ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಳೆಗೆ ನಲುಗಿದ ತಮಿಳುನಾಡು, ಪುದುಚೇರಿ: ಮಳೆ ಸಂಬಂಧಿ ಅವಘಡಗಳಲ್ಲಿ ನಾಲ್ವರ ಸಾವು

ಚೆನ್ನೈ ಅಸ್ತವ್ಯಸ್ತ; ರಸ್ತೆಗಳು ಜಲಾವೃತ l ಮಳೆ ಸಂಬಂಧಿ ಅವಘಡಗಳಲ್ಲಿ ನಾಲ್ವರ ಸಾವು
Last Updated 8 ನವೆಂಬರ್ 2021, 20:08 IST
ಅಕ್ಷರ ಗಾತ್ರ

ಚೆನ್ನೈ: ತಮಿಳುನಾಡಿನಲ್ಲಿ ಸೋಮವಾರವೂ ಮಳೆ ಮುಂದುವರಿದಿದ್ದು, ಮಳೆ ಸಂಬಂಧಿ ಅವಘಡಗಳಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ರಾಜಧಾನಿ ಚೆನ್ನೈ ವಲಯ ಹಾಗೂ ರಾಜ್ಯದ ಉತ್ತರ ಭಾಗದ ಜಿಲ್ಲೆಗಳಾದ ಚೆಂಗಲ್‌ಪೇಟ್, ಕಾಂಚಿಪುರಂ, ತಿರುವಳ್ಳೂರು ಮತ್ತು ವೆಲ್ಲೂರಿನಲ್ಲಿ ಮುಂಜಾನೆಯಿಂದ ಮಳೆಯಾಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿದೆ.

ಸೋಮವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ, 24 ಗಂಟೆಗಳಲ್ಲಿ ಚೆನ್ನೈ ಉಪನಗರ ವ್ಯಾಪ್ತಿಯಲ್ಲಿ 14 ಸೆಂ.ಮೀಟರ್‌ವರೆಗೆ ಮಳೆ ಸುರಿದಿದೆ. ಉಳಿದ ಜಿಲ್ಲೆಗಳಲ್ಲಿ 1 ಸೆಂ.ಮೀಟರ್‌ವರೆಗೂ ಮಳೆಯಾಗಿದೆ. ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಭೇಟಿ ನೀಡಿ ಪರಿಶೀಲಿಸಿದರು.

ಚೆನ್ನೈನ ಬಹುತೇಕ ರಸ್ತೆಗಳು, ಅಂಡರ್‌ಪಾಸ್‌ಗಳು ಜಲಾವೃತಗೊಂಡಿವೆ. ಇದರಿಂದ ವಾಹನ ಸವಾರರಿಗೆ ತೊಂದರೆಯಾಗಿದೆ. ಜಲಾವೃತ ಆಡಂಬಾಕಂ ‍ಪೊಲೀಸ್ ಠಾಣೆಯನ್ನು ಬೇರೆಡೆಗೆ ಸ್ಥಳಾಂತರ ಮಾಡಲಾಗಿದೆ. ಪರಿಹಾರ ಕಾರ್ಯಾಚರಣೆಗೆ ಚೆನ್ನೈ ಪಾಲಿಕೆಯು ಸುಮಾರು 23 ಸಾವಿರ ಸಿಬ್ಬಂದಿಯನ್ನು ನಿಯೋಜಿಸಿದೆ. ಮಳೆಯಿಂದ ಸಂತ್ರಸ್ತರಾಗಿರುವ 2 ಲಕ್ಷಕ್ಕೂ ಹೆಚ್ಚು ಜನರಿಗೆ ಆಹಾರವನ್ನು ಒದಗಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸುಮಾರು 3.36 ಲಕ್ಷ ಆಹಾರದ ಪೊಟ್ಟಣಗಳನ್ನು ವಿತರಿಸಲಾಗಿದೆ. ಸೋಮವಾರ ಬೆಳಗಿನವರೆಗಿನ ಮಾಹಿತಿ ಪ್ರಕಾರ, ಜಲಾವೃತ ಪ್ರದೇಶಗಳ 889 ಜನರನ್ನು ಪರಿಹಾರ ಕೇಂದ್ರಗಳಿಗೆ ಸ್ಥಳಾಂತರ ಮಾಡಲಾಗಿದೆ.

ಚೆನ್ನೈನ 15 ವಲಯಗಳ ಮೇಲುಸ್ತುವಾರಿಗೆ 15 ಐಎಎಸ್ ಅಧಿಕಾರಿಗಳನ್ನು ಮುಖ್ಯಮಂತ್ರಿ ನಿಯೋಜಿಸಿದ್ದಾರೆ. 200 ವಿಶೇಷ ವೈದ್ಯಕೀಯ ಶಿಬಿರಗಳನ್ನು ತೆರೆಯಲಾಗಿದೆ. ತಗ್ಗು ಪ್ರದೇಶಗಳನ್ನು ಆವರಿಸಿರುವ ಕೆಸರು ಹಾಗೂ ಕಸವನ್ನು ತೆರವುಗೊಳಿಸಲು ಪಾಲಿಕೆ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ.

ಭಾನುವಾರ ಮಳೆಯಿಂದ ತೊಂದರೆಗೆ ಈಡಾಗಿದ್ದ ನಗರ ರೈಲು ಸೇವೆಯನ್ನು ಮತ್ತೆ ಸರಿದಾರಿಗೆ ತರಲು ಯತ್ನಿಸಲಾಗುತ್ತಿದೆ ಎಂದು ದಕ್ಷಿಣ ರೈಲ್ವೆ ಟ್ವೀಟ್ ಮಾಡಿದೆ. ಅಂತರರಾಜ್ಯ ಬಸ್ ಸೇವೆ ವ್ಯತ್ಯಯಗೊಡಿದೆ. ಮಳೆಯಿಂದಾಗಿ ತರಕಾರಿಗಳ ಬೆಲೆ ಗಗನಕ್ಕೇರಿದ್ದು, ₹30ಕ್ಕೆ ಸಿಗುತ್ತಿದ್ದ ಟೊಮೆಟೋ ₹100ಕ್ಕೆ ಮಾರಾಟವಾಗುತ್ತಿದೆ.

ಪುದುಚೇರಿ ಅಸ್ತವ್ಯಸ್ತ:ಸೋಮವಾರ ವ್ಯಾಪಕ ಮಳೆ ಸುರಿದ ಕಾರಣ ಪುದುಚೇರಿಯಲ್ಲಿ ಜನಜೀವನ ಅಸ್ತವ್ಯಸ್ತವಾಗಿತ್ತು. ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಮಂಗಳವಾರವೂ ರಜೆ ಪ್ರಕಟಿಸಲಾಗಿದೆ. ಪುದುಚೇರಿಯಲ್ಲಿ ಸೋಮವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ 24 ಗಂಟೆಗಳಲ್ಲಿ 6.1 ಸೆಂ. ಮೀಟರ್ ಮಳೆ ಸುರಿದಿದೆ.ಪುದುಚೇರಿಯ ಎರಡು ಪ್ರಮುಖ ಜಲಮೂಲಗಳಾದ ಬಹೂರ್ ಮತ್ತು ಔಸುಡು ಜಲಾಶಯಗಳಲ್ಲಿನೀರಿನ ಮಟ್ಟ ಪೂರ್ಣಮಟ್ಟ ತಲುಪಿದೆ. ಶಂಕರಬರಣಿ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ.

ಗರಿಷ್ಠ ಮಟ್ಟ ತಲುಪಿದೆ ಮೆಟ್ಟೂರು ಜಲಾಶಯ

ಕಳೆದ ಎರಡು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ತಮಿಳುನಾಡಿನ ಮೆಟ್ಟೂರು ಜಲಾಶಯದಲ್ಲಿ ನೀರಿನ ಸಂಗ್ರಹ ಗರಿಷ್ಠ ಮಟ್ಟಕ್ಕೆ ತಲುಪಿದೆ. ಕರ್ನಾಟಕದ ಜಲಾಶಯಗಳಿಂದ ನೀರನ್ನು ಹೊರಬಿಡುತ್ತಿರುವುದು ಹಾಗೂ ಕಾವೇರಿ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ ಜಲಾಶಯ ಭರ್ತಿಯಾಗಿದೆ.

ಸೋಮವಾರ ಬೆಳಿಗ್ಗೆ ಜಲಾಶಯದ ಮಟ್ಟ 118.32 ಅಡಿ ಇತ್ತು. ಗರಿಷ್ಠ ಮಟ್ಟ 120 ಅಡಿ. ಜಲಾಶಯದಲ್ಲಿ 90 ಟಿಎಂಸಿ ಅಡಿ ನೀರಿನ ಸಂಗ್ರಹವಿದೆ. 150 ಕ್ಯೂಸೆಕ್ ನೀರನ್ನು ಕಾಲುವೆಗಳಿಗೆ ಹರಿಸಲಾಗುತ್ತಿದೆ. ನದಿಗೆ 100 ಕ್ಯೂಸೆಕ್ ನೀರು ಬಿಡಲಾಗುತ್ತಿದೆ.

ಎರಡು ದಿನ ಭಾರಿ ಮಳೆ ಮುನ್ಸೂಚನೆ

ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ಬುಧವಾರ ಮತ್ತು ಗುರುವಾರ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.ಬಂಗಾಳ ಕೊಲ್ಲಿಯ ಆಗ್ನೇಯ ದಿಕ್ಕಿನಲ್ಲಿ ಚಂಡಮಾರುತ ಉಂಟಾಗಿದ್ದು, ಇದರ ಪರಿಣಾಮ ಮಳೆಯಾಗಲಿದೆ ಎಂದುಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT