ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಥರಸ್ ಅತ್ಯಾಚಾರ ಪ್ರಕರಣ: ಮಹಿಳಾ ಆಯೋಗದ ‘ಮೌನ’ಕ್ಕೆ ಕಿಡಿ

ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆಯಿಂದ ಪತ್ರ
Last Updated 7 ಅಕ್ಟೋಬರ್ 2020, 19:30 IST
ಅಕ್ಷರ ಗಾತ್ರ

ನವದೆಹಲಿ: ರಾಷ್ಟ್ರೀಯ ಮಹಿಳಾ ಆಯೋಗವು (ಎನ್‌ಸಿಡಬ್ಲ್ಯು) ಹಾಥರಸ್ ಅತ್ಯಾಚಾರ ಪ್ರಕರಣವನ್ನು ನಿಭಾಯಿಸುತ್ತಿರುವ ರೀತಿಯನ್ನು ಆಯೋಗದ ಮಾಜಿ ಅಧ್ಯಕ್ಷೆ ಮೋಹಿನಿ ಗಿರಿ ಹಾಗೂ ಮಾಜಿ ಸದಸ್ಯರಾದ ಪದ್ಮಾ ಸೇಥ್ ಮತ್ತು ಸೈದಾ ಹಮೀದ್ ಟೀಕಿಸಿದ್ದಾರೆ.

ಬಹಿರಂಗ ಪತ್ರ ಬರೆದಿರುವ ಅವರು, ರಾಷ್ಟ್ರೀಯ ಮಹಿಳಾ ಆಯೋಗವು ಮಹಿಳೆಯರಿಗೆ ಸಂಬಂಧಿಸಿದ ವಿಷಯಗಳಲ್ಲಿ ‘ದಿವ್ಯಮೌನ’ ತಾಳಿದೆ ಎಂದು ದೂರಿದ್ದಾರೆ.

‘ಆಯೋಗದ ಕಣ್ಣುಗಳು ಅಧಿಕಾರಾಸ್ಥರ ಎದುರು ಕರುಡಾಗಿವೆ. ನಾವೀಗ ನೋಡುತ್ತಿರುವುದು ಮಹಿಳಾ ಆಯೋಗದ ಕೊನೆಯ ದಿನಗಳನ್ನು. ಹಾಥರಸ್‌ ಘಟನೆಯಲ್ಲಿ ರಾಜ್ಯ ಹಾಗೂ ರಾಷ್ಟ್ರೀಯ ಆಯೋಗಗಳು ನಡೆದುಕೊಂಡ ರೀತಿಯು ಇದನ್ನು ಪುಷ್ಟೀಕರಿಸುತ್ತದೆ. ದೇಶದ ನಾಗರಿಕರು ಸಂತ್ರಸ್ತೆಯ ಪರವಾಗಿ ಮಾತನಾಡುತ್ತಿದ್ದರೆ, ಈ ಎರಡೂ ಆಯೋಗಗಳ ಮುಖ್ಯಸ್ಥರು ತಮ್ಮ ಮನೆಗಳಲ್ಲಿ ಕುಳಿತು ಲೆಕ್ಕಾಚಾರ ಹಾಕಿ ಮಾತನಾಡುತ್ತಿದ್ದಾರೆ’ ಎಂದು ಪತ್ರ ಉಲ್ಲೇಖಿಸಿದೆ.

ವಜಾಕ್ಕೆ ಆಗ್ರಹ: ಉತ್ತರ ಪ್ರದೇಶ ಮಹಿಳಾ ಆಯೋಗದ ಅಧ್ಯಕ್ಷೆ ವಿಮಲಾ ಬಾಥಂ ಅವರ ಮೌನವನ್ನು ಪ್ರಶ್ನಿಸಿರುವ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಅವರ ವಜಾಕ್ಕೆ ಆಗ್ರಹಿಸಿದ್ದಾರೆ. ಗೌತಮ್‌ ಬುದ್ಧ ನಗರದ ವಿಮಲಾ ಅವರ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಲಾಯಿತು.

ಅವಧಿ ವಿಸ್ತರಣೆ: ಹಾಥರಸ್ ದಲಿತ ಮಹಿಳೆಯ ಮೇಲೆ ನಡೆದಿದೆ ಎನ್ನಲಾದ ಸಾಮೂಹಿಕ ಅತ್ಯಾಚಾರ ಪ್ರಕರಣದ ತನಿಖೆ ನಡೆಸುತ್ತಿರುವ ಮೂವರು ಸದಸ್ಯರ ವಿಶೇಷ ತನಿಖಾ ದಳಕ್ಕೆ (ಎಸ್‌ಐಟಿ) ವರದಿ ಸಲ್ಲಿಸಲು 10 ದಿನ ಹೆಚ್ಚುವರಿ ಕಾಲಾವಕಾಶ ನೀಡಲಾಗಿದೆ.

ಎಎಪಿ ಶಾಸಕನ ವಿರುದ್ಧ ಪ್ರಕರಣ: ಕೋವಿಡ್ ದೃಢಪಟ್ಟಿದ್ದರೂ ಹಾಥರಸ್ ಸಂತ್ರಸ್ತೆಯ ಕುಟುಂಬ ಸದಸ್ಯರನ್ನು ಭೇಟಿ ಮಾಡಿದ ದೆಹಲಿ ಎಎಪಿ ಶಾಸಕ ಕುಲದೀಪ್ ಕುಮಾರ್ ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸಮನ್ಸ್: ಹಾಥರಸ್ ಅತ್ಯಾಚಾರ ಸಂತ್ರಸ್ತೆಯ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇಲೆ ಬಿಜೆಪಿ ಮುಖಂಡ ರಂಜಿತ್ ಶ್ರೀವಾಸ್ತವ ಅವರಿಗೆ ರಾಷ್ಟ್ರೀಯ ಮಹಿಳಾ ಆಯೋಗ ನೋಟಿಸ್ ಜಾರಿ ಮಾಡಿದೆ. ಉತ್ತರ ನೀಡಲು ಅ.26ರಂದು ಹಾಜರಾಗುವಂತೆ ಸೂಚಿಸಲಾಗಿದೆ.

ಪತ್ರಕರ್ತರ ವಿರುದ್ಧ ದೇಶದ್ರೋಹ ಪ್ರಕರಣ: ಕೇರಳ ಪತ್ರಕರ್ತ ಸಿದ್ದೀಕ್ ಕಪ್ಪನ್ ಸೇರಿದಂತೆ ನಾಲ್ವರ ವಿರುದ್ಧ ಉತ್ತರ ಪ್ರದೇಶ ಪೊಲೀಸರು ದೇಶದ್ರೋಹ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹಾಥರಸ್‌ಗೆ ತೆರಳುತ್ತಿದ್ದ ಇವರನ್ನು ಮಥುರಾದಲ್ಲಿ ಬಂಧಿಸಲಾಗಿತ್ತು.

ಪತ್ರಕರ್ತರ ಬಂಧನಕ್ಕೆ ‍ಪ್ರೆಸ್ ಅಸೋಸಿಯೇಷನ್ ಹಾಗೂ ಭಾರತೀಯ ಮಹಿಳಾ ಪತ್ರಕರ್ತರ ಸಂಘಟನೆ ವಿರೋಧ ವ್ಯಕ್ತಪಡಿಸಿದೆ. ಮಾಧ್ಯಮಗಳನ್ನು ಸುಮ್ಮನಾಗಿಸುವ ಉತ್ತರ ಪ್ರದೇಶ ಸರ್ಕಾರದ ಯತ್ನವನ್ನು ಖಂಡಿಸಿ, ಪತ್ರಕರ್ತರ ಬಿಡುಗಡೆಗೆ ಒತ್ತಾಯಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT