ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶಕ್ಕೇ ಬೆಂಕಿ ಹಚ್ಚಿದ ನೂಪುರ್: ಬಿಜೆಪಿ ಮಾಜಿ ನಾಯಕಿಗೆ ಸುಪ್ರೀಂ ಕೋರ್ಟ್‌ ತರಾಟೆ

ಬಿಜೆಪಿಯಿಂದ ಅಮಾನತಾದ ನಾಯಕಿಗೆ ಸುಪ್ರೀಂ ಕೋರ್ಟ್‌ ತರಾಟೆ
Last Updated 2 ಜುಲೈ 2022, 2:02 IST
ಅಕ್ಷರ ಗಾತ್ರ

ನವದೆಹಲಿ : ಬಿಜೆಪಿ ವಕ್ತಾರೆಯಾಗಿದ್ದ ನೂಪುರ್‌ ಶರ್ಮಾ ಅವರ ಹಿಡಿತವಿಲ್ಲದ ಮಾತು ಇಡೀ ದೇಶಕ್ಕೆ ಬೆಂಕಿ ಹಚ್ಚಿದೆ, ದೇಶದಲ್ಲಿ ಈಗ ಏನಾಗುತ್ತಿದೆಯೋ ಅದೆಕ್ಕೆಲ್ಲಾ ಅವರೊಬ್ಬರೇ ಹೊಣೆ ಎಂದು ಸುಪ್ರೀಂ ಕೋರ್ಟ್‌ ಶುಕ್ರವಾರ ತರಾಟೆಗೆ ತೆಗೆದುಕೊಂಡಿದೆ.

ಸುದ್ದಿವಾಹಿನಿಯೊಂದರ ಚರ್ಚಾಕಾರ್ಯಕ್ರವೊಂದರಲ್ಲಿ ಮಾತನಾಡುವಾಗ ಪ್ರವಾದಿ ಮಹಮ್ಮದರ ಕುರಿತು ನೂಪುರ್ ಶರ್ಮಾ ಅವರು ನೀಡಿದ್ದ ಹೇಳಿಕೆಗೆ ಭಾರಿ ಆಕ್ಷೇಪ ವ್ಯಕ್ತವಾಗಿತ್ತು.ಹಲವು ದೇಶಗಳು ಈ ಬಗ್ಗೆ ತಮ್ಮ ಆಕ್ಷೇಪ ಮತ್ತು ಪ್ರತಿಭಟನೆಯನ್ನು ದಾಖಲಿಸಿದ್ದವು. ತಕ್ಷಣವೇ ಬಿಜೆಪಿಯು ನೂಪುರ್ಶರ್ಮಾ ಅವರನ್ನು ಪಕ್ಷದ ವಕ್ತಾರೆ ಸ್ಥಾನದಿಂದ ವಜಾ ಮಾಡಿತ್ತು. ನೂಪುರ್ ಅವರ ಹೇಳಿಕೆಯನ್ನು ಬೆಂಬಲಿಸಿ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದ ಉದಯಪುರದ ಟೇಲರ್ ಕನ್ಹಯ್ಯಲಾಲ್ ಎಂಬುವವರನ್ನು ಇಬ್ಬರು ಮುಸ್ಲಿಮರು ಕೆಲ ದಿನಗಳ ಹಿಂದೆ ಹತ್ಯೆ ಮಾಡಿದ್ದರು.

ನೂಪುರ್ ಅವರ ಹೇಳಿಕೆ ವಿರುದ್ಧ ದೇಶದ ಹಲವೆಡೆ ಎಫ್‌ಐಆರ್‌ ದಾಖಲಾಗಿದ್ದವು. ಆ ಎಲ್ಲಾ ಎಫ್‌ಐಆರ್‌ಗಳನ್ನು ದೆಹಲಿಗೆ ವರ್ಗಾಯಿಸಬೇಕು ಎಂದು ಕೋರಿ ನೂಪುರ್‌ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿ
ಗಳಾದ ಸೂರ್ಯಕಾಂತ್ ಮತ್ತು ಜೆ.ಬಿ.ಪಾರ್ದಿವಾಲಾ ಅವರಿದ್ದ ಪೀಠವು ಅರ್ಜಿಯ ವಿಚಾರಣೆ ನಡೆಸಿ, ನೂಪುರ್ ಅವರನ್ನು ಮತ್ತು ದೆಹಲಿ ಪೊಲಿಸರನ್ನು ತರಾಟೆಗೆ ತೆಗೆದುಕೊಂಡಿತು.

‘ಅವರಿಗೆ ಮಾತಿನ ಮೇಲೆ ಹಿಡಿತವಿಲ್ಲ. ಸುದ್ದಿ ವಾಹಿನಿ ಕಾರ್ಯಕ್ರಮದಲ್ಲಿ ಸಡಿಲವಾದ ಮಾತುಗಳನ್ನಾಡಿದರು ಮತ್ತು ದೇಶಕ್ಕೆಲ್ಲಾ ಬೆಂಕಿ ಹಚ್ಚಿದರು. ಅದರ ಜತೆಯಲ್ಲೇ, ತಾನು ಹತ್ತು ವರ್ಷ ವಕೀಲೆಯಾಗಿದ್ದೆ ಎಂದು ಹೇಳಿಕೊಂಡಿದ್ದಾರೆ. ನಾಚಿಕೆಗೇಡು’ ಎಂದು ಪೀಠವು ಹೇಳಿತು. ಜತೆಗೆ, ‘ಆ ಹೇಳಿಕೆ ಕುರಿತು ಅವರು ತಕ್ಷಣವೇ ದೇಶದ ಕ್ಷಮೆಯಾಚಿಸಬೇಕಿತ್ತು’ ಎಂದು ಪೀಠವು ಅಭಿಪ್ರಾಯಪಟ್ಟಿತು.

ಆಗ ನೂಪುರ್ ಪರ ವಕೀಲರು, ‘ಅವರು ಈಗಾಗಲೇ ಕ್ಷಮೆ ಕೇಳಿದ್ದಾರೆ’ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠವು,‘ಅವರು ಕ್ಷಮೆ ಕೇಳಿದ್ದು ತಡವಾಯಿತು. ಅದೂ ‘ಯಾರ ಭಾವನೆಗಾದರೂ ನೋವಾಗಿದ್ದರೆ’ ಎಂಬ ಷರತ್ತಿನೊಂದಿಗೆ ಕ್ಷಮೆ ಕೇಳಿದ್ದು. ಅವರು ಸುದ್ದಿವಾಹಿನಿಯ ಚರ್ಚೆಯಲ್ಲೇ ಕ್ಷಮೆ ಕೇಳಬೇಕಿತ್ತು ಮತ್ತು ದೇಶದ ಕ್ಷಮೆಯಾಚಿಸಬೇಕಿತ್ತು’ ಎಂದು ಪೀಠವು ಮತ್ತೆ ಹೇಳಿತು.

‘ಆ ಹೇಳಿಕೆಗಳುತಲ್ಲಣಕಾರಿಯಾಗಿದ್ದವು ಮತ್ತು ದುರಹಂಕಾರದಿಂದ ಕೂಡಿದ್ದವು. ಅಂತಹ ಹೇಳಿಕೆ ನೀಡುವ ಅಗತ್ಯವೇನಿತ್ತು? ಆ ಹೇಳಿಕೆಗಳಿಂದ ದೇಶದಲ್ಲಿ ಅಹಿತಕರ ಘಟನೆಗಳು ನಡೆದಿವೆ. ಅವರು ಧಾರ್ಮಿಕರಲ್ಲ, ಅವರಿಗೆ ಬೇರೆ ಧರ್ಮಗಳ ಬಗ್ಗೆ ಗೌರವವಿಲ್ಲ. ಕೀಳು ಪ್ರಚಾರಕ್ಕಾಗಿ ಅಥವಾ ರಾಜಕೀಯ ಕಾರ್ಯಸೂಚಿಗಾಗಿ ಅಥವಾ ಹೀನ ಕಾರ್ಯಸೂಚಿಗಾಗಿ ಆ ಹೇಳಿಕೆ ನೀಡಲಾಗಿದೆ’ ಎಂದು ಪೀಠವು ಅಭಿಪ್ರಾಯಪಟ್ಟಿತು.

‘ಒಂದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡೆರಡು ಎಫ್‌ಐಆರ್‌ಗಳು ಇರಲು ಸಾಧ್ಯವಿಲ್ಲ. ಈ ಬಗ್ಗೆ ಸುಪ್ರೀಂ ಕೋರ್ಟ್‌ ಈ ಹಿಂದೆ ಬೇರೆ ಪ್ರಕರಣಗಳಲ್ಲಿ ಆದೇಶಿಸಿದೆ’ ಎಂದುನೂಪುರ್ ಪರ ವಕೀಲರು ಹೇಳಿದರು. ನಿರೂಪಕ ಅರ್ನಬ್ ಗೋಸ್ವಾಮಿ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದ ಆದೇಶವನ್ನು ಅವರು ಉಲ್ಲೇಖಿಸಿದರು.

ಆಗ ಪೀಠವು, ‘ಒಬ್ಬ ಪತ್ರಕರ್ತ ಒಂದು ವಿಷಯದ ಬಗ್ಗೆ ಮಾತನಾಡುವುದಕ್ಕೂ, ರಾಜಕೀಯ ಪಕ್ಷವೊಂದರ ವಕ್ತಾರರು ತಾವು ಆಡುವ ಮಾತಿನಿಂದ ಏನಾಗುತ್ತದೆ ಎಂಬುದನ್ನು ಯೋಚಿಸದೆ ಇನ್ನೊಬ್ಬರನ್ನು ದೂಷಿಸುವುದಕ್ಕೂ ವ್ಯತ್ಯಾಸವಿದೆ. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಮಾತನಾಡುವ ಹಕ್ಕಿದೆ. ಹುಲ್ಲಿಗೆ ಬೆಳೆಯುವ ಹಕ್ಕಿದೆ. ಕತ್ತೆಗೆ ತಿನ್ನುವ ಹಕ್ಕಿದೆ’ ಎಂದು
ಹೇಳಿತು.

‘ನಿಮ್ಮ ಕಕ್ಷಿದಾರರ ಅರ್ಜಿಯಲ್ಲಿ ದುರಹಂಕಾರವೇ ತುಂಬಿದೆ. ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ಅವರಿಗಿಂತ ಚಿಕ್ಕದು ಎಂದು ಅವರು ಭಾವಿಸಿದಂತಿದೆ. ನಿಮ್ಮ ಮನವಿಯನ್ನು ಪುರಸ್ಕರಿಸಲು ಸಾಧ್ಯವಿಲ್ಲ’ ಎಂದು ಹೇಳಿತು. ಆಗ ನೂಪರ್ ಶರ್ಮಾ ಅವರು ತಮ್ಮ ಅರ್ಜಿಯನ್ನು ವಾಪಸ್‌ಪಡೆದರು.

ಇವರಿಗೆ ಬೆದರಿಕೆ ಇದೆಯೇ ಅಥವಾ ಇವರೇ ದೇಶಕ್ಕೆ ಬೆದರಿಕೆಯಾಗಿದ್ದಾರೆಯೇ? ಈ ಮಹಿಳೆ ದೇಶದೆಲ್ಲೆಡೆ ಭಾವನೆಗಳನ್ನು ಪ್ರಚೋದಿಸಿದ್ದಾರೆ

- ಸುಪ್ರೀಂ ಕೋರ್ಟ್‌

ಪೊಲೀಸರಿಗೂ ತರಾಟೆ

ಪ್ರಕರಣದ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ ಪೀಠವು ದೆಹಲಿ ಪೊಲೀಸರನ್ನು ತರಾಟೆಗೆ ತೆಗದುಕೊಂಡಿತು. ನೂಪುರ್ ಅವರನ್ನು ಏಕೆ ಬಂಧಿಸಿಲ್ಲ ಎಂದು ಕೇಳಿತು. ‘ನಮ್ಮ ಕಕ್ಷಿದಾರರ ವಿರುದ್ಧ ದೆಹಲಿ, ಮುಂಬೈ, ಹೈದರಾಬಾದ್‌, ಜಮ್ಮು–ಕಾಶ್ಮೀರದಲ್ಲಿ ಎಫ್‌ಐಆರ್‌ಗಳು ದಾಖಲಾಗಿವೆ. ಅವರು ದೆಹಲಿಯಲ್ಲಿ ತನಿಖೆಗೆ ಹಾಜರಾಗಿದ್ದಾರೆ. ಅವರು ಎಲ್ಲಿಯೂ ಓಡಿ ಹೋಗಿಲ್ಲ’ ಎಂದು ನೂಪುರ್ ಪರ ವಕೀಲರು ಹೇಳಿದರು.

ಆಗ ಪೀಠವು,‘ಬೇರೆಯವರ ವಿರುದ್ಧ ಎಫ್‌ಐಆರ್ ದಾಖಲಾದ ತಕ್ಷಣವೇ ಅವರನ್ನು ಬಂಧಿಸುತ್ತೀರಿ. ಆದರೆ ಇವರನ್ನುಬಂಧಿಸಿಲ್ಲ. ಅವರ ವಿರುದ್ಧ ದಾಖಲಾದ ಎಫ್‌ಐಆರ್‌ನ ತನಿಖೆಯ ಪ್ರಗತಿ ಏನಾಯಿತು. ದೆಹಲಿ ಪೊಲೀಸರು ಏನು ಮಾಡಿದ್ದಾರೆ? ನಾವು ಆ ಬಗ್ಗೆಯೂ ಮಾತನಾಡಬೇಕೆ’ ಎಂದು ಪ್ರಶ್ನಿಸಿತು.

ಜತೆಗೆ, ‘ತನಿಖೆಗೆ ಹಾಜರಾದಾಗ ಅವರಿಗೆ ಅದ್ದೂರಿ ಸ್ವಾಗತ ದೊರಕಿರಬೇಕಿಲ್ಲವೇ? ಎಫ್‌ಐಆರ್‌ ದಾಖಲಾಗಿದೆ. ಆದರೂ ಅವರನ್ನು ಬಂಧಿಸಿಲ್ಲ. ಅವರು ಪ್ರಭಾವ ಬೀರಿರುವುದನ್ನು ಇದು ತೋರಿಸುತ್ತದೆ. ಅವರ ಬೆನ್ನಿಗೆ ರಾಜಕೀಯ ಪಕ್ಷವಿದೆ ಎಂದ ಮಾತ್ರಕ್ಕೆ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡಬಹುದು ಎಂದು ಅವರು ಭಾವಿಸಿದ್ದಾರೆಯೇ’ ಎಂದು ಪೀಠವು ಕೇಳಿತು.

‘ನಿರೂಪಕರ ವಿರುದ್ಧ ಎಫ್‌ಐಆರ್ ದಾಖಲಿಸಬೇಕಿತ್ತು’

ಸುದ್ದಿವಾಹಿನಿಯ ನಿರೂಪಕರು ಚರ್ಚಾ ಕಾರ್ಯಕ್ರಮವನ್ನು ದುರ್ಬಳಕೆ ಮಾಡಿಕೊಂಡಿದ್ದರೆ, ಅವರ ವಿರುದ್ಧ ಮೊದಲು ಎಫ್‌ಐಆರ್ ದಾಖಲಿಸಬೇಕಿತ್ತಲ್ಲವೇ ಎಂದು ಸುಪ್ರೀಂ ಕೋರ್ಟ್‌ ಪೀಠವು ಪ್ರಶ್ನಿಸಿದೆ.

‘ನಿರೂಪಕರು ಕೇಳಿದ ಪ್ರಶ್ನೆಗೆ ನೂಪುರ್ ಶರ್ಮಾ ಆ ಹೇಳಿಕೆ ನೀಡಿದ್ದರು. ಅಲ್ಲಿ ಗಂಭೀರ ವಿಷಯದ ಬಗ್ಗೆ ಚರ್ಚೆ ನಡೆಯುತ್ತಿತ್ತು. ಎದುರಾಳಿಗಳು ಆಡಿದ ಮಾತಿಗೆ, ಆ ಸಂದರ್ಭಕ್ಕಷ್ಟೇ ನೂಪುರ್ ಪ್ರತಿಕ್ರಿಯೆ ನೀಡಿದ್ದರು’ ಎಂದು ನೂಪುರ್ ಪರ ವಕೀಲರು ಮಾಡಿದ ಪ್ರತಿಪಾದನೆಗೆ ಪೀಠವು ಈ ರೀತಿ ಪ್ರತಿಕ್ರಿಯಿಸಿದೆ.

‘ಸುದ್ದಿವಾಹಿನಿಯ ಚರ್ಚೆ ನಡೆಯುತ್ತಿದ್ದುದಾದರೂ ಏನಕ್ಕೆ? ಅದು ಕಾರ್ಯಸೂಚಿಯ ಭಾಗವಾಗಿತ್ತೇ?ನ್ಯಾಯಾಂಗದ ವ್ಯಾಪ್ತಿಯಲ್ಲಿರುವ ವಿಷಯವನ್ನು ಏಕೆ ಆಯ್ಕೆ ಮಾಡಿಕೊಳ್ಳಬೇಕಿತ್ತು? ನ್ಯಾಯಾಂಗದ ವ್ಯಾಪ್ತಿಯಲ್ಲಿರುವ ವಿಷಯವನ್ನು ಚರ್ಚೆಗೆ ಎತ್ತಿಕೊಳ್ಳುವುದರಲ್ಲಿ,ಕಾರ್ಯಸೂಚಿಗೆ ಪ್ರಚಾರ ನೀಡುವುದರ ಹೊರತಾಗಿ ಸುದ್ದಿವಾಹಿನಿಗೆ ಬೇರೆ ಯಾವ ಉದ್ದೇಶವಿತ್ತು’ ಎಂದು ಪೀಠವು ಪ್ರಶ್ನಿಸಿದೆ.

ಸಿಜೆಐಗೆ ಅರ್ಜಿ

‘ನೂಪುರ್ ಶರ್ಮಾ ವಿರುದ್ಧ ಸುಪ್ರೀಂ ಕೋರ್ಟ್‌ನ ರಜೆಕಾಲದ ಪೀಠವು ಆಡಿರುವ ಮಾತುಗಳನ್ನು ವಾಪಸ್‌ ಪಡೆಯಲು ಅಗತ್ಯವಾದ ನಿರ್ದೇಶನ ಅಥವಾ ಆದೇಶ ನೀಡಿ’ ಎಂದು ಅರ್ಜಿಯೊಂದನ್ನು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ ಅವರಿಗೆ ಸಲ್ಲಿಸಲಾಗಿದೆ.

ಸಾಮಾಜಿಕ ಕಾರ್ಯಕರ್ತ ಎಂದು ಹೇಳಿಕೊಂಡಿರುವ ದೆಹಲಿಯ ಅಜಯ್ ಗೌತಮ್ ಎಂಬುವವರು ಪತ್ರದ ಮೂಲಕ ಈ ಅರ್ಜಿ ಸಲ್ಲಿಸಿದ್ದಾರೆ. ‘ನ್ಯಾಯಬದ್ಧವಾದ ವಿಚಾರಣೆಯ ಅವಕಾಶ ನೂಪುರ್ ಶರ್ಮಾ ಅವರಿಗೂ ದೊರೆಯಬೇಕು’ ಎಂದು ಅವರು ಪ್ರತಿಪಾದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT