ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರಾಶ್ರಿತರು, ಭಿಕ್ಷುಕರು ದುಡಿಯಬೇಕು; ಎಲ್ಲ ಪೂರೈಸಲು ಸಾಧ್ಯವಿಲ್ಲ: ಹೈಕೋರ್ಟ್‌

ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ
Last Updated 3 ಜುಲೈ 2021, 11:21 IST
ಅಕ್ಷರ ಗಾತ್ರ

ಮುಂಬೈ: ‘ನಿರಾಶ್ರಿತರು, ಭಿಕ್ಷುಕರೂ ದುಡಿಯಬೇಕು, ಅವರಿಗೆ ಆಹಾರ, ನೀರು ಸೇರಿದಂತೆ ಎಲ್ಲ ಸೌಲಭ್ಯಗಳನ್ನು ರಾಜ್ಯ ಸರ್ಕಾರವೇ ಪೂರೈಸಲು ಸಾಧ್ಯವಿಲ್ಲ’ ಎಂದು ಬಾಂಬೆ ಹೈಕೋರ್ಟ್‌ ಹೇಳಿದೆ.

ನಿರಾಶ್ರಿತರು, ಭಿಕ್ಷುಕರ ಸಮಸ್ಯೆಗಳಿಗೆ ಸಂಬಂಧಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ, ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತಾ ಮತ್ತು ನ್ಯಾಯಮೂರ್ತಿ ಜಿ.ಎಸ್‌.ಕುಲಕರ್ಣಿ ಅವರಿರುವ ವಿಭಾಗೀಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ನಿರಾಶ್ರಿತರು ಮತ್ತು ಭಿಕ್ಷುಕರಿಗೆ ಪ್ರತಿ ದಿನ ಮೂರು ಹೊತ್ತು ಪೌಷ್ಟಿಕಾಂಶಯುಕ್ತ ಆಹಾರ, ಕುಡಿಯುವ ನೀರು, ವಸತಿ ನೀಡಬೇಕು. ಜತೆಗೆ, ಸಾರ್ವಜನಿಕ ಶೌಚಾಲಯಗಳ ಉಚಿತ ಬಳಕೆಗೆ ಅನುಮತಿ ನೀಡುವಂತೆ ಬೃಹನ್‌ ಮುಂಬೈ ಮಹಾನಗರ ಪಾಲಿಕೆಗೆ (ಬಿಎಂಸಿ) ನಿರ್ದೇಶಿಸುವಂತೆ ಕೋರಿ ಬ್ರಿಜೇಶ್ ಆರ್ಯ ಎಂಬುವವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

‘ಈಗಾಗಲೇ ಸ್ವಯಂ ಸೇವಾ ಸಂಸ್ಥೆಗಳ ನೆರವಿನಿಂದ ಮುಂಬೈ ಮಹಾನಗರದಲ್ಲಿರುವ ಈ ವರ್ಗದ ಜನರಿಗೆ ಆಹಾರ ಪೊಟ್ಟಣಗಳನ್ನು ವಿತರಿಸಿದ್ದೇವೆ. ಜೊತೆಗೆ ಈ ವರ್ಗದ ಮಹಿಳೆಯರಿಗೆ ಸ್ಯಾನಿಟರಿ ಪ್ಯಾಡ್‌ಗಳನ್ನು ವಿತರಿಸಲಾಗಿದೆ‘ ಎಂದು ಬಿಎಂಸಿ ನ್ಯಾಯಾಲಯಕ್ಕೆ ತಿಳಿಸಿತು.

‘ಇಂಥ ವರ್ಗದವರಿಗೆ ಆಹಾರ ಪೂರೈಕೆ ಹೆಚ್ಚಿಸುವುದು ಸೇರಿದಂತೆ ಯಾವುದೇ ವಿಷಯದಲ್ಲೂ ನಿರ್ದೇಶನ ನೀಡುವ ಅಗತ್ಯವಿಲ್ಲ. ಎಲ್ಲರೂ ಕೆಲಸ ಮಾಡುತ್ತಿದ್ದಾರೆ. ಹಾಗೆಯೇ ನಿರಾಶ್ರಿತರು (ಮನೆ ಇಲ್ಲದವರು) ಕೂಡ ದೇಶಕ್ಕಾಗಿ ಕೆಲಸ ಮಾಡಬೇಕು. ಎಲ್ಲವನ್ನೂ ರಾಜ್ಯ ಸರ್ಕಾರ ಪೂರೈಸಲು ಸಾಧ್ಯವಿಲ್ಲ. ಇಂಥ ಮನವಿ ಸಲ್ಲಿಸುವ ಮೂಲಕ, ನೀವು (ಅರ್ಜಿದಾರರು) ಸಮಾಜದಲ್ಲಿಇಂಥ ವರ್ಗದ ಜನರ ಸಂಖ್ಯೆಯನ್ನು ಹೆಚ್ಚಿಸುತ್ತಿದ್ದೀರಿ‘ ಎಂದು ನ್ಯಾಯಪೀಠ ಹೇಳಿತು.

ಇದೇ ವೇಳೆ ‘ಅರ್ಜಿಯಲ್ಲಿರುವ ಎಲ್ಲ ಬೇಡಿಕೆಗಳಿಗೂ ಒಪ್ಪಿಗೆ ನೀಡಿದರೆ, ಜನರಿಗೆ ಕೆಲಸ ಮಾಡಬೇಡಿ ಎಂದು ಹೇಳಿದಂತಾಗುವುದಿಲ್ಲವೇ‘ ಎಂದು ನ್ಯಾಯಪೀಠ ಅರ್ಜಿದಾರರನ್ನೇ ಪ್ರಶ್ನಿಸಿತು.

‘ನಗರ ಹಾಗೂ ರಾಜ್ಯದಾದ್ಯಂತವಿರುವ ಸಾರ್ವಜನಿಕ ಶೌಚಾಲಯಗಳ ಬಳಕೆಗೆ ಕನಿಷ್ಠ ಶುಲ್ಕವನ್ನು ವಿಧಿಸಲಾಗುತ್ತಿದೆ. ಆದರೆ ಇನ್ನು ಮುಂದೆ ನಿರಾಶ್ರಿತರು ಶೌಚಾಲಯವನ್ನು ಉಚಿತವಾಗಿ ಬಳಸಲು ಅವಕಾಶ ನೀಡಿ’ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT