ಸ್ಥಳಿಯರಿಗೆ ಉದ್ಯೋಗವಕಾಶಗಳನ್ನೂ ನೀಡುತ್ತದೆ’ ಎಂದು ಹೇಳಿದರು.

‘ಜಂಗಲ್‌ ಸಫಾರಿ ಯೋಜನೆಯು ಕೇಂದ್ರ ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಮತ್ತು ಹರಿಯಾಣ ಸರ್ಕಾರದೊಂದಿಗಿನ ಜಂಟಿ ಯೋಜನೆಯಾಗಿರಲಿದ್ದು, ಇದಕ್ಕೆ ಕೇಂದ್ರ ಸರ್ಕಾರವೂ ಹಣವನ್ನು ನೀಡಲಿದೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು