ಬುಧವಾರ, ಮೇ 12, 2021
26 °C

ದೆಹಲಿ: ಒಂದೇ ದಿನ 11,491 ಜನಕ್ಕೆ ಪಾಸಿಟಿವ್; ಕೊರೊನಾ 2‌ನೇ ಅಲೆಯ ಆತಂಕ ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೊನಾ ಎರಡನೇ ಅಲೆ ದಿನೇದಿನೇ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಸೋಮವಾರ ಒಂದೇ ದಿನ ಕೊರೊನಾ ಸೋಂಕಿತರ ಸಂಖ್ಯೆ 11,491 ತಲುಪಿದೆ.

ಸೋಮವಾರ ಸಂಜೆಯವರೆಗೆ ಒಟ್ಟು 92,397 ಜನ ಕೊರೊನಾ ಪರೀಕ್ಷೆಗೆ ಒಳಪಟ್ಟಿದ್ದು, ಶೇ 12.44ರಷ್ಟು ಜನರಲ್ಲಿ ಸೋಂಕು ಪತ್ತೆಯಾಗಿದೆ. ಕಳೆದ ಒಂದು ವಾರದಿಂದ ಪರೀಕ್ಷೆಗೆ ಒಳಪಟ್ಟವರಲ್ಲಿ ಶೇಕಡಾವಾರು ಪಾಸಿಟಿವ್‌ ಪ್ರಕರಣಗಳಲ್ಲೂ ಹೆಚ್ಚಳ ಕಂಡುಬರುತ್ತಿದೆ.

ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿದ್ದ ಒಟ್ಟು 72 ಜನ ಸೋಂಕಿತರು ಚಿಕಿತ್ಸೆಗೆ ಸ್ಪಂದಿಸದೆ ಸಾವಿಗೀಡಾಗಿದ್ದಾರೆ.

ಕೊರೊನಾ ಸೋಂಕು ತಗುಲಿರುವ ಒಟ್ಟು 38,095 ಸಕ್ರಿಯ ಪ್ರಕರಣಗಳಿದ್ದು, 19,354 ಜನ ಮನೆಗಳಲ್ಲೇ ಚಿಕಿತ್ಸೆ ಪಡೆಯುತ್ತಿದ್ದು, ಮಿಕ್ಕವರು ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. ಸೋಮವಾರ ಒಟ್ಟು 7,665 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ.

ಜ್ವರ, ನೆಗಡಿ, ಉಸಿರಾಟದ ತೊಂದರೆಯಿಂದ ಸಾವಿರಾರು ಜನ ಆಸ್ಪತ್ರೆಗೆ ಧಾವಿಸುತ್ತಿದ್ದು, ಬಹುತೇಕ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆಯ ಕೊರತೆ ಇರುವುದರಿಂದ, ರೋಗಿಗಳು ಹಾಗೂ ಕುಟುಂಬ ಸದಸ್ಯರ ಆತಂಕ ಹೆಚ್ಚುತ್ತಿದೆ. ಆರೋಗ್ಯ ಸಿಬ್ಬಂದಿಯು ಅನೇಕರಿಗೆ ಮನೆಯಲ್ಲೇ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಿ ಕಳುಹಿಸಿದ್ದಾರೆ.

ಕಳೆದ ಮಾರ್ಚ್‌ನಿಂದ ಇದುವರೆಗೆ ರಾಷ್ಟ್ರ ರಾಜಧಾನಿ ವಲಯ (ಎನ್‌ಸಿಆರ್‌)ದಲ್ಲಿ ಒಟ್ಟು 7,36,688 ಜನತೆಗೆ ಕೊರೊನಾ ಸೋಂಕು ತಗುಲಿದ್ದು, 6,87,238 ಜನ ಗುಣಮುಖರಾಗಿದ್ದಾರೆ. 11,355 ಜನ ಸಾವಿಗೀಡಾಗಿದ್ದಾರೆ.

ಒಂದೇ ದಿನ ಅತಿ ಹೆಚ್ಚು ಪಾಸಿಟಿವ್‌ ಪ್ರಕರಣಗಳು ದಾಖಲಾಗಿರುವುದು ಹಾಗೂ ಶೇಕಡಾವಾರು ಸೋಂಕಿತರ ಸಂಖ್ಯೆಯೂ ಅತಿ ಹೆಚ್ಚಿನ ಪ್ರಮಾಣದಲ್ಲಿ ಸೋಮವಾರ ದಾಖಲಾದಂತಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು