ಭಾನುವಾರ, ಆಗಸ್ಟ್ 14, 2022
20 °C

ಮೆಟ್ರೊ ಡಿಪೊ ನಿರ್ಮಾಣ: ಭೂಮಿ ವರ್ಗಾವಣೆಗೆ ಬಾಂಬೆ ಹೈಕೋರ್ಟ್‌ ತಡೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಇಲ್ಲಿನ ಕಾಂಜೂರ್‌ಮಾರ್ಗ್‌ ಪ್ರದೇಶದಲ್ಲಿ ಲವಣಾಂಶಗಳಿರುವ 102 ಎಕರೆ ಭೂಮಿಯನ್ನು ಮೆಟ್ರೊ ಡಿಪೊ ನಿರ್ಮಾಣಕ್ಕಾಗಿ ನೀಡಲು ಮುಂಬೈ ಉಪನಗರ ಜಿಲ್ಲಾಧಿಕಾರಿ ಹೊರಡಿಸಿದ್ದ ಆದೇಶಕ್ಕೆ ಬಾಂಬೆ ಹೈಕೋರ್ಟ್‌ ಬುಧವಾರ ತಡೆ ನೀಡಿದೆ.

ಈ ಭೂಮಿಯಲ್ಲಿ ಯಾವುದೇ ನಿರ್ಮಾಣ ಚಟುವಟಿಕೆಗಳನ್ನು ನಡೆಸಬಾರದು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಮುಖ್ಯ ನ್ಯಾಯಮೂರ್ತಿ ದೀಪಾಂಕರ್‌ ದತ್ತಾ ಹಾಗೂ ನ್ಯಾಯಮೂರ್ತಿ ಜಿ.ಎಸ್‌.ಕುಲಕರ್ಣಿ ಅವರಿದ್ದ ವಿಭಾಗೀಯ ಪೀಠವು ಆದೇಶಿಸಿದೆ.

ಈ ಭೂಮಿಯ ಮಾಲೀಕತ್ವದ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹಾಗೂ ಶಿವಸೇನಾ ನೇತೃತ್ವದ ಮಹಾವಿಕಾಸ ಅಘಾಡಿ(ಎಂವಿಎ) ಸರ್ಕಾರದ ನಡುವೆ ಹಗ್ಗಜಗ್ಗಾಟ ನಡೆಯುತ್ತಿದೆ. ಭೂಮಿಯನ್ನು ಮೆಟ್ರೊ ಡಿಪೊ ನಿರ್ಮಾಣಕ್ಕಾಗಿ ನೀಡಲು 2020 ಅ.1ರಂದು ಜಿಲ್ಲಾಧಿಕಾರಿ ಹೊರಡಿಸಿದ್ದ ಆದೇಶವನ್ನು ಕೇಂದ್ರ ಸರ್ಕಾರ ಹೈಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಈ ಭೂಮಿ ಕೇಂದ್ರದ ಲವಣ ಇಲಾಖೆಗೆ ಸೇರಿದ್ದು ಎಂದು ಕೇಂದ್ರ ವಾದಿಸಿತ್ತು. ಇದನ್ನು ವಿಭಾಗೀಯ ಪೀಠವು ಪುರಸ್ಕರಿಸಿದೆ. 

‘ನಿಗದಿತ ಭೂಮಿಯಲ್ಲಿ ಮಣ್ಣಿನ ಪರೀಕ್ಷೆ ನಡೆಯುತ್ತಿದೆ’ ಎಂದು ರಾಜ್ಯ ಸರ್ಕಾರದ ಪರವಾಗಿ ವಾದಿಸಿದ ಅಡ್ವೊಕೇಟ್‌ ಜನರಲ್‌ ಅಶುತೋಷ್‌ ಕುಂಭಕೋನಿ ತಿಳಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಪೀಠವು, ‘ಭೂಮಿಯ ವರ್ಗಾವಣೆಯ ಕುರಿತು ಕಲೆಕ್ಟರ್‌ ಅವರ ಆದೇಶವು ಮುಂದುವರಿಸಲು ಸಾಧ್ಯವಿಲ್ಲ ಎಂದು ನಾವು ತಿಳಿಸಿರುವಾಗ, ಅಲ್ಲಿ ನಿರ್ಮಾಣ ಚಟುವಟಿಕೆಗಳಿಗೆ ಅವಕಾಶ ನೀಡಲು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿತು. ಫೆಬ್ರುವರಿಯಲ್ಲಿ ಅಂತಿಮ ಆದೇಶ ಪ್ರಕಟಿಸುವುದಾಗಿ ಪೀಠವು ತಿಳಿಸಿತು.

ಆರೆ ಕಾಲೊನಿಯಲ್ಲಿ ಸಾವಿರಾರು ಮರಗಳನ್ನು ಕಡಿದು ಡಿಪೊ ನಿರ್ಮಾಣಕ್ಕೆ ಮುಂದಾಗಿದ್ದ ಸರ್ಕಾರದ ನಿರ್ಧಾರವನ್ನು ಸ್ಥಳೀಯ ನಿವಾಸಿಗಳು ವಿರೋಧಿಸಿದ್ದರು. ಹೀಗಾಗಿ ಕಾಂಜೂರ್‌ಮಾರ್ಗ್‌ ಪ್ರದೇಶದಲ್ಲಿ ಡಿಪೊ ನಿರ್ಮಾಣಕ್ಕೆ ನಿರ್ಧರಿಸಲಾಗಿತ್ತು.

‘ಸುಪ್ರೀಂ’ ಮೆಟ್ಟಿಲೇರಲು ರಾಜ್ಯ ಸರ್ಕಾರ ಚಿಂತನೆ: ಭೂಮಿ ವರ್ಗಾವಣೆಗೆ ತಡೆ ನೀಡಿರುವ ಹೈಕೋರ್ಟ್‌ ತೀರ್ಪನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ‘ಆರೆ ಕಾಲನಿಯಿಂದ ಕಾಂಜೂರ್‌ಮಾರ್ಗ್‌ ಪ್ರದೇಶಕ್ಕೆ ಮೆಟ್ರೊ ಡಿಪೊ ನಿರ್ಮಾಣ ಯೋಜನೆಯನ್ನು ಸ್ಥಳಾಂತರಿಸಿದ ಎಂವಿಎ ಸರ್ಕಾರದ ನಿರ್ಧಾರ ಹಲವರಿಗೆ ನೋವುಂಟು ಮಾಡಿದೆ. ಹೀಗಾಗಿ ಕೇಂದ್ರ ಸರ್ಕಾರವು ಇಂಥ ನಿರ್ಧಾರ ತೆಗೆದುಕೊಂಡಿದೆ. ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸುವ ಅವಕಾಶ ಸಂವಿಧಾನದಲ್ಲಿ ನೀಡಲಾಗಿದೆ. ನಾವು ಈ ಕುರಿತು ಚಿಂತನೆ ನಡೆಸುತ್ತೇವೆ’ ಎಂದು ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ಸುದ್ದಿಗಾರರಿಗೆ ತಿಳಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು